Advertisement

ಮಾತುಕತೆ ಅಪೂರ್ಣ : ನಾಳೆ ರೈತರೊಂದಿಗೆ ಮತ್ತೂಂದು ಸುತ್ತಿನ ಚರ್ಚೆ

01:31 AM Dec 04, 2020 | sudhir |

ಹೊಸದಿಲ್ಲಿ: ಮೂರು ರೈತ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳ ಜತೆಗೆ ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರ ಗುರುವಾರ ನಡೆಸಿದ ಮಾತುತೆ ಅಪೂರ್ಣವಾಗಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಸುತ್ತೇವೆ ಎಂದು ರೈತ ಮುಖಂಡರಿಗೆ ಕೇಂದ್ರ ಸರಕಾರ ಭರವಸೆ ನೀಡಿರುವುದಷ್ಟೇ ದಿನದ ಸಭೆಯ ಪ್ರಮುಖ ಅಂಶ.

Advertisement

ಏಳು ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಕಾಯ್ದೆಗಳ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಶನಿವಾರ ಮತ್ತೂಂದು ಸುತ್ತಿನ ಮಾತುಕತೆ ನಡೆಯಲಿದೆ. ಆ ದಿನ ಸರ್ವ ಸಮ್ಮತ ಅಭಿಪ್ರಾಯ ಮೂಡಬಹುದು ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವ ವ್ಯವಸ್ಥೆ ಮುಂದುವರಿಯಲಿದೆ. ಕಾನೂನಾ ತ್ಮಕವಾಗಿ ರೈತರಿಗೆ ಹೆಚ್ಚಿನ ಹಕ್ಕುಗಳನ್ನು ನೀಡಲಾಗುತ್ತದೆ. ಹೊಸ ಕಾಯ್ದೆ ಗಳು ಜಾರಿಯಾದರೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂದುವರಿಯಲಿದೆ ಎಂದು ತಿಳಿಸಿದರು.

ಸಭೆಯ ಬಳಿಕ ರೈತ ಮುಖಂಡ ಬಲದೇವ್‌ ಸಿಂಗ್‌ ಸಿರ್ಸಾ ಮಾತನಾಡಿ, ಕೇಂದ್ರ ಸರಕಾರ ಈಗಾಗಲೇ ಜಾರಿಗೊಳಿಸಿರುವ 3 ಕಾಯ್ದೆಗಳಲ್ಲಿ ಕೆಲವು ಲೋಪಗಳು ಇವೆ ಎಂಬ ಅಂಶವನ್ನು ಒಪ್ಪಿಕೊಂಡಿದೆ ಎಂದು ಹೇಳಿ ಕೊಂಡಿದ್ದಾರೆ. ಕಾಯ್ದೆ ತಿದ್ದುಪಡಿ ಪ್ರಸ್ತಾವಕ್ಕೆ ಬೆಂಬಲ ಇಲ್ಲ. ಪೂರ್ಣ ಪ್ರಮಾಣದಲ್ಲಿ ವಾಪಸ್‌ ಪಡೆಯ ಬೇಕು ಎನ್ನುವುದೇ ಬೇಡಿಕೆ ಎಂದರು.

ಪದ್ಮಭೂಷಣ ವಾಪಸ್‌ ನೀಡಿದ ಬಾದಲ್‌
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳದ ವರಿಷ್ಠ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಗುರುವಾರ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಳಿಸಿದ್ದಾರೆ. ಅಕಾಲಿ ದಳವು ಎನ್‌ಡಿಎಯಿಂದ ಹೊರಬಂದ 2 ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ, ರಾಜ್ಯಸಭಾ ಸದಸ್ಯ ಸುಖ್‌ದೇವ್‌ ಸಿಂಗ್‌ ಧಿಂಡಾ ಕೂಡ ಪದ್ಮಭೂಷಣ ವಾಪಸ್‌ ಮಾಡಿದ್ದಾರೆ.

Advertisement

ಅಮಿತ್‌ ಶಾ  - ಪಂಜಾಬ್‌ ಸಿಎಂ ಚರ್ಚೆ
ಪಂಜಾಬ್‌ ಮುಖ್ಯಮಂತ್ರಿ ಕ್ಯಾ| ಅಮರೀಂದರ್‌ ಸಿಂಗ್‌ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು. ಪ್ರತಿಭಟನೆಯು ಪಂಜಾಬ್‌ನ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಒದಗಿಸಿ ಎಂದೂ ಕೋರಿಕೊಂಡಿದ್ದಾರೆ. ಇದೇ ವೇಳೆ ಪ್ರತಿಭಟನೆ ವೇಳೆ ಅಸುನೀಗಿದ ಇಬ್ಬರಿಗೆ ಪಂಜಾಬ್‌ ಸರಕಾರ  ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ.

ಸರಕಾರ ಕೊಟ್ಟ ಆಹಾರ ಬೇಡವೆಂದ ರೈತರು!

ಕೇಂದ್ರ ಸಚಿವರೊಂದಿಗಿನ ಮಾತುಕತೆ ವೇಳೆ ಗುರುವಾರ ಮಧ್ಯಾಹ್ನ ರೈತ ಮುಖಂಡರಿಗೆ ಸರಕಾರ ಮಾಡಿದ್ದ ಊಟದ ವ್ಯವಸ್ಥೆಯನ್ನು ಅನ್ನದಾತರು ತಿರಸ್ಕರಿಸಿದ್ದಾರೆ. “ನಮ್ಮವರೆಲ್ಲ ರಸ್ತೆಗಳಲ್ಲಿ ಕುಳಿತು ಪ್ರತಿಭಟಿಸು ತ್ತಿರುವಾಗ ನಾವು ಸರಕಾರ ಕೊಡುವ ಆಹಾರವನ್ನು ಸ್ವೀಕರಿಸುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ. ಜತೆಗೆ ಸಿಂಘು ಗಡಿಯಿಂದ ಸಣ್ಣ ವ್ಯಾನ್‌ನಲ್ಲಿ ಆಹಾರ ತರಿಸಿಕೊಂಡು ಸೇವಿಸಿದ್ದಾರೆ. ಕೆಲವು ರೈತ ಪ್ರತಿನಿಧಿಗಳಂತೂ ವಿಜ್ಞಾನ ಭವನದ ನೆಲದಲ್ಲೇ ಕುಳಿತುಕೊಂಡು ಆಹಾರ ಸೇವಿಸಿದ್ದೂ ಕಂಡುಬಂತು.

ಪ್ರಮುಖ ರಸ್ತೆ ಬಂದ್‌
ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ಗಾಜಿಯಾಬಾದ್‌ ಮತ್ತು ದಿಲ್ಲಿಯನ್ನು ಸಂಪರ್ಕಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಿದ್ದಾರೆ. ಪ್ರತಿಭಟನ ಸ್ಥಳಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬೇಡಿಕೆಗೆ ಸರಕಾರ ಮಣಿಯದಿದ್ದರೆ ದಿಲ್ಲಿ ಪ್ರವೇಶಕ್ಕಿರುವ ಎಲ್ಲ ಮಾರ್ಗಗಳನ್ನೂ ಬಂದ್‌ ಮಾಡುವುದಾಗಿ ರೈತರು ಎಚ್ಚರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next