Advertisement

Delegation Demand: ತಿಂಗಳೊಳಗೆ ಪ್ರಾಥಮಿಕ ಶಾಲಾ ಶಿಕ್ಷಕರ ಮುಂಭಡ್ತಿ ಅಂತಿಮ: ಸಿದ್ದರಾಮಯ್ಯ

01:15 AM Sep 05, 2024 | Team Udayavani |

ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಭಡ್ತಿ ಹಾಗೂ ಇತರ ಸೇವಾ ಬೇಡಿಕೆಗಳಿಗೆ ಸಂಬಂಧಿಸಿ ದಂತೆ 1 ತಿಂಗಳೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಬುಧವಾರ ಗೃಹಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗದ ಬೇಡಿಕೆಗಳನ್ನು ಸ್ವೀಕರಿಸಿ, ಚರ್ಚಿಸಿದ ಬಳಿಕ ಸಿಎಂ ಈ ಭರವಸೆ ನೀಡಿದರು. ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳೊಂದಿಗೆ, ಕಾನೂನು ತೊಡಕುಗಳು ಹಾಗೂ ಇತರ ವಿಷಯಗಳ ಬಗ್ಗೆ ಸಮಗ್ರವಾಗಿ ಸಮಾಲೋಚನೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

2017ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಿದ ಬಳಿಕ ಸೇವಾ ನಿಯಮಗಳನ್ನು ಪೂರ್ವಾನ್ವಯವಾಗುವಂತೆ ಅನುಷ್ಠಾನಗೊಳಿಸಬಾರದು. ಸ್ನಾತಕೋತ್ತರ, ಪದವೀಧರರಾಗಿರುವ 40 ಸಾವಿರಕ್ಕೂ ಹೆಚ್ಚು ಇರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಆದೇಶ ಹೊರಡಿಸಬೇಕು.

2016ಕ್ಕೂ ಮೊದಲು ನೇಮಕಾತಿ ವೇಳೆ 1ರಿಂದ 7ನೇ ತರಗತಿವರೆಗೆ ಎಂದು ಹೇಳಿ ಈಗ 1ರಿಂದ 5ನೇ ತರಗತಿವರೆಗೆ ಮಾತ್ರ ಎಂದು ಹಿಂಭಡ್ತಿ ನೀಡಲಾಗಿದೆ. ಇದರಿಂದ ಸಾವಿರಾರು ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ನಿಯೋಗದಲ್ಲಿದ್ದವರು ಸಿಎಂ ಗಮನ ಸೆಳೆದರು. ಅಧಿಕಾರಿಗಳನ್ನು ಪ್ರಶ್ನಿಸಿದ ಸಿಎಂ, 1 ರಿಂದ 5ನೇ ತರಗತಿಗೆ ತೆಗೆದುಕೊಂಡರೆ ಹೇಗೆ? ಆ ಆದೇಶ ಹಿಂಪಡೆಯಲಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಕಾನೂನು ಪರಿಶೀಲನೆ ಮಾಡಬೇಕೆಂದು ಅಧಿಕಾರಿಗಳು ಹೇಳಿದಾಗ, ಆದಷ್ಟು ಬೇಗ ತಿಳಿಸಿ ಎಂದರು.

ಆಯಾ ಜಿಲ್ಲಾ ನೇಮಕಾತಿ ಸಮಿತಿಯ ಮಟ್ಟದಲ್ಲಿ ಮುಖ್ಯೋಪಾಧ್ಯಾಯ ಹುದ್ದೆಗಳಿಗೆ ಈ ಮೊದಲು ಮುಂಭಡ್ತಿ
ನೀಡಲಾಗುತ್ತಿತ್ತು. ಅದನ್ನು ಕಳೆದ 3 ವರ್ಷಗಳಿಂದ ನಿಲ್ಲಿಸಲಾಗಿದ್ದು, ಇದನ್ನು ಮುಂದುವರಿಸಬೇಕು ಎಂದು ಸಹ ನಿಯೋಗ ಮನವಿ ಸಲ್ಲಿಸಿತು. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next