ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು, ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 58 ಸ್ಥಾನಗಳಲ್ಲಿ ಜಯಗಳಿಸುವತ್ತ ಹೆಜ್ಜೆ ಇಟ್ಟಿದ್ದು, ಭಾರತೀಯ ಜನತಾ ಪಕ್ಷ 12 ಗೆಲುವು ಸಾಧಿಸುವತ್ತ ದಾಪುಗಾಲು ಇಟ್ಟಿದೆ. ಆದರೆ ಸತತ ಎರಡನೇ ಅವಧಿಗೂ ಕಾಂಗ್ರೆಸ್ ಪಕ್ಷ ಒಂದೂ ಸ್ಥಾನಗಳಲ್ಲಿ ಗೆಲುವು ಸಾಧಿಸದೆ ಶೂನ್ಯ ಸಂಪಾದನೆ ಕಂಡಿದೆ!
ದೆಹಲಿ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕಟು ಟೀಕೆ, ವಿಮರ್ಶೆ ವ್ಯಕ್ತವಾಗತೊಡಗಿದೆ. ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಹೈಕಮಾಂಡ್ ಈಗಲೇ ಕಾರ್ಯಪ್ರವೃತ್ತವಾಗಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಶರ್ಮಿಷ್ಠಾ ಮುಖರ್ಜಿ, ಖುಶ್ಬು ಸುಂದರ್ ಟ್ವೀಟ್ ಮೂಲಕ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ರಾಜಧಾನಿ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸತತ ಮೂರು ಬಾರಿ ಆಡಳಿತ ನಡೆಸಿದ್ದರು. 1998ರಿಂದ 2013ರವರೆಗೆ ಮೂರು ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿತ್ತು. ಆದರೆ ಆ ಬಳಿಕ 2015ರಲ್ಲಿ ನಡೆದ ಚುನಾವಣೆಯಲ್ಲಿ ಜೀರೋ ಆಗಿದ್ದ ಆಮ್ ಆದ್ಮಿ ಪಕ್ಷ ದಿಲ್ಲಿ ಗದ್ದುಗೆ ಏರುವ ಮೂಲಕ ಜನಮನ್ನಣೆ ಗಳಿಸಿ ಸತತ ಎರಡು ಬಾರಿ ಆಡಳಿತ ನಡೆಸಿ ಇದೀಗ ಮೂರನೇ ಬಾರಿ ಆಡಳಿತ ನಡೆಸಲು ಸಿದ್ದವಾಗಿದೆ.
ಬಿಜೆಪಿ ಕೂಡಾ ಚೇತರಿಕೆಯ ಹಾದಿಯಲ್ಲಿದ್ದು, 2015ರಲ್ಲಿ 3 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 2020ರ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಗೆಲುವಿನತ್ತ ದಾಪುಗಾಲು ಇಟ್ಟಿದೆ. ಆದರೆ ಕಾಂಗ್ರೆಸ್ ಪಕ್ಷ 2015ರಲ್ಲಿ ಶೂನ್ಯ, ಈ ಬಾರಿ ಚುನಾವಣೆಯಲ್ಲಿಯೂ ಶೂನ್ಯ ಸಂಪಾದನೆ ಮೂಲಕ ಕಾಂಗ್ರೆಸ್ ಹೀನಾಯವಾಗಿ ಮುಖಭಂಗ ಅನುಭವಿಸಿದೆ.
70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿಯೇ ಇಲ್ಲದಂತಾಗಿದೆ. ಹಲವು ಕ್ಷೇತ್ರಗಳಲ್ಲಿ ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.