Advertisement

ಬೇಡ್ತಿ ಏತ ನೀರಾವರಿ ವಿಳಂಬ; ಕ್ರಮಕ್ಕೆ ತಾಕೀತು

11:59 AM May 09, 2022 | Team Udayavani |

ಹುಬ್ಬಳ್ಳಿ: ಕಲಘಟಗಿ ತಾಲೂಕಿನ 35 ಕೆರೆಗಳಿಗೆ ನೀರು ತುಂಬಿಸುವ ಬೇಡ್ತಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಲ್ಲಿ ವಿಳಂಬ ಮಾಡುತ್ತಿರುವ ಬೆಂಗಳೂರಿನ ಮೆ.ಅಮೃತ ಕನ್‌ಸ್ಟ್ರಕ್ಷನ್‌ ಪ್ರೈ. ಲಿಮಿಟೆಡ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಕಲಘಟಗಿ ತಾಲೂಕಿನಲ್ಲಿ ರವಿವಾರ ಹಿರಿಯ ಅಧಿಕಾರಿಗಳ ಜತೆ ಕಾಮಗಾರಿಯ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ನಿಧಾನಗತಿಯ ಕಾಮಗಾರಿ ಕಂಡು ಬೇಸರ ವ್ಯಕ್ತಪಡಿಸಿದರು.

ಕೊರೊನಾ ಹಿನ್ನೆಲೆ ಒಂದೂವರೆ ವರ್ಷ ಹೆಚ್ಚುವರಿ ಅವಧಿ ನೀಡಲಾಗಿದೆ. ನಿಗದಿತ ಅವಧಿಗಿಂತ ಒಂದು ವರ್ಷ ವಿಳಂಬವಾಗಿದ್ದರೂ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಅಷ್ಟೇ ಅಲ್ಲ ಇನ್ನೂ ಅರ್ಧದಷ್ಟು ಕಾಮಗಾರಿಯೂ ಆಗಿಲ್ಲ. ಇದು ಗುತ್ತಿಗೆದಾರರ ನಿರ್ಲಕ್ಷ್ಯ ತೋರಿಸುತ್ತದೆ ಎಂದರು.

ಸರಕಾರದ ಹಣ ಅಪವ್ಯಯ ಆಗುತ್ತಿದೆ. ಹಾಗಾಗಿ ಗುತ್ತಿಗೆ ಸಂಸ್ಥೆಯ ವಿರುದ್ಧ ರಿಸ್ಕ್ ಆ್ಯಂಡ್‌ ಕಾಸ್ಟ್ ಪ್ರಪೋಸಲ್‌ ಸಲ್ಲಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು. ನೀವು ಪ್ರಸ್ತಾವನೆ ಕೊಡಿ, ಅದನ್ನು ಪರಿಶೀಲಿಸಿ ದಂಡ ಹಾಕುವ ಜತೆಗೆ ಟೆಂಡರ್‌ ರದ್ದುಗೊಳಿಸಿ, ಗುತ್ತಿಗೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸೋಣ, ಉಳಿದ ಕಾಮಗಾರಿಗೆ ಹೊಸದಾಗಿ ಟೆಂಡರ್‌ ಕರೆಯೋಣ. ತೀವ್ರಗತಿಯಲ್ಲಿ ಕಾಮಗಾರಿ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಮ್ಮ ಕಾರ್ಯಶೈಲಿಯಲ್ಲಿ ಯಾವುದೇ ರಾಜೀ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾಮಗಾರಿ ಇಷ್ಟೊಂದು ವಿಳಂಬ ಆಗುತ್ತಿದ್ದರೂ ಗುತ್ತಿಗೆದಾರರ ವಿರುದ್ಧ ಯಾವುದೇ ನೋಟಿಸ್‌ ಕೂಡ ನೀಡದಿರುವ ಅಧಿಕಾರಿಗಳ ನಿಲುವಿಗೂ ಬೇಸರ ವ್ಯಕ್ತಪಡಿಸಿದ ಸಚಿವರು, ರೈತರು ಮತ್ತು ಸರ್ಕಾರದ ಹಿತದ ಪರವಾಗಿ ಅಧಿಕಾರಿಗಳು ಕೆಲಸ ಮಾಡಬೇಕೆ ವಿನಃ ಗುತ್ತಿಗೆದಾರರ ಹಿತ ಕಾಯುವುದಲ್ಲ ಎಂದು ಬಿಸಿ ಮುಟ್ಟಿಸಿದರು.

Advertisement

ಸ್ಥಳದಲ್ಲಿದ್ದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಎಚ್‌.ಎನ್‌. ಶ್ರೀನಿವಾಸ, ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಕೆ. ಕುಲಕರ್ಣಿ ಅವರು, ಗುತ್ತಿಗೆ ಸಂಸ್ಥೆಗೆ ತಕ್ಷಣ ನೋಟಿಸ್‌ ನೀಡಿ, ಶೀಘ್ರದಲ್ಲಿ ರಿಸ್ಕ್ ಆ್ಯಂಡ್‌ ಕಾಸ್ಟ್ ಪ್ರಪೋಸಲ್‌ ಸಲ್ಲಿಸುವುದಾಗಿ ಭರವಸೆ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ವಿ.ಎಸ್‌. ಪಾಟೀಲ, ಗಂಗಪ್ಪ ಗಾಳಿ, ಸುನೀಲ ಗಬ್ಬೂರ, ತಹಶಿಲ್ದಾರ ಯಲ್ಲಪ್ಪ ಗೋಣೆಣ್ಣವರ ಇನ್ನಿತರರಿದ್ದರು.

ಯೋಜನೆ ವಿವರ: ಕಲಘಟಗಿ ತಾಲೂಕು ಬೆಲವಂತರ ಗ್ರಾಮದ ಬಳಿ ಬೇಡ್ತಿ (ಶಾಲ್ಮಲಾ) ನದಿಗೆ ಚೆಕ್‌ ಡ್ಯಾಂ ನಿರ್ಮಿಸಿ, ಅಲ್ಲಿಂದ ನೀರೆತ್ತಿ 153 ಕಿಮೀ ಉದ್ದದ ಪೈಪ್‌ ಲೈನ್‌ ಮೂಲಕ 35 ಕೆರೆಗಳನ್ನು ತುಂಬಿಸುವ ಯೋಜನೆ ಇದು. ಇದಕ್ಕಾಗಿ 122 ಕೋಟಿ ಮೊತ್ತ ನಿಗದಿ ಮಾಡಲಾಗಿದೆ. 2018 ಫೆಬ್ರವರಿಯಿಂದ 2020ರ ಜನವರಿ ಕಾಮಗಾರಿಯ ಅವಧಿ. ಕೆರೆಗಳಿಗೆ ನೀರು ತುಂಬಿಸುವ ಮೂಲಕ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು, ಕಾಲುವೆಗಳ ಮೂಲಕ ನೀರಾವರಿ ಮಾಡುವುದು, ಅಂತರ್ಜಲ ಹೆಚ್ಚಿಸುವುದು, 20 ಸಾವಿರ ಎಕರೆ ಪ್ರದೇಶವನ್ನು ನೀರಾವರಿ ಮಾಡುವ ಉದ್ದೇಶವನ್ನು ಜಲಸಂಪನ್ಮೂಲ ಇಲಾಖೆ ಹೊಂದಿದೆ. ಕಲಘಟಗಿ ತಾಲೂಕಿನಲ್ಲೇ ಅತೀ ದೊಡ್ಡ ನೀರಾವರಿ ಯೋಜನೆ ಇದಾಗಿದೆ.

ಎರಡೇ ದಿನದಲ್ಲಿ ಪರಿಹಾರ: ಬೇಡ್ತಿ ಏತ ನೀರಾವರಿ ಯೋಜನೆಗೆ ಬೆಲವಂತರ ಗ್ರಾಮದ 13 ರೈತರ ಭೂಮಿ ಬಳಕೆಯಾಗಿದೆ. ಭೂಸ್ವಾಧೀನ ಮಾಡಿಕೊಂಡು ನಾಲ್ಕು ವರ್ಷ ಕಳೆಯುತ್ತ ಬಂದರೂ ಪರಿಹಾರ ನೀಡಿಲ್ಲ, ಎಷ್ಟೇ ಗೋಗರೆದರೂ ಅಧಿಕಾರಿಗಳು ಕಣ್ತೆರೆದು ನೋಡುತ್ತಿಲ್ಲ ಎಂದು ರೈತರು ಸಚಿವರ ಎದುರು ಗೋಳು ತೋಡಿಕೊಂಡರು. ಶಾಸಕ ಸಿ.ಎಂ. ನಿಂಬಣ್ಣವರ ಕೂಡ ಅವರ ಪರವಾಗಿ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಒಪ್ಪಿಗೆ ನಿಯಮಾವಳಿ(ಕನ್ಸೆಂಟ್‌) ಅಡಿಯಲ್ಲಿ ಎರಡೇ ದಿನಗಳಲ್ಲಿ ಪರಿಹಾರ ನೀಡುವಂತೆ ಭೂಸ್ವಾಧೀನ ಅಧಿಕಾರಿಗೆ ತಾಕೀತು ಮಾಡಿದರು.

ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಕಾಮಗಾರಿಗಳು ತೀವ್ರಗತಿಯಲ್ಲಿ ಸಾಗಿವೆ. ಯೋಜನೆ ಪೂರ್ತಿಗೊಳಿಸುವಲ್ಲಿ ಅನಗತ್ಯ ವಿಳಂಬ ಮಾಡುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಕೊಳ್ಳುತ್ತೇವೆ. ಎಲ್ಲ ಯೋಜನೆಗಳ ಅಂಚಿನ (ಟೇಲ್‌ ಎಂಡ್‌) ರೈತರ ಹೊಲಕ್ಕೂ ನೀರು ತಲುಪಿಸುವ ಪ್ರಯತ್ನವನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. –ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next