Advertisement

ದೆಹಲಿ ದಂಗೆ : ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಕೇಜ್ರಿವಾಲ್

09:25 AM Feb 28, 2020 | Hari Prasad |

ನವದೆಹಲಿ: ಇಲ್ಲಿನ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಭುಗಿಲೆದ್ದ ಹಿಂಸಾಚಾರದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ಮತ್ತು ಘರ್ಷಣೆಯಲ್ಲಿ ಗಾಯಗೊಂಡವರಿಗೆ ಹಾಗೂ ದೊಂಬಿಯಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಪರಿಹಾರವನ್ನು ಘೋಷಿಸಿದ್ದಾರೆ.

Advertisement

ಹಿಂಸಾಚಾರ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳ ರಕ್ತಸಂಬಂಧಿಗಳಿಗೆ ತಲಾ 10 ಲಕ್ಷ ರೂಪಾಯಿಗಳ ನಗದು ಪರಿಹಾರವನ್ನು ಘೋಷಿಸಲಾಗಿದೆ. ಇನ್ನು ಘಟನೆಯಲ್ಲಿ ಮೃತಪಟ್ಟ ಅಪ್ರಾಪ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಲಾಗಿದೆ.

ಇನ್ನು ಹಿಂಸಾಚಾರ ಘಟನೆಗಳ ಸಂದರ್ಭದಲ್ಲಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದ ಮನೆಗಳ ಮಾಲಿಕರಿಗೆ 5 ಲಕ್ಷ ರೂಪಾಯಿಗಳನ್ನು ಒದಗಿಸಲಾಗುವುದು ಎಂದು ಕೇಜ್ರವಾಲ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಮತ್ತು ಬಾಡಿಗೆ ಮನೆಗಳಲ್ಲಿದ್ದು ತಮ್ಮ ವಸ್ತುಗಳನ್ನು ಕಳೆದುಕೊಂಡ ಬಾಡಿಗೆದಾರರಿಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ದೊಂಬಿಯಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ಕಳೆದುಕೊಂಡಂತವರಿಗೆ ಅವರು ಕಳೆದುಕೊಂಡಿರಬಹುದಾದ ಪ್ರತೀ ಪ್ರಾಣಿಗೆ ತಲಾ 5 ಸಾವಿರ ರೂಪಾಯಿಯಂತೆ ಪರಿಹಾರ ನೀಡಲಾಗುವುದು. ಇನ್ನು ಆಟೋ ರಿಕ್ಷಾ ಕಳೆದುಕೊಂಡವರಿಗೆ 25 ಸಾವಿರ ಪರಿಹಾರ ಧನ ಲಭಿಸಿದರೆ, ಇ-ರಿಕ್ಷಾ ಕಳೆದುಕೊಂಡಂತವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಧನವನ್ನು ನೀಡಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಇನ್ನು ದಂಗೆ ಸಂದರ್ಭದ ಘರ್ಷಣೆಗಳಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲುಗೊಂಡಿರುವ ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ದೆಹಲಿ ಸರಕಾರವೇ ಭರಿಸಲಿದೆ ಎಂದೂ ಸಹ ಮುಖ್ಯಮಂತ್ರಿಯವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next