Advertisement

ಸಮನ್ವಯ ಕೊರತೆಯಿಂದ ಗುಂಡಿ ಮುಚ್ಚುವ ಕಾಮಗಾರಿ ವಿಳಂಬ

12:37 PM Oct 23, 2018 | Team Udayavani |

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಸಮನ್ವಯತೆ ಕೊರತೆ ಕಾರಣ ಎಂದು ಖುದ್ದು ಮೇಯರ್‌ ಗಂಗಾಬಿಕೆ ತಿಳಿಸಿದ್ದಾರೆ. ರಸ್ತೆಗುಂಡಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ವಿಚಾರದಲ್ಲಿ ಜಲಮಂಡಳಿ, ಬೆಸ್ಕಾಂ, ಬಿಬಿಎಂಪಿ ಇಂಜಿನಿಯರ್‌ಗಳ ನಡುವೆ ಸಮನ್ವಯ ಕೊರತೆ ಇದೆ.

Advertisement

ಹೀಗಾಗಿ, ನಾಲ್ಕೂ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಆದಷ್ಟು ಬೇಗ ಎಲ್ಲಾ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಹೇಳಿದರು. ರಸ್ತೆ ಗುಂಡಿ ಮುಚ್ಚಲು ಹೈಕೋರ್ಟ್‌ ಸೂಚನೆ ನೀಡಿ ತಿಂಗಳಾದರೂ ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ  628 ರಸ್ತೆ ಗುಂಡಿಗಳಿದ್ದು, ಮುಚ್ಚಿರುವ ಗುಂಡಿಗಳ ಕಾಮಗಾರಿಯೂ ಕಳಪೆಯಾಗಿದೆ ಎಂಬ ಆರೋಪ ಕುರಿತು ಕೇಳಿದಾಗ,

ಹೈಕೋರ್ಟ್‌ ಸೂಚಿಸಿದ ದಿನದಿಂದ ಇಲ್ಲಿಯವರೆಗೂ ಪ್ರತಿದಿನ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಮುಚ್ಚಿದ ಸ್ಥಳದಲ್ಲಿ ಬಿಟ್ಟು ಬೇರೆ ಜಾಗಗಳಲ್ಲಿ ಹೊಸ ಗುಂಡಿಗಳು ಬೀಳುತ್ತವೆ. ಆ ಗುಂಡಿಗಳನ್ನು ಮುಚ್ಚುವ ಕಾರ್ಯ ನಿರಂತರವಾಗಿ ನಡೆಯುತ್ತದೆ ಎಂದು ತಿಳಿಸಿದರು. ಈಗಾಗಲೇ ನಗರದಲ್ಲಿನ ಬಹುತೇಕ ಗುಂಡಿಗಳನ್ನು ಮುಚ್ಚಲಾಗಿದ್ದು, ಕೆಲವು ಕಡೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದರಿಂದ ಇನ್ನು 628 ಗುಂಡಿಗಳು ಬಾಕಿ ಉಳಿದಿವೆ ಎಂದು ಹೇಳಿದರು.

ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಪರಿಶೀಲನೆ ವೇಳೆ ಕಳಪೆ ಕಾಮಗಾರಿ ಬಗ್ಗೆ ತಿಳಿದುಬಂದರೆ ಅಲ್ಲಿನ ಎಂಜಿನಿಯರ್‌ ವಿರುದ್ಧ ಕ್ರಮಕೈಗೊಂಡು ಮರು ಡಾಂಬರೀಕರಣಕ್ಕೆ ಆದೇಶ ಮಾಡಲಾಗುವುದು.

ರಾಜರಾಜೇಶ್ವರಿನಗರ ಗೇಟ್‌ನಿಂದ ನಾಯಂಡಹಳ್ಳಿವರೆಗೆ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ದೂರು ಬಂದಿದೆ. ಆ ಭಾಗದಲ್ಲಿ ಶೀಘ್ರವೇ ಡಾಂಬರೀಕರಣ ಮಾಡಲು ಸೂಚಿಸಲಾಗಿದೆ. ಒಳಚರಂಡಿ ಪೈಪುಗಳ ಸೋರಿಕೆಯಿಂದ ಈ ರೀತಿ ಸಂಪೂರ್ಣ ರಸ್ತೆಯಲ್ಲಿ ಗುಂಡಿಗಳು ಬೀಳುತ್ತಿದ್ದು, ಅವುಗಳನ್ನು ಸಹ ಮುಚ್ಚುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು

Advertisement

ಇಂಜಿನಿಯರ್‌ಗಳ ವಿರುದ್ಧ ಗರಂ
ಬೆಂಗಳೂರು:
ದಸರಾ ಹಬ್ಬದ ವ್ಯಾಪಾರ ವಹಿವಾಟು ಮುಗಿದು ಮೂರು ದಿನಗಳಾದರೂ ನಗರದ ಕಸ ವಿಲೇವಾರಿ ಆಗದಿರುವುದಕ್ಕೆ ಮೇಯರ್‌ ಗಂಗಾಂಬಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮುಂದಿನ 24 ಗಂಟೆಯಲ್ಲಿ ನಗರವನ್ನು ಸ್ವತ್ಛಗೊಳಿಸಬೇಕೆಂದು ಸೂಚನೆ ನೀಡಿದರು.

ನಗರದ ಕೆ.ಆರ್‌.ಮಾರುಕಟ್ಟೆ, ಗಾಂಧಿಬಜಾರ್‌ ಸೇರಿದಂತೆ ವಿವಿಧ ಬಡಾವಣೆಗಳಿಗೆ ಸೋಮವಾರ ಭೇಟಿ ನೀಡಿದ ಅವರು ಅಲ್ಲಿನ ಕಸ ವಿಲೇವಾರಿ ಪರಿಶೀಲನೆ ನಡೆಸಿದರು. ದಸರಾ ಹಬ್ಬದ ವೇಳೆ ವ್ಯಾಪಾರಿಗಳು ಹಾಕಿರುವ ಕಸ ಇನ್ನು ವಿವೇವಾರಿ ಆಗದಿದ್ದನ್ನು ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು.

ಆನಂತರ ವಲಯಗಳ ಇಂಜಿನಿಯರ್‌ಗಳನ್ನು ಕರೆಸಿ ಮಂಗಳವಾರ ಬೆಳಗ್ಗೆ ವೇಳೆಗೆ ಮಾರುಕಟ್ಟೆಗಳು ಸೇರಿದಂತೆ ಪಾದಚಾರಿ ಮಾರ್ಗ, ರಸ್ತೆ ಬಿದಿಯಲ್ಲಿ ಹಾಕಲಾದ ಕಸ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ವಾರ್ಡ್‌ಗಳ ಸಹಾಯಕ ಇಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಆಸ್ಪತ್ರೆ ಭೇಟಿ: ನಗರದಲ್ಲಿ ಎಚ್‌1ಎನ್‌1 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇಯರ್‌ ಗಂಗಾಂಬಿಕೆ ಸೋಮವಾರ ಬಿಬಿಎಂಪಿಯ ದಾಸಪ್ಪ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲಿಸಿದರು. ದೂರುಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯುವಂತೆ, ನಿಯಂತ್ರಣ ಕೇಂದ್ರದಕ್ಕೆ ಕರೆ ಮಾಡಿದ ವ್ಯಕ್ತಿಗಳ ವಿಳಾಸ ಪತ್ತೆ ಮಾಡಿ ಅಧಿಕಾರಿಗಳು ಖುದ್ದು ಭೇಟಿ ನೀಡಿ ಶಂಕಿತ ರೋಗಿಗಳ ವೈದ್ಯಕೀಯ ವರದಿಯನ್ನು ಪರಿಶೀಲಿಸುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು. 

ವಲಯಗಳು  –  ಗುಂಡಿಗಳು
-ಪೂರ್ವ – 98
-ಪಶ್ಚಿಮ – 97
-ದಕ್ಷಿಣ – 20
-ಬೊಮ್ಮನಹಳ್ಳಿ -73
-ದಾಸರಹಳ್ಳಿ – 56
-ಮಹದೇವಪುರ – 82
-ಆರ್‌ ಆರ್‌ ನಗರ – 28
-ಯಲಹಂಕ – 89
-ಇತರೆ  – 85
-ಒಟ್ಟು – 628

Advertisement

Udayavani is now on Telegram. Click here to join our channel and stay updated with the latest news.

Next