ಕುದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2021 ಅಕ್ಟೋಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ, 2022 ಮಾರ್ಚ್ 12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ತಾತ್ಕಾಲಿಕ ಕೀ ಉತ್ತರಗಳು ಮತ್ತು ಅಂತಿಮ ಕೀ ಉತ್ತರಗಳನ್ನು ಬಿಡುಗಡೆಗೊಳಿಸಿದೆ. ಆ.18ರಂದು ತಾತ್ಕಾಲಿಕ ಮೆರಿಟ್ ಲೀಸ್ಟ್ ಅನ್ನು ಬಿಡುಗಡೆಗೊಳಿಸಿದೆ.
ತಾತ್ಕಾಲಿಕ ಲಿಸ್ಟ್ ಬಿಡುಗಡೆಯಾಗಿ 25 ದಿನ ಕಳೆದರೂ, ಕೆಇಎ ದಾಖಲಾತಿ ಪರಿಶೀಲನೆಗೆ ಅವಕಾಶ ಕಲ್ಪಿಸದಿರುವುದು ಸಹಾಯಕ ಪ್ರಾಧ್ಯಾಪಕರ ಆಕಾಂಕ್ಷಿಗಳಲ್ಲಿ ನಿರಾಸೆ ಮತ್ತು ಆತಂಕವನ್ನು ಮೂಡಿಸಿದೆ.
ಕರೆ ಸ್ವೀಕರಿಸುತ್ತಿಲ್ಲ: ಪರೀಕ್ಷಾ ಪ್ರಾಧಿಕಾರ ಮತ್ತು ಉನ್ನತ ಶಿಕ್ಷಣ ಇಲಾಖೆಗಳು ಅತ್ಯಂತ ಪಾರದರ್ಶ ಕವಾಗಿ ಪರೀಕ್ಷೆಯನ್ನು ನಡೆಸಿದ್ದರೂ, ದಾಖಲಾತಿ ಪರಿಶೀಲನಾ ವೇಳಾಪಟ್ಟಿ ಬಿಡುಗಡೆ ಮಾಡದಿರುವುದು ಅನುಮಾನ ಮೂಡಿಸಿದೆ. ಇದರ ಬಗ್ಗೆ ವಿಚಾರಿಸಲು ಕೆಇಎಗೆ ಕಳೆದ 25 ದಿನಗಳಿಂದಲೂ ಸಾವಿರಾರು ಅಭ್ಯರ್ಥಿಗಳು ಕರೆ ಮಾಡಿದ್ದರೂ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಮತ್ತು ಲೈನ್ ಬ್ಯುಸಿ ಎಂದು ಬರುವುದಲ್ಲದೆ, ಕರೆ ಕಟ್ಟಾಗುತ್ತದೆ ಎಂದು ವಿದ್ಯಾರ್ಥಿಗಳು ಉದಯವಾಣಿ ಪತ್ರಿಕೆಗೆ ತಿಳಿಸಿದ್ದಾರೆ.
ಮನವಿ ಸಲ್ಲಿಸಿದ್ದರೂ ಪ್ರಯೋಜನವಿಲ್ಲ: ಈಗಾಗಲೇ ಮೂರ್ನಲ್ಕು ಜಿಲ್ಲೆಗಳಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ದಾಖಲಾತಿ ಪರಿಶೀಲನೆ ಬಗ್ಗೆ ಕೆಇಎ ನಿರ್ದೇಶಕರಾಗಲಿ ಅಥವಾ ಉನ್ನತ ಶಿಕ್ಷಣ ಸಚಿವರಾಗಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಆಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿಸಿದೆ.
ಭೂಗೋಳ ಶಾಸ್ತ್ರದ ನಾಲ್ಕು ಅಭ್ಯರ್ಥಿಗಳು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ತನಿಖೆಯಲ್ಲಿ ವರದಿಯಾಗಿದೆ. ಅವರನ್ನ ಹೊರತುಪಡಿಸಿ, ಉಳಿದ ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದ್ದಾರೆ. ಹೀಗಿರುವಾಗ ದಾಖಲಾತಿ ಪರಿಶೀಲನೆಗೆ ವಿಳಂಬ ಏಕೆ? ಹೆಚ್ಚುವರಿ ಹುದ್ದೆಗಳ ಸೇರ್ಪಡೆ ಬಗ್ಗೆಯೂ ಯಾವುದೇ ಮಾಹಿತಿಯಿಲ್ಲ.ದಯಮಾಡಿ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸಿ, ದಾಖಲಾತಿ ಪರಿಶೀಲನೆಗೆ ಅವಕಾಶ ಕಲ್ಪಿಸಿ.
-ಯದುಕುಮಾರ್, ಅಭ್ಯರ್ಥಿ
ಪರೀಕ್ಷೆಯು ಪಾರದರ್ಶಕವಾಗಿ ನಡೆದಿದೆ. ಈ ವಿಷಯವಾಗಿ ಕೆಇಎ ಮತ್ತು ಉನ್ನತ ಶಿಕ್ಷಣ ಇಲಾಖೆಯನ್ನು ನಾವು ಅಭಿನಂದಿಸುತ್ತೇವೆ. ದಯಮಾಡಿ ದಾಖಲಾತಿ ಪರಿಶೀಲನೆ ದಿನಾಂಕ ನಿಗದಿಪಡಿಸಿ, ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ಕಲ್ಪಿಸಬೇಕು.
-ಸತೀಶ್ ಎ.ಎಂ, ಅಭ್ಯರ್ಥಿ
ಪರೀಕ್ಷೆಯು ಪಾರದರ್ಶಕವಾಗಿ ನಡೆದಿದೆ. ಈ ವಿಷಯವಾಗಿ ಕೆಇಎ ಮತ್ತು ಉನ್ನತ ಶಿಕ್ಷಣ ಇಲಾಖೆಯನ್ನು ನಾವು ಅಭಿನಂದಿಸುತ್ತೇವೆ. ದಯಮಾಡಿ ದಾಖಲಾತಿ ಪರಿಶೀಲನೆ ದಿನಾಂಕ ನಿಗದಿಪಡಿಸಿ, ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ಕಲ್ಪಿಸಬೇಕು.
-ಸತೀಶ್ ಎ.ಎಂ, ಅಭ್ಯರ್ಥಿ
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಷೆಡ್ಯೊಲ್ ಸೆಪ್ಟಂಬರ್ 10 ಅಥವಾ 11ರಂದು ಬಿಡುಗಡೆ ಮಾಡಲಾಗುವುದು.
– ಕೆಇಎ ಅಧಿಕಾರಿ
-ಕೆ.ಎಸ್.ಮಂಜುನಾಥ್