Advertisement

Exit Poll ಸಮೀಕ್ಷೆ: ದೆಹಲಿಯಲ್ಲಿ ಆಪ್ ಗಿಲ್ಲ ಸರಿಸಾಟಿ ಮತ್ತೆ ಕೇಜ್ರಿವಾಲ್ ಮುಖ್ಯಮಂತ್ರಿ?

10:06 AM Feb 09, 2020 | Hari Prasad |

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು  ಮುಕ್ತಾಯಗೊಳ್ಳುವುದರೊಂದಿಗೆ ರಾಷ್ಟ್ರರಾಜಧಾನಿಯ ಗದ್ದುಗೆಗಾಗಿನ ರಾಜಕೀಯ ಪಕ್ಷಗಳ ನಡುವಿನ ಜಟಾಪಟಿ ಒಂದು ನಿರ್ಣಾಯಕ ಹಂತವನ್ನು ತಲುಪಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದ ಇಲ್ಲಿ ಆಮ್ ಆದ್ಮಿ ಪಕ್ಷವೇ ಮರಳಿ ಅಧಿಕಾರಕ್ಕೇರುವ ವಿಶ್ವಾಸವನ್ನು ಚುನಾವಣಾ ಪೂರ್ವದ ಮತದಾನ ಸಮೀಕ್ಷೆಗಳು ನೀಡಿದ್ದವು.

Advertisement

ಇದೀಗ ಮತದಾನದ ಬಳಿಕವೂ ಇದೇ ಅಭಿಪ್ರಾಯ ಹೊರಬಿದ್ದಿದ್ದು, ಬಹುತೇಕ ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷವೇ ಬಹುಮತದೊಂದಿಗೆ ದೆಹಲಿಯಲ್ಲಿ ಮರಳಿ ಅಧಿಕಾರದ ಗದ್ದುಗೆ ಪಡೆಯಲಿದೆ ಹಾಗೂ ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರೇ ಮುಖ್ಯಮಂತ್ರಿಯಾಗಿ ಪುನರಾಯ್ಕೆಗೊಳ್ಳುವ ನಿರೀಕ್ಷೆಯನ್ನೂ ವ್ಯಕ್ತಪಡಿಸಿವೆ.

70 ಸ್ಥಾನಗಳಿಗಾಗಿ ಇಂದು ಅಂತ್ಯಗೊಂಡ ಮತದಾನದಲ್ಲಿ ದೆಹಲಿಯ ಮತದಾರರು ಆಮ್ ಆದ್ಮಿ, ಬಿಜೆಪಿ, ಕಾಂಗ್ರೆಸ್, ಇತರೇ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 672 ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂ ಯಂತ್ರದಲ್ಲಿ ಭದ್ರಪಡಿಸಿಟ್ಟಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಫೆಬ್ರವರಿ 11ರ ಮಂಗಳವಾರದಂದು ಹೊರಬೀಳಲಿದೆ.

70 ಸ್ಥಾನಗಳನ್ನು ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಇದೀಗ ಹೊರಬಿದ್ದಿರುವ ಎಲ್ಲಾ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತವನ್ನು ಪಡೆಯುವ ಸಾಧ್ಯತೆಗಳನ್ನು ವ್ಯಕ್ತಪಡಿಸಿವೆ.

2015ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ 67 ಸ್ಥಾನಗಳನ್ನು ಗೆದ್ದುಕೊಂಡಿದ್ದ ಆಮ್ ಆದ್ಮಿ ಪಕ್ಷ ಸುಸ್ಪಷ್ಟ ಬಹುಮತದೊಂದಿಗೆ ದೆಹಲಿಯ ಅಧಿಕಾರದ ಗದ್ದುಗೆಯನ್ನೇರಿತ್ತು. ಭಾರತೀಯ ಜನತಾ ಪಕ್ಷ ಕೇವಲ 3 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದರೆ ಸುದೀರ್ಘ ಕಾಲ ದೆಹಲಿ ರಾಜ್ಯದಲ್ಲಿ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ ಪಕ್ಷದ್ದು ಶೂನ್ಯ ಸಂಪಾದನೆಯಾಗಿತ್ತು.

Advertisement

ಟೈಮ್ಸ್ ನೌ-ಐ.ಪಿ.ಎಸ್.ಒ.ಎಸ್. ನಡೆಸಿದ ಮತದಾನೋತ್ತರ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ 44 ಸ್ಥಾನಗಳನ್ನು ಗೆಲ್ಲಬಹುದೆಂದು ಅಂದಾಜಿಸಲಾಗಿದೆ ಮತ್ತು ಕೇಜ್ರಿವಾಲ್ ಅವರಿಗೆ ಭರ್ಜರಿ ಸ್ಪರ್ದೇ ನೀಡಿರುವ ಭಾರತೀಯ ಜನತಾ ಪಕ್ಷ ಈ ಬಾರಿ 26 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂದು ಈ ಸಮೀಕ್ಷೆ ಹೇಳುತ್ತಿದೆ. ಆದರೆ ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ನದ್ದು ಈ ಬಾರಿಯೂ ಶೂನ್ಯ ಸಂಪಾದನೆಯೇ.

ರಿಪಬ್ಲಿಕ್-ಜನ್ ಕೀ ಬಾತ್ ನಡೆಸಿರುವ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಆಮ್ ಆದ್ಮಿ ಪಕ್ಷ 48 ರಿಂದ 61 ಸ್ಥಾನಗಳಲ್ಲಿ ಜಯಗಳಿಸುವ ನಿರೀಕ್ಷೆಯಿದ್ದರೆ, ಭಾರತೀಯ ಜನತಾ ಪಕ್ಷ 9 ರಿಂದ 21 ಸ್ಥಾನಗಳಲ್ಲಿ ಜಯಗಳಿಸುವ ನಿರೀಕ್ಷೆ ಇದೆ ಇನ್ನು ಕಾಂಗ್ರೆಸ್ 0-1 ಸ್ಥಾನ ಗೆಲ್ಲಬಹುದು ಎಂದು ಈ ಸಮೀಕ್ಷೆ ಅಂದಾಜಿಸಿದೆ.

ಇನ್ನು ನ್ಯೂಸ್ ಎಕ್ಸ್-ನೇತಾ ಆ್ಯಪ್ ನಡೆಸಿರುವ ಮತದಾನೋತ್ತರ ಸಮೀಕ್ಷೆಯಲ್ಲೂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವೇ ಅಧಿಕಾರಕ್ಕೇರುವ ಸಾಧ್ಯತೆಗಳಿವೆ. ಆಮ್ ಆದ್ಮಿ ಪಕ್ಷ 50-56 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದರೆ, ಭಾರತೀಯ ಜನತಾ ಪಕ್ಷ 10-14 ಸ್ಥಾನಗಳನ್ನು ಗೆಲ್ಲಬಹುದು ಎಂದು ಈ ಸಮೀಕ್ಷೆ ಅಭಿಪ್ರಾಯಪಟ್ಟಿದೆ ಇನ್ನು ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಪಕ್ಷ ಯಾವುದೇ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಲ್ಲ.

ಪೋಲ್ ಆಫ್ ಪೋಲ್ಸ್ ಮತದಾನೋತ್ತರ ಸಮೀಕ್ಷಾ ಫಲಿತಾಂಶದಲ್ಲಿ ಆಮ್ ಆದ್ಮಿ ಪಕ್ಷಕ್ಕೆ 51 ಸ್ಥಾನಗಳು ಸಿಗುವ ನಿರೀಕ್ಷೆ ಇದೆ, ಭಾರತೀಯ ಜನತಾ ಪಕ್ಷ 18 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದ್ದರೆ, ಕಾಂಗ್ರೆಸ್ ಪಕ್ಷ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು ಎಂದು ಈ ಸಮೀಕ್ಷೆ ಭವಿಷ್ಯ ನುಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next