ಬೆಂಗಳೂರು: ನಿಗದಿಯಂತೆ ಕಾಮಗಾರಿ ಪೂರ್ಣಗೊಳಿಸಿದ ಬಳಿಕವೂ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ಕ್ಕೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ.
ಪ್ರವಾಸೋದ್ಯಮ ಇಲಾಖೆಯ ಕಟ್ಟಡವೊಂದರ ನವೀಕರಣ ಕಾಮಗಾರಿ ಪೂರ್ಣಗೊಳಿಸಿ ಸಾಕಷ್ಟು ಸಮಯ ಕಳೆದರೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ಪ್ರಥಮ ದರ್ಜೆ ಗುತ್ತಿಗೆದಾರ ಎಂ. ಚಿರಂಜೀವಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ದಂಡ ವಿಧಿಸಿ ಆದೇಶಿಸಿದೆ.
ಕೆಎಸ್‌ಟಿಡಿಸಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಸರಕಾರದ ಸಂಸ್ಥೆಗೆ ಕೆಲಸ ಮಾಡಿಕೊಟ್ಟರೂ ಸೂಕ್ತ ಸಮಯಕ್ಕೆ ಹಣ ಬಿಡುಗಡೆ ಮಾಡದೆ ಗುತ್ತಿಗೆದಾರನಿಗೆ ಕಿರಿಕಿರಿ ನೀಡಲಾಗಿದೆ. ಹಾಗಾಗಿ ಇದು ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸಲು ಸೂಕ್ತವಾದ ಪ್ರಕರಣವಾಗಿದೆ. ಸರಕಾರಿ ಸಂಸ್ಥೆಗಳ ಉದಾಸೀನತೆಯನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂಬ ಸಂದೇಶ ರವಾನೆಯಾಗಬೇಕಿದೆ ಎಂದು ಆದೇಶದಲ್ಲಿ ಹೇಳಿದೆ.
ಅರ್ಜಿದಾರಿಗೆ ಬಡ್ಡಿ ಸಹಿತ ಈ 2 ಲಕ್ಷ ರೂ. ದಂಡ ಮೊತ್ತ ಪಾವತಿಸಬೇಕು. ಇನ್ನೂ ಬಾಕಿ ಉಳಿಸಿಕೊಂಡಿರುವ ಗುತ್ತಿಗೆ ಕಾಮಗಾರಿ ಹಣ 34,85,179 ರೂ.ಗಳನ್ನು ವಾರ್ಷಿಕ ಶೇ.12ರಷ್ಟು ಬಡ್ಡಿದರಲ್ಲಿ ಪಾವತಿಸಬೇಕು. ಈ ಆದೇಶ ಪಾಲಿಸಿದ ಬಗ್ಗೆ ಆರು ವಾರದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ವರದಿ ಸಲ್ಲಿಸಬೇಕು ಎಂದು ಕೆಎಸ್‌ಟಿಡಿಸಿಗೆ ನಿರ್ದೇಶಿಸಿರುವ ಹೈಕೋರ್ಟ್, ಒಂದೊಮ್ಮೆ ಹಣ ಪಾವತಿಸಲು ವಿಳಂಬ ಮಾಡಿದರೆ, ಹೆಚ್ಚುವರಿಯಾಗಿ ಶೇ.1ರಷ್ಟು ಬಡ್ಡಿ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಅಲ್ಲದೆ, ದಂಡದ ಮೊತ್ತ ಮತ್ತು ಬಡ್ಡಿ ಹಣವನ್ನು ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಲೋಪ ಎಸಗಿರುವ ಅಧಿಕಾರಿಗಳಿಂದ ವಸೂಲಿ ಮಾಡಿಕೊಳ್ಳಬಹುದು ಎಂದು ನ್ಯಾಯಪೀಠ ಇದೇ ವೇಳೆ ಹೇಳಿದೆ.
ಪ್ರಕರಣವೇನು?
ಪ್ರವಾಸ್ಯೋದ್ಯಮ ಇಲಾಖೆಗೆ ಸಂಬಂಧಿಸಿದ ಕಟ್ಟಡವೊಂದರ ನವೀಕರಣ ಕಾಮಗಾರಿಯನ್ನು ಕೆಎಸ್‌ಟಿಡಿಸಿಯಿಂದ ಅರ್ಜಿದಾರರು ಗುತ್ತಿಗೆ ಪಡೆದಿದ್ದರು. ಕಾಮಗಾರಿ ಪೂರ್ಣಗೊಳಿಸಿ 2017ರ ಏ.4ರಂದು ಕಟ್ಟಡವನ್ನು ಹಸ್ತಾಂತರಿಸಲಾಗಿತ್ತು. ಏ.10ರಂದು ಕಟ್ಟಡ ಉದ್ಘಾಟನೆ ಮಾಡಲಾಗಿತ್ತು. ಕಾಮಗಾರಿಯ ಬಗ್ಗೆ ಆಕ್ಷೇಪವೂ ಮಾಡಿರಲಿಲ್ಲ. ಕಾಮಗಾರಿ ತೃಪ್ತಿದಾಯಕವಾಗಿರುವುದಾಗಿ ದೃಢೀಕರಣ ಪತ್ರ ಸಹ ನೀಡಲಾಗಿತ್ತು. ಆದರೆ, ಕಟ್ಟಡ ಉದ್ಘಾಟನೆಯಾಗಿ ಹಲವು ತಿಂಗಳು ಕಳೆದರೂ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಿರಲಿಲ್ಲ. ಇದರಿಂದ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು 2018ರ ಅ.11ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.