ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು( ಡಿ.14) ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಮಾತ್ರವಲ್ಲದೆ ಆಮ್ ಆದ್ಮಿ ಪಕ್ಷದ (ಎಎಪಿ) ಸದಸ್ಯರು ಮತ್ತು ಕಾರ್ಯರ್ತರು ತಮ್ಮೊಂದಿಗೆ ಸೇರಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದೇಶಾದ್ಯಂತದ ಇರುವ ಆಪ್ ಬೆಂಬಲಿಗರು ಇಂದು ಒಂದು ದಿನ ಉಪವಾಸ ಆಚರಿಸಬೇಕೆಂದು ನಾನು ವಿನಂತಿಸುತ್ತೇನೆ. ನಾನು ಕೂಡ ಒಂದು ದಿನದ ಉಪವಾಸವನ್ನೂ ಆಚರಿಸುತ್ತಿದ್ದೇನೆ. ನಮ್ಮ ಮನೆಗಳಿಂದಲೇ ರೈತರನ್ನು ಬೆಂಬಲಿಸೋಣ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ರೈತರಿಗೆ ಕನಿಷ್ಠ ಬೆಂಬಲ ದರವನ್ನು (ಎಂಎಸ್‌ಪಿ) ಖಾತ್ರಿಪಡಿಸುವ ಹೊಸ ಮಸೂದೆಯನ್ನು ತರಬೇಕು ಎಂದು ಕೇಜ್ರಿವಾಲ್ ಒತ್ತಾಯಿಸಿದರು.
ಕೇಂದ್ರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕಳೆದ 2 ವಾರಗಳಿಂದ ದಿಲ್ಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಗೊಂಡಿದ್ದು, ಸೋಮವಾರ(ಇಂದು) ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಿರಶನ ನಡೆಸುವ ಮೂಲಕ ಕೇಂದ್ರ ಸರಕಾರದ ಮೇಲೆ ಮತ್ತಷ್ಟು ಒತ್ತಡ ತರಲು ರೈತ ಸಂಘಟನೆಗಳು ನಿರ್ಧರಿಸಿವೆ.
ಪ್ರತಿಭಟನೆಯನ್ನು ಬೆಂಬಲಿಸಿ ಸಾವಿರಾರು ರೈತರು ದಿಲ್ಲಿ ಗಡಿಯತ್ತ ತೆರಳುತ್ತಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಬಹು ಹಂತದ ಬ್ಯಾರಿಕೇಡ್‌ಗಳನ್ನು ಇಟ್ಟು ಪ್ರತಿಭಟನಕಾರರನ್ನು ತಡೆಯಲು ಯತ್ನಿಸಲಾಗುತ್ತಿದೆ.