ನವದೆಹಲಿ: ಮಾದಕ ದ್ರವ್ಯ ಪೂರೈಸುವ ಜಾಲವನ್ನು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕ ಛೇದಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ಘಾನಿಸ್ತಾನದ ಇಬ್ಬರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ 1,200 ಕೋಟಿ ರೂ. ಮೊತ್ತದ 312.5 ಕೆಜಿ ಮೆಥಾಂಫೆಟಮೈನ್ ಮತ್ತು ಅಫ್ಘಾನಿಸ್ತಾನದ 10 ಕೆಜಿ ಹೆರಾಯಿನ್‌ನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಮೆಥಾಂಫೆಟಮೈನ್ ಪೂರೈಕೆ ಜಾಲವನ್ನು ಪತ್ತೆ ಹಚ್ಚಲಾಗಿದೆ. ಬಂಧಿತರನ್ನು ಮುಸ್ತಫಾ ಸ್ಟಾನಿಕಾj(23) ಹಾಗೂ ರಹೀಮುಲ್ಲಾ ರಹೀಮ್(44) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮಾಲು ಸಮೇತ ಆರೋಪಿಗಳನ್ನು ನವದೆಹಲಿಯ ಕಳಿಂದಿ ಕುಂಜ್ ಮೆಟ್ರೊ ನಿಲ್ದಾಣದ ಸಮೀಪದ ಮೀಥಾಪುರ್ ರಸ್ತೆಯಲ್ಲಿ ಬಂಧಿಸಲಾಯಿತು. ಈ ಇಬ್ಬರು ಅಫ್ಘಾನ್ ಪ್ರಜೆಗಳು 2016ರಿಂದ ದೆಹಲಿಯಲ್ಲಿ ನೆಲೆಸಿದ್ದಾರೆ.
ವಿದೇಶಗಳಿಂದ ಮಾದಕದ್ರವ್ಯ ತರಿಸಿಕೊಂಡು ಇಲ್ಲಿ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.