ಅಬುಧಾಬಿ: ಐಪಿಎಲ್‌ನಲ್ಲಿ ಪಂದ್ಯಗಳನ್ನು ಫಿಕ್ಸ್ ಮಾಡುವುದು ಒಂದು ಕಾಲದಲ್ಲಿ ಭಾರೀ ಸದ್ದು ಮಾಡಿತ್ತು. 2013ರಲ್ಲಿ ನಡೆದ ರಾದ್ಧಾಂತದಿಂದ ಇಡೀ ಬಿಸಿಸಿಐಗೆ ಸರ್ವೋಚ್ಚ ನ್ಯಾಯಾಲಯ ಶಸ್ತ್ರಚಿಕಿತ್ಸೆ ಮಾಡಿದೆ. ಅಂತಹ ಗುಮಾನಿಗಳ ಬೆನ್ನಲ್ಲೇ ಭಾನುವಾರ ಮುಂಬೈ-ಡೆಲ್ಲಿ ಪಂದ್ಯದಲ್ಲಿ ಎಡವಟ್ಟೊಂದು ನಡೆದಿದೆ. ಇದಕ್ಕೆಲ್ಲ ಕಾರಣ ಮುಂಬೈ ಇಂಡಿಯನ್ಸ್ ತಂಡದ ಟ್ವೀಟರ್ ಖಾತೆಯಲ್ಲಿ ಪ್ರಕಟವಾದ ಒಂದು ಟ್ವೀಟ್. ಅದರಲ್ಲೇನಿತ್ತು ಅಂತೀರಾ?
ಭಾನುವಾರ ಡೆಲ್ಲಿ ಆಟ ಆರಂಭಿಸುವ ಕೇವಲ ಎಂಟು ನಿಮಿಷ ಮುನ್ನ ಅದರ ಅಂತಿಮಮೊತ್ತವನ್ನು ಟ್ವೀಟ್‌ನಲ್ಲಿ ಹೇಳಲಾಗಿತ್ತು.
ಅದು ಹೀಗಿದೆ: “ಪ್ಯಾಟಿನ್ಸನ್ ಈಸ್ ಶೇರಿಂಗ್ ದ ನ್ಯೂ ಬಾಲ್ ವಿತ್ ಬೌಲ್ಟ್. ಡಿಸಿ 19.5163/5 (19.5)’. ಅಚ್ಚರಿಯೆಂದರೆ ಡೆಲ್ಲಿ ಇನಿಂಗ್ಸ್ ಮುಗಿದಾಗ ಬಹುತೇಕ ಮೇಲಿನ ಟ್ವೀಟ್‌ಗೆ ಸರಿಸಮನಾದ ಫಲಿತಾಂಶ ಬಂದಿದೆ. 20 ಓವರ್‌ಗಳಲ್ಲಿ ಡೆಲ್ಲಿ ಮೊತ್ತ 162/4. ಇದು ಅಭಿಮಾನಿಗಳಿಗೆ ಫಿಕ್ಸಿಂಗ್ ಶಂಕೆ ಬರಲು ಕಾರಣ. ಈ ಟ್ವೀಟನ್ನು ಕೆಲವೇ ನಿಮಿಷಗಳಲ್ಲಿ ಅಳಿಸಲಾಯಿತು. ಅಷ್ಟರಲ್ಲಾಗಲೇ ಆಗಬೇಕಾದಷ್ಟು ಹಾನಿಯಾಗಿಯಾಗಿತ್ತು.
ಇದನ್ನೂ ಓದಿ:ಎಂಪಿಎಲ್‌ನಲ್ಲೂ ಮಿಂಚಿದ್ದ ಆರ್‌ಸಿಬಿಯ ಪಡಿಕ್ಕಲ್
ಅಬುಧಾಬಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮುಂಬೈ ಐದು ವಿಕೆಟ್ ಗಳ ಅಂತರದ ಗೆಲುವು ಸಾಧಿಸಿತ್ತು. ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿದ್ದರು.