ದೆಹಲಿ: ವಿಚ್ಛೇದನ ಹಂತದಲ್ಲಿದ್ದ ಸಂಬಂಧದಲ್ಲಿ ಪತ್ನಿ ಜತೆ ಜಗಳ ಉಂಟಾಗಿ ವ್ಯಕ್ತಿಯೊಬ್ಬ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಕಲ್ಯಾಣ್ ವಿಹಾರ್ ಪ್ರದೇಶದಲ್ಲಿ ಮಂಗಳವಾರ(ಡಿ.31) ನಡೆದಿರುವುದು ವರದಿಯಾಗಿದೆ.
ಪುನೀತ್ ಖುರಾನಾ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಪುನೀತ್ ಖುರಾನಾ ಪತ್ನಿ ಜತೆ ಸೇರಿಕೊಂಡು ಬೇಕರಿಯೊಂದನ್ನು ಖರೀದಿಸಿದ್ದ. ಈ ಸಂಬಂಧ ಇಬ್ಬರ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು ಎನ್ನಲಾಗಿದೆ.
2016ರಲ್ಲಿ ಪುನೀತ್ ವಿವಾಹವಾಗಿದ್ದರು. ಪತ್ನಿ ಜತೆ ಸೇರಿಕೊಂಡು ಪುನೀತ್ ಫಾರ್ ಗಾಡ್ಸ್ ಕೇಕ್ ಬೇಕರಿ ಮತ್ತು ವುಡ್ಬಾಕ್ಸ್ ಕೆಫೆ ಎಂಬ ಅಂಗಡಿಯನ್ನು ಖರೀದಿಸಿ ವ್ಯವಹಾರ ನಡೆಸುತ್ತಿದ್ದರು. ಇದು ಕೆಲ ಸಮಯದ ಹಿಂದಷ್ಟೇ ಮುಚ್ಚಲ್ಪಟ್ಟಿತ್ತು.
ಈ ಕಾರಣದಿಂದ ಇಬ್ಬರ ನಡುವೆ ಆಗಾಗ ಕಲಹ ನಡೆಯುತ್ತಿತ್ತು. ಇದರಿಂದ ಪುನೀತ್ ಪತ್ನಿ ಜತೆ ಅಸಮಾಧಾನಗೊಂಡಿದ್ದರು. ಇಬ್ಬರು ವಿಚ್ಚೇದನ ಪಡೆಯುವ ಹಂತದಲ್ಲಿದ್ದರು ಎಂದು ಪುನೀತ್ ಅವರ ಸಂಬಂಧಿಕರು ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ.
ಖುರಾನಾ ಅವರು ಪತ್ನಿಯ ಬಳಿ ಕೊನೆಯದಾಗಿ ಬೇಕರಿ ವ್ಯವಹಾರದ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖುರಾನಾ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಹಲವಾರು ಸಂದರ್ಭಗಳಲ್ಲಿ ಅವಮಾನಿಸಿದ್ದಾನೆ ಎಂದು ಹೆಂಡತಿ ಹೇಳಿರುವುದು ಆಡಿಯೋದಲ್ಲಿದೆ ಎಂದು ವರದಿ ತಿಳಿಸಿದೆ.
ಪತಿ ನಡುವೆ ನಡೆದ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ತನ್ನ ಸಂಬಂಧಿಕರಿಗೆ ಪತ್ನಿ ಕಳುಹಿಸಿದ್ದಾಳೆ ಎಂದು ಖುರಾನಾ ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ಖುರಾನಾ ಅವರ ಫೋನ್ ಅನ್ನು ವಶಪಡಿಸಿಕೊಂಡಿದ್ದು, ವಿಚಾರಣೆಗಾಗಿ ಅವರ ಪತ್ನಿಗೆ ಕರೆ ಮಾಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.