ಹೊಸದಿಲ್ಲಿ : ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿ ಇರಿಸಿ ಸಿಪಿಐ(ಎಂ) ವ್ಯಾಪಕ ರಾಜಕೀಯ ಹಿಂಸೆಯಲ್ಲಿ ತೊಡಗಿರುವುದನ್ನು ಖಂಡಿಸಿ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಮತ್ತು ವಿಜಯ್ ಗೋಯಲ್ ಅವರು ಇತರ ಬಿಜೆಪಿ ನಾಯಕರೊಂದಿಗೆ ಇಂದು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೇರಳದಲ್ಲಿನ ರಾಜಕೀಯ ಹಿಂಸೆಯನ್ನು ಖಂಡಿಸಿ ದೇಶದ ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ಬಿಜೆಪಿ ಇಂದಿನಿಂದ ಪಾದಯಾತ್ರೆ ನಡೆಸಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಿನ್ನೆ ಮಂಗಳವಾರ ಕೇರಳದಲ್ಲಿ ಜನರಕ್ಷಾ ಯಾತ್ರೆಗೆ ಹಸಿರು ನಿಶಾನೆ ತೋರಿಸಿ ಹೇಳಿದ್ದರು.
ದಿಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಮಾತನಾಡಿದ ಸಚಿವ ಜೀತೇಂದ್ರ ಸಿಂಗ್ ಅವರು ಕೇರಳದಲ್ಲಿ ವಾಮ ಪಂಥೀಯರಿಂದ ನಡೆಯುತ್ತಿರುವ ಹಿಂಸೆಯು ದೇಶದ ಪ್ರಜಾಸತ್ತೆ ಮೇಲಿನ ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿದರು.
ರಾಜಕೀಯ ಹಿಂಸೆಯನ್ನು ಬಿಜೆಪಿ ಮಾತ್ರವಲ್ಲ; ಪ್ರಜಾಸತ್ತೆಯಲ್ಲಿ ವಿಶ್ವಾಸವಿರಿಸಿರುವ ಇತರ ಎಲ್ಲ ಪಕ್ಷಗಳು ಏಕಪ್ರಕಾರವಾಗಿ ಖಂಡಿಸುತ್ತವೆ ಎಂದು ಸಿಂಗ್ ಹೇಳಿದರು.
ದಿಲ್ಲಿ ಬಿಜೆಪಿ ಕಚೇರಿಯಿಂದ ಭಾಯಿ ವೀರ್ ಸಿಂಗ್ ಮಾರ್ಗ್ ನಲ್ಲಿರುವ ಸಿಪಿಎಂ ಕಾರ್ಯಾಲಯದ ತನಕ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮನೋಜ ತಿವಾರಿ (ನಗರ ಬಿಜೆಪಿ ಘಟಕಾಧ್ಯಕ್ಷ), ಶಹನವಾಜ್ ಹುಸೇನ್, ವಿಜೇಂದ್ರ ಗೋಯಲ್ ಮುಂತಾದ ನಾಯಕರು ಪಾಲ್ಗೊಂಡಿದ್ದರು.