ಹೊಸದಿಲ್ಲಿ : ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರರ ವಿರುದ್ಧದ 2016 ದೇಶದ್ರೋಹದ ಕೇಸಿನಲ್ಲಿ ಕಾನೂನು ಕ್ರಮ ಜರುಗಿಸುವುದಕ್ಕೆ ಅವಶ್ಯವಿರುವ ಅನುಮತಿಯನ್ನು ಪಡೆಯುವುದಕ್ಕೆ ದಿಲ್ಲಿ ನ್ಯಾಯಾಲಯವು ದಿಲ್ಲಿ ಪೊಲೀಸರಿಗೆ ಫೆ.28ರ ವರೆಗೆ ಅಂತಿಮ ಕಾಲಾವಕಾಶ ನೀಡಿದೆ.
ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಅಗತ್ಯವಿರುವ ಮಂಜೂರಾತಿಯು ಪ್ರಕೃತ ದಿಲ್ಲಿ ಸರಕಾರದ ಕೈಯಲ್ಲಿ ಬಾಕಿ ಉಳಿದಿದ್ದು ಇನ್ನೆರಡು ದಿನಗಳ ಒಳಗಾಗಿ ಅದು ಸಿಗುವ ಸಾಧ್ಯತೆ ಇದೆ ಎಂದು ದಿಲ್ಲಿ ಪೊಲೀಸರು ಇಂದು ಬುಧವಾರ ಕೋರ್ಟಿಗೆ ತಿಳಿಸಿದರು.
‘ಅಧಿಕಾರಿಗಳು ಅನಿರ್ದಿಷ್ಟ ಕಾಲ ಕಡತವನ್ನು ಕುಂಡೆ ಅಡಿಗೆ ಹಾಕಿ ಕುಳಿತಿರುತ್ತಾರೆ; ಆದುದರಿಂದ ನೀವೇ ಮುತುವರ್ಜಿ ವಹಿಸಿ ಮಂಜೂರಾತಿಯನ್ನು ಪಡೆದುಕೊಳ್ಳಿ’ ಎಂದು ನ್ಯಾಯಾಲಯ ಗರಂ ಆಗಿ ದಿಲ್ಲಿ ಪೊಲೀಸರಿಗೆ ಹೇಳಿತು.
ಈ ಮೊದಲು ನ್ಯಾಯಾಲಯ, ದಿಲ್ಲಿ ಸರಕಾರದಿಂದ ಅಗತ್ಯ ಮಂಜೂರಾತಿ ಪಡೆಯದೇ ಚಾರ್ಜ್ ಶೀಟ್ ಸಲ್ಲಿಸಿದ್ದ ದಿಲ್ಲಿ ಪೊಲೀಸರು ತರಾಟೆಗೆ ತೆಗೆದುಕೊಂಡು, ಅಗತ್ಯ ಅನುಮತಿ ಪಡೆದುಕೊಳ್ಳುವುದಕ್ಕೆ ಫೆ.6ರ ವರೆಗೆ ಕಾಲಾವಕಾಶ ನೀಡಿತ್ತು.
ಇಂದಿಗೆ ಅದು ಮುಗಿದರೂ ದಿಲ್ಲಿ ಪೊಲೀಸರಿಗೆ ದಿಲ್ಲಿ ಸರಕಾರದಿಂದ ಅನುಮತಿ ಮಂಜೂರಾಗಿಲ್ಲ. ಕೋರ್ಟ್ ಇದನ್ನು ಗಂಭೀರವಾಗಿ ಪರಿಗಣಿಸಿ ಅಂತಿಮ ಕಾಲಾವಕಾಶವನ್ನು ಫೆ.28ರ ವರೆಗೆ ವಿಸ್ತರಿಸಿತು.