Advertisement
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯ ಬಿಜೆಪಿಯಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ. ರಾಷ್ಟ್ರ ಮಟ್ಟದಿಂದ ನಿಯೋಜನೆಯಾಗುವ ರಾಷ್ಟ್ರೀಯ ನಾಯಕರ ಉಸ್ತುವಾರಿಯಲ್ಲೇ ಚುನಾವಣೆ ನಡೆಸಲು ವರಿಷ್ಠರು ಚಿಂತಿಸಿದ್ದಾರೆ. ಜತೆಗೆ ರಾಜ್ಯ ಬಿಜೆಪಿಯಲ್ಲಿ ಹಾಲಿ ಪ್ರಮುಖ ಜವಾಬ್ದಾರಿ ಹೊತ್ತವರ ಬದಲಾವಣೆಗಿಂತ ಪರ್ಯಾಯವಾಗಿ ಇನ್ನಷ್ಟು ಮಂದಿಗೆ ಜವಾಬ್ದಾರಿ ಹಂಚಿಕೆ ಮಾಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.
Related Articles
ರಾಜ್ಯ ಬಿಜೆಪಿಯಲ್ಲಿ ನಾಯಕರ ಬಣ ರಾಜಕೀಯವೇ ಹೆಚ್ಚು ತಲೆನೋವಾಗಿ ಪರಿಣಮಿಸಿದೆ. ಆಯ್ದ ನಾಯಕರ ನಡುವೆ ಇತರೆ ಪದಾಧಿಕಾರಿಗಳು, ಪ್ರಭಾವಿ ನಾಯಕರು ಹಂಚಿ ಹೋಗಿದ್ದು, ಅವರ ನಡುವಿನ ಅನಾರೋಗ್ಯಕರ ಸ್ಪರ್ಧೆಯಿಂದಲೇ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ ಎಂದು ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ ಯಾವುದೇ ಬಣದ ನಾಯಕರೊಂದಿಗೆ ನಂಟು ಹೊಂದಿರದ ಸಂಘಟನೆಯಲ್ಲಿ ಸಕ್ರಿಯರೆನಿಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ನಾಯಕರೊಬ್ಬರನ್ನು ರಾಜ್ಯಕ್ಕೆ ನಿಯೋಜಿಸಲು ಚಿಂತಿಸಿದ್ದಾರೆ ಎಂದು ರಾಜ್ಯದ ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
Advertisement
ನಾಯಕರ ನಡುವಿನ ಭಿನ್ನಾಭಿಪ್ರಾಯ ನಿವಾರಿಸುವುದು. ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತವಾಗಿ ಚುನಾವಣೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಅವರು ಕಾರ್ಯ ನಿರ್ವಹಿಸಲಿದ್ದಾರೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆಯನ್ನು ಅವರ ಉಸ್ತುವಾರಿಯಲ್ಲೇ ನಡೆಸುವ ಮೂಲಕ ಯಾವುದೇ ರೀತಿಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಂತೆ ಕ್ರಮ ವಹಿಸಲು ವರಿಷ್ಠರು ನಿರ್ಧರಿಸಿದ್ದಾರೆ. ಹಾಗಾಗಿ ಅನ್ಯ ರಾಜ್ಯಗಳಿಗಿಂತ ಮುಂಚಿತವಾಗಿ ಕರ್ನಾಟಕಕ್ಕೆ ಉಸ್ತುವಾರಿಯೊಬ್ಬರನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಪರ್ಯಾಯ ನಾಯಕರಿಗೆ ಜವಾಬ್ದಾರಿಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ರಾಜ್ಯ ಬಿಜೆಪಿಯಲ್ಲಿನ ಪ್ರಭಾವಿ ನಾಯಕರು, ಪ್ರಮುಖ ಜವಾಬ್ದಾರಿಗಳನ್ನು ಹೊತ್ತವರನ್ನು ಬದಲಾವಣೆ ಮಾಡಿದರೆ ಪಕ್ಷ ಸಂಘಟನೆ ಮೇಲೆ ವ್ಯತಿರಿಕ್ತ ಬೆಳವಣಿಗೆಗಳಾಗಿ ಚುನಾವಣೆ ಮೇಲೆ ಪರಿಣಾಮ ಬೀರಿದರೂ ಆಶ್ಚರ್ಯವಿಲ್ಲ. ಆ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ಬದಲಾವಣೆಗೆ ವರಿಷ್ಠರು ಆಸಕ್ತಿ ತೋರಿದಂತಿಲ್ಲ. ಬದಲಿಗೆ ಪರ್ಯಾಯ ನಾಯಕರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಪಕ್ಷ ಸಂಘಟನೆಗೆ ನಿಯೋಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಆಯ್ದ ಜವಾಬ್ದಾರಿ ಹೊತ್ತವರ ಜತೆಗೆ ಹೊಸಬರಿಗೂ ಜವಾಬ್ದಾರಿಯನ್ನು ಹಂಚಿಕೆ ಮಾಡುವುದರಿಂದ ಇಬ್ಬರ ನಡುವೆ ಆರೋಗ್ಯಕರ ಪೈಪೋಟಿ ಸೃಷ್ಟಿಯಾಗಲಿದೆ. ಜತೆಗೆ ಸಂಘಟನೆ ದೃಷ್ಟಿಯಿಂದಲೂ ಏಕಕಾಲಕ್ಕೆ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಲಿದೆ. ಅಲ್ಲದೇ ಸಾಮರ್ಥಯವಿದ್ದೂ ಜವಾಬ್ದಾರಿ ಇಲ್ಲವೆಂಬ ಕಾರಣಕ್ಕೆ ಹೆಚ್ಚು ಸಕ್ರಿಯರಾಗಿಲ್ಲದ ನಾಯಕರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಿದೆ ಎಂಬುದು ವರಿಷ್ಠರ ಲೆಕ್ಕಾಚಾರ ಎನ್ನಲಾಗಿದೆ.