Advertisement

Delhi High Court: ಕೇಜ್ರಿವಾಲ್‌ ಅರೆಸ್ಟ್‌ ಕೇಸ್‌, ತೀರ್ಪು ಕಾಯ್ದಿಟ್ಟ ದಿಲ್ಲಿ ಹೈಕೋರ್ಟ್‌

09:13 PM Apr 03, 2024 | Team Udayavani |

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ತನ್ನ ತೀರ್ಪನ್ನು ಗುರುವಾರಕ್ಕೆ ಕಾಯ್ದಿರಿಸಿದೆ. ಈ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಕೇಜ್ರಿವಾಲ್‌ ಪರ ಮತ್ತು ಇ.ಡಿ. ಪರ ವಕೀಲರ ನಡುವೆ ಬಿರುಸಿನ ವಾದ ನಡೆಯಿತು.

Advertisement

ವಾದ-ಪ್ರತಿವಾದ ಆಲಿಸಿದ ಬಳಿಕ ದೆಹಲಿ ಹೈಕೋರ್ಟ್‌ನ ನ್ಯಾ. ಸ್ವರಣಾ ಕಾಂತ್‌ ಶರ್ಮಾ ಅವರು, “ತೀರ್ಪನ್ನು ಗುರುವಾರಕ್ಕೆ ಕಾಯ್ದಿರಿಸುತ್ತಿದ್ದೇನೆ” ಎಂದು ಪ್ರಕಟಿಸಿದರು. ಕೇಜ್ರಿವಾಲ್‌ ಪರ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಮತ್ತು ಇ.ಡಿ. ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌(ಎಎಸ್‌ಜಿ) ಎಸ್‌.ವಿ.ರಾಜು ಹಾಜರಾಗಿದ್ದರು.

ಬಂಧನದ “ಸಂದರ್ಭ’ವನ್ನು ಪ್ರಶ್ನಿಸಿದ ಆಪ್‌ ನಾಯಕನ ಪರ ವಕೀಲರು, ಇದು ಸಂವಿಧಾನ ಮೂಲ ಸಂರಚನೆ ಹಾಗೂ ನ್ಯಾಯ ಮತ್ತು ಮುಕ್ತ ಚುನಾವಣೆಯ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಜಿ ಎಸ್‌.ವಿ.ರಾಜು, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೇಜ್ರಿವಾಲ್‌ ವಿರುದ್ಧ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ತಿಳಿಸಿದರು. ಅಲ್ಲದೆ, ಕೇಜ್ರಿವಾಲ್‌ ಬಂಧನಕ್ಕೆ ಸಾಕ್ಷ್ಯಗಳಿಗೆ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಎಎಸ್‌ಜಿ, ಕ್ರಿಮಿನಲ್‌ಗ‌ಳ ಬಂಧನವಾಗಬೇಕು ಮತ್ತು ಅವರನ್ನು ಸೆರೆಮನೆಯಲ್ಲಿ ಇಡಬೇಕು ಎಂದು ಖಾರವಾಗಿ ಹೇಳಿದರು. ಅರವಿಂದ್‌ ಕೇಜ್ರಿವಾಲರನ್ನು ಇ.ಡಿ ಮಾರ್ಚ್‌ 21ರಂದು ಬಂಧಿಸಿತ್ತು ಮತ್ತು ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕೇಜ್ರಿವಾಲ್‌ ಪರ ವಾದ :
– ಕೇಜ್ರಿವಾಲ್‌ ವಿರುದ್ಧ ಇ.ಡಿ. ಬಳಿ ಸಾಕ್ಷ್ಯಗಳಿಲ್ಲ. ಅವರ ಹೇಳಿಕೆ ಪಡೆದಿಲ್ಲ.
– ಚುನಾವಣೆ ಸಂದರ್ಭದಲ್ಲಿ ಕೇಜ್ರಿವಾಲರನ್ನು ಬಂಧಿಸಿದ್ದೇಕೆ? ಮುಕ್ತ ಮತ್ತು ನ್ಯಾಯಸಮ್ಮತ ಎಲೆಕ್ಷನ್‌ಗೆ ಸಮಾನವ ಅವಕಾಶ ಅಗತ್ಯ.
-ಕೇಜ್ರಿವಾಲ್‌ ಓಡಿ ಹೋಗುವ ಸಾಧ್ಯತೆ ಇತ್ತಾ? ಒಂದೂವರೆ ವರ್ಷದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ರಾ?
– ಆರೋಪಿತರು ಹೇಳಿಕೆಗಳ ಬದಲಿಸಿದ ನಂತರ ಬಂಧಿಸಲಾಗಿದೆ. ಬಳಿಕ ಅವರಿಗೆ ಜಾಮೀನು ನೀಡಲಾಗಿದೆ.
-ಮಗುಂತಾ ರೆಡ್ಡಿಯ 13 ಹೇಳಿಕೆಗಳ ಪೈಕಿ 11 ಹೇಳಿಕೆಗಳಲ್ಲಿ ಕೇಜ್ರಿವಾಲ್‌ ಉಲ್ಲೇಖವಿಲ್ಲ.

ಇ.ಡಿ.ಯ ಪ್ರತಿವಾದ:
– ಚುನಾವಣೆ ಮುಂಚೆ ರಾಜಕೀಯ ವ್ಯಕ್ತಿ ಅಪರಾಧ ಮಾಡಿದರೆ, ಆತನನ್ನು ಬಂಧಿಸಬಾರದೆ?
– ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಹಣ ಕೈ ಬದಲಾದ ಬಗ್ಗೆ ಸಾಕ್ಷ್ಯಗಳಿವೆ.
– ಸಾಕ್ಷ್ಯಗಳನ್ನು ಮುಂದಿಟ್ಟಾಗ ಆರೋಪಿತರ ತಮ್ಮ ಹೇಳಿಕೆಗಳನ್ನು ಬದಲಿಸುತ್ತಾರೆ. ಈ ಪ್ರಕರಣದಲ್ಲೂ ಹಾಗೆ ಆಗಿರುವುದು.
– ಅಕ್ರಮ ಹಣ ವರ್ಗಾವಣೆ ಬಗ್ಗೆ ನಮ್ಮ ಬಳಿ ವಾಟ್ಸಾಪ್‌ ಚಾಟ್‌, ಹೇಳಿಕೆಗಳಿವೆ. ಸಾಕಷ್ಟು ಮಾಹಿತಿ ಇದೆ.
– ಈ ಪ್ರಕರಣದಲ್ಲಿ ಕೇಜ್ರಿವಾಲ್‌ ಸ್ವತಃ ಭಾಗಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next