ಬೆಂಗಳೂರು: ಗಾಂಜಾ ಮಾರಾಟ ಆರೋಪದ ಮೇಲೆ ಬ್ಯಾಡರಹಳ್ಳಿ ಇತ್ತೀಚೆಗೆ ಪೊಲೀಸರ ಬಲೆಗೆ ಬಿದ್ದಿದ್ದ ಆರೋಪಿ ವಾಸೀಂ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯೊಂದನ್ನು ಪೊಲೀಸರಿಗೆ ನೀಡಿದ್ದಾನೆ. ನಗರದ ಪ್ರಮುಖ ಶಾಲಾ, ಕಾಲೇಜುಗಳು ಸೇರಿದಂತೆ ಎಲ್ಲ ಮಾದರಿಯ ಎಂಜನಿಯರಿಂಗ್ ಕಾಲೇಜುಗಳಿಗೆ ಉಲ್ಲಾಳದ ವೆಂಕಟಪ್ಪ ಲೇಔಟ್‌ನಿಂದಲೇ ಗಾಂಜಾ ಸರಬರಾಜು ಆಗುತ್ತಿದೆ ಎಂದು ಆತ ಬಾಯಿಬಿಟ್ಟಿದ್ದಾನೆ.
ವಿಪರ್ಯಾಸವೆಂದರೆ ಇಂತಹ ಅಕ್ರಮ ದಂಧೆಗೆ ಇದೇ ಲೇಔಟ್‌ನ ಕೆಲ ವ್ಯಕ್ತಿಗಳು ಸಹಕಾರ ನೀಡುತ್ತಿದ್ದು, ಆರೋಪಿಗಳಿಂದ ನಿತ್ಯ ಇಂತಿಷ್ಟು ಹಣ ಪಡೆಯುತ್ತಿದ್ದಾರೆ. ಅಲ್ಲದೇ, ಮಂಗನಪಾಳ್ಯ ಸುತ್ತ-ಮುತ್ತಲ ಸ್ಥಳೀಯರಿಗೆ 200-300 ರೂಪಾಯಿ ಕೊಟ್ಟು ತಮ್ಮ ಮಾಹಿತಿದಾರರನ್ನಾಗಿ ಇರಿಸಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕು ಮಾಡಿರುವ ಪೊಲೀಸರು, ವಾಸೀಂ ಬಂಧನದ ವೇಳೆ ನಾಪತ್ತೆಯಾಗಿದ್ದ ರೌಡಿಶೀಟರ್ ಕಾರ್ತಿಕ್, ಹಮೀದ್ ಹಾಗೂ ಇವರ ಸಹಚರರನ್ನು ಬಂಧಿಸಲು ಪ್ರತ್ಯೇಕ ತಂಡ ರಚಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದಾರೆ.
ಜುಲೈ 23ರಂದು ರಾತ್ರಿ ಇಲ್ಲಿನ ವೆಂಕಟಪ್ಪ ಲೇಔಟ್‌ನ ಬಯಲು ಪ್ರದೇಶದಲ್ಲಿ ರೌಡಿಶೀಟರ್ ಕಾರ್ತಿಕ್, ಹಮೀದ್ ಹಾಗೂ ಬೆಂಬಲಿಗರು ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಬ್ಯಾಡರಹಳ್ಳಿ ಠಾಣೆ ಪಿಐ ಸತ್ಯನಾರಾಯಣ ಸಿಬ್ಬಂದಿ ಜತೆ ತೆರಳಿ ಬಂಧಿಸಲು ಮುಂದಾದಾಗ ದುಷ್ಕರ್ಮಿಗಳು ಪೊಲೀಸರಿಗೆ ಚಾಕುವಿನಿಂದ ಇರಿದು ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ವಾಸೀಂ ಎಂಬಾತನನ್ನು ಬಂಧಿಸಲಾಗಿತ್ತು. ಕಾರ್ತಿಕ್, ಹಮೀದ್ ನಾಪತ್ತೆಯಾಗಿದ್ದಾರೆ.
ರೌಡಿಶೀಟರ್‌ನ ನೆರವು: ಜುಲೈ 23ರಂದು ಬ್ಯಾಡರಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಮೇಲೆ ಹಲ್ಲೆ ನಡೆಸಿ ಪರಾರಿಯಾದ ರೌಡಿಶೀಟರ್ ಕಾರ್ತಿಕ್ ಗಾಂಜಾ ಮಾರಾಟ ದಂಧೆಯ ರೂವಾರಿ ಎಂಬುದು ತಿಳಿದು ಬಂದಿದೆ. ಈತನ ಅಣತಿಯಂತೆ ವಾಸೀಂ ಮತ್ತು ಹಮೀದ್ ಗಾಂಜಾವನ್ನು ಎಂಜಿನಿಯರಿಂಗ್ ಕಾಲೇಜುಗಳ ಬಳಿ ಮಾರಾಟ ಮಾಡುತ್ತಿದ್ದರು. ಒಂದು ವೇಳೆ ಈ ದಂಧೆಯನ್ನು ಯಾರಾದರೂ ಪ್ರಶ್ನಿಸಿದರೆ ಅವರ ಮೇಲೆಯೇ ಕಾರ್ತಿಕ್ ಗೂಂಡಾಗಳನ್ನು ಬಿಟ್ಟು ಹಲ್ಲೆ ನಡೆಸುತ್ತಿದ್ದ. ಹೀಗಾಗಿ ಸ್ಥಳೀಯರು ಈತನ ದಂಧೆಯನ್ನು ಪ್ರಶ್ನಿಸುತ್ತಿರಲಿಲ್ಲ ಎನ್ನಲಾಗಿದೆ.
ಯಾರು ಈ ಕಾರ್ತಿಕ್?: ತಮಿಳುನಾಡು ಮೂಲದ ಕಾರ್ತಿಕ್ ಹತ್ತಾರು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದಾನೆ. ಕೆಲ ಪುಂಡರೊಂದಿಗೆ ಸೇರಿಕೊಂಡು ದರೋಡೆ, ಕೊಲೆ ಇತರೆ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಹೀಗೆ ನಗರದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ನಾಲ್ಕು ಕೊಲೆ, ಐದು ದರೋಡೆ, ಕೊಲೆಗೆ ಯತ್ನ ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಅಲ್ಲದೇ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಪೊಲೀಸ್ ಮಾಹಿತಿದಾರರಾಗಿದ್ದ ಶೇರು ಮತ್ತು ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ಒಬ್ಬರನ್ನು ನಡು ರಸ್ತೆಯಲ್ಲೆ ಹತ್ಯೆಗೈದು ವಿಕೃತಿ ಮೆರೆದಿದ್ದ. ಇತ್ತೀಚೆಗೆ ಉಲ್ಲಾಳ ಮುಖ್ಯರಸ್ತೆಯ ಬಸ್ ನಿಲ್ದಾಣದಲ್ಲೇ ವ್ಯಕ್ತಿಯೊಬ್ಬರನ್ನು ಕೊಲೆಗೈದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನೆರೆರಾಜ್ಯಗಳಿಂದ ಗಾಂಜಾ: ಗಾಂಜಾ ಹಾಗೂ ಮಾದಕ ವಸ್ತು ಮಾರಾಟಗಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಆಂಧ್ರಪ್ರದೇಶ, ತಮಿಳುನಾಡಿನಿಂದ ಚಿಕ್ಕಬಳ್ಳಾಪುರ, ಕೋಲಾರದ ಮೂಲಕ ಗಾಂಜಾ ತರುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ ಅಕ್ರಮ ದಂಧೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ವಾಸೀಂ ಮತ್ತು ತಲೆಮರೆಸಿಕೊಂಡಿರುವ ಹಮೀದ್ ತಾವೇ ಸ್ವತಃ ಆಂಧ್ರಪ್ರದೇಶ ಹಾಗೂ ಇತರೆ ನೆರೆ ರಾಜ್ಯಗಳಿಗೆ ತೆರಳಿ ಗಾಂಜಾವನ್ನು ಅಕ್ರಮವಾಗಿ ನಗರಕ್ಕೆ ತರುತ್ತಿದ್ದರು. ಬಳಿಕ ಕಾಲೇಜುಗಳ ಬಳಿ ಬಹಿರಂಗವಾಗಿಯೇ ಮಾರಾಟ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಮುಖಂಡರಿಗೆ ಹಫ್ತಾ: ಸ್ಥಳೀಯರ ನೆರವಿನಿಂದಲೇ ಅಕ್ರಮ ದಂಧೆ ನಡೆಸುತ್ತಿದ್ದ ಆರೋಪಿಗಳು ಅವರಿಗೆ ದಂಧೆಯ ಕೆಲ ಪಾಲು ನೀಡುತ್ತಿದ್ದರು ಎಂಬ ಮಾಹಿತಿಯನ್ನು ವಾಸೀಂ ವಿಚಾರಣೆ ವೇಳೆ ಹೇಳಿದ್ದಾನೆ. ಜತೆಗೆ ಸ್ಥಳೀಯ ಮುಖಂಡರೇ ತಮ್ಮ ಬೆಂಬಲಿಗರಿಂದ ಪೊಲೀಸರ ಚಲನವಲನಗಳ ಬಗ್ಗೆ ಮಾಹಿತಿ ಪಡೆದು ಆರೋಪಿಗಳಿಗೆ ನೀಡುತ್ತಿದ್ದರು. ಇದಕ್ಕಾಗಿ ಮುಖಂಡರಿಗೆ ಆರೋಪಿಗಳು ಪ್ರತಿ ತಿಂಗಳು ಹಫ್ತಾ ನೀಡುತ್ತಿದ್ದರು ಎಂಬುದು ತಿಳಿದು ಬಂದಿದೆ.