ಹೊಸದಿಲ್ಲಿ : ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮುಂಬಯಿಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದ ಜಂಟಿ ಅತ್ಯುತ್ತಮ ವಿಮಾನ ನಿಲ್ದಾಣಗಳೆಂದು ಏರ್ ಪೋರ್ಟ್‌ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ ಪರಿಗಣಿಸಿದೆ.
2017ರಲ್ಲಿ ವಾರ್ಷಿಕ ನಾಲ್ಕು ಕೋಟಿಗೂ ಅಧಿಕ ಪ್ರಯಾಣಿಕರನ್ನು ನಿರ್ವಹಿಸಿದ ಕಾರಣಕ್ಕೆ ಭಾರತದ ಈ ಎರಡು ವಿಮಾನ ನಿಲ್ದಾಣಗಳಿಗೆ “ಜಂಟಿ ಅತ್ಯುತ್ತಮ ವಿಮಾನ ನಿಲ್ದಾಣಗಳು’ ಎಂದು ಪರಿಗಣಿಸಲಾಗಿದೆ.
ಬೃಹತ್ ಸಂಖ್ಯೆಯ ಪ್ರಯಾಣಿಕರ ನಿರ್ವಹಣೆಗಾಗಿ ಸಿಂಗಾಪುರದ ಶಾಂಗಿ, ಇನ್ಶಿಯಾನ್ ಮತ್ತು ಬ್ಯಾಂಕಾಕ್ ವಿಮಾನ ನಿಲ್ದಾಣಗಳು ವಿಶ್ವದ ಅತೀ ಹೆಚ್ಚು ಪ್ರಶಸ್ತಿ ಪುರಸ್ಕೃತ ವಿಮಾನ ನಿಲ್ದಾಣಗಳಾಗಿವೆ.
2016ರ ಪಟ್ಟಿಯಲ್ಲಿ ಇಂದಿರಾಗಾಂಧಿ ವಿಮಾನ ನಿಲ್ದಾಣ ಎರಡನೇ ಸ್ಥಾನವನ್ನು ಪಡೆದಿತ್ತು. 2015ರಲ್ಲಿ ವಾರ್ಷಿಕ 25 -40 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದ ನೆಲೆಯಲ್ಲಿ ಇದು ಮೊದಲನೇ ಸ್ಥಾನವನ್ನು ಗಳಿಸಿತ್ತು.
ಕಳೆದ ವರ್ಷ ಇಂದಿರಾ ಗಾಂಧಿ ವಿಮಾನ ನಿಲ್ದಾಣ ನಿರ್ವಹಿಸಿದ ಪ್ರಯಾಣಿಕರ ಸಂಖ್ಯೆ 63.5 ದಶಲಕ್ಷ ಆಗಿತ್ತು. ಹಾಗಾಗಿ ಇದೀಗ ಅದು ಏಶ್ಯದ ಆರನೇ ಅತೀ ತುರುಸಿನ ವಿಮಾನ ನಿಲ್ದಾಣವಾಗಿದೆ. ಅಂತೆಯೇ ವಿಶ್ವದ ಅತ್ಯಂತ ತುರುಸಿನ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ದುಬೈ ವಿಮಾನ ನಿಲ್ದಾಣ ಅಗ್ರ ಸ್ಥಾನದಲ್ಲಿದೆ.