ನವದೆಹಲಿ: ಪುಣೆಗೆ ನೀರು ಕುಡಿಸಿದ ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ಮತ್ತೂಂದು ಗೆಲುವಿನ ನಿರೀಕ್ಷೆಯಲ್ಲಿದೆ. ಶನಿವಾರ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.
ಡೆಲ್ಲಿ ಒಟ್ಟು 2 ಪಂದ್ಯ ಆಡಿದೆ. ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯವನ್ನು ಸೋತಿದೆ. ಆದರೆ ಪುಣೆ ಸೂಪರ್ ಜೈಂಟ್ಸ್ ವಿರುದ್ಧ 97 ರನ್ ಗೆಲುವು ಪಡೆದುಕೊಂಡಿದೆ. ಇನ್ನೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ ಒಟ್ಟು 3 ಪಂದ್ಯಗಳನ್ನು ಆಡಿದೆ. 2 ಪಂದ್ಯದಲ್ಲಿ ಸತತ ಗೆಲುವು ಗಳಿಸಿತ್ತು. ಆದರೆ ಕೋಲ್ಕತಾ ನೈಟ್ ರೈಡರ್ ವಿರುದ್ಧದ 3ನೇ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಪಂಜಾಬ್‌ಗ ಕನಸು ನುಚ್ಚು ನೂರಾಗಿತ್ತು.
ಎದುರಾಳಿಗೆ ಡೆಲ್ಲಿ ಡೆವಿಲ್ಸ್?: ಜಹೀರ್ ನೇತೃತ್ವದ ಡೆಲ್ಲಿ ತಂಡ ಶ್ರೇಷ್ಠ ಆಟಗಾರರನ್ನು ಒಳಗೊಂಡಿದೆ. ಸಂಜು ಸ್ಯಾಮ್ಸನ್ ಪುಣೆ ವಿರುದ್ಧದ ಪಂದ್ಯದಲ್ಲಿ ನ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪ್ರಸ್ತುತ ಆವೃತ್ತಿ ಐಪಿಎಲ್‌ನ ಮೊದಲ ಶತಕವನ್ನು ಸಂಜು ದಾಖಲಿಸಿದ್ದಾರೆ. ಜತೆಗೆ ಕ್ರಿಸ್ ಮಾರಿಸ್ ಕೆಳ ಕ್ರಮಾಂಕದಲ್ಲಿ ಕೇವಲ 9 ಎಸೆತದಲ್ಲಿ 38 ರನ್ ಚಚ್ಚಿದ್ದರು. ಇನ್ನು ಆದಿತ್ಯ ತಾರೆ, ಬಿಲ್ಲಿಂಗ್ಸ್, ರಿಷಭ್ ಪಂತ್ ತಂಡದ ಬ್ಯಾಟಿಂಗ್ ವಿಭಾಗದ ದೈತ್ಯರು. ಜಹೀರ್ ಖಾನ್, ಅಮಿತ್ ಮಿಶ್ರಾ ಹಾಗೂ ಕಮಿನ್ಸ್ ಬೌಲಿಂಗ್‌ನಿಂದ ನಿಯಂತ್ರಣ ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ.
ಪಂಜಾಬ್ ಪೆಟ್ಟು ತಿಂದ ಹುಲಿ: ಗೌತಮ್ ಗಂಭೀರ್ ಪಡೆಗೆ ಪಂಜಾಬ್ ಸೋತಿರುವುದರಿಂದ ಒಂದು ರೀತಿಯಲ್ಲಿ ಕಿಂಗ್ಸ್ ಪರಿಸ್ಥಿತಿ ಪೆಟ್ಟು ತಿಂದ ಹುಲಿಯಂತಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ಮಿಲ್ಲರ್, ವೃದ್ದಿಮಾನ್ ಸಹಾ ಬ್ಯಾಟಿಂಗ್‌ನಲ್ಲಿ ಕೈಕೊಟ್ಟರು. ಹೀಗಾಗಿ ಪಂಜಾಬ್ ಉತ್ತಮ ಮೊತ್ತ ಕೂಡಿಸುವಲ್ಲಿ ವಿಫಲವಾಯಿತು. ಅಲ್ಲದೆ ಪಂಜಾಬ್ ಬೌಲಿಂಗ್‌ನಲ್ಲಿ ದುರ್ಬಲವಾಗಿರುವುದರಿಂದ ಎಷ್ಟೇ ರನ್‌ಗಳಿಸಿದರೂ ಅದನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ.
ಅಂಕಣ ಹೇಗಿದೆ?
ಫಿರೋಜ್ ಷಾ ಕೋಟ್ಲಾ ಪಿಚ್ ಸ್ಪಿನ್‌ಗೆ ಹೆಚ್ಚು ನೆರವಾಗುತ್ತದೆ. ಎಂದಿನಂತೆ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ನೆರವಾಗಲಿದೆ. ಇಬ್ಬನಿಯಿರುವುದರಿಂದ 2ನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚುವರಿ ಸ್ಪಿನ್ ಕಾಟ ಇರಲಿದೆ.