Advertisement

ಭೂ ದಾಖಲೆಗಳನ್ನು ನೀಡಲು ವಿಳಂಬ ಸಲ್ಲ: ಶೆಟ್ಟರ

11:44 AM Mar 13, 2022 | Team Udayavani |

ಹುಬ್ಬಳ್ಳಿ: ಕಂದಾಯ ಇಲಾಖೆ ದಾಖಲೆ ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಶನಿವಾರ ಕೇಶ್ವಾಪುರ ನಾಗಶೆಟ್ಟಿ ಕೊಪ್ಪದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಚಾಲನೆ ನೀಡಿದರು.

Advertisement

ನಂತರ ಮಾತನಾಡಿ, ಹುಬ್ಬಳ್ಳಿ ನಗರ ತಾಲೂಕಿನ 4,126 ರೈತರಿಗೆ ಪಹಣಿ ಪತ್ರಗಳು ಹಾಗೂ 3,468 ರೈತರಿಗೆ ಇಂಡೆಕ್ಸ್ ವಿತರಿಸಲಾಗುತ್ತಿದೆ. ಕಂದಾಯ ಇಲಾಖೆಯಿಂದ ನೀಡುವ ಪಹಣಿ, ಅಟ್ಲಾಸ್‌, ಆದಾಯ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ಪಡೆಯಲು ಜನರು ವಾರಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇತ್ತು. ಈಗ ಹಂತ ಹಂತವಾಗಿ ಉಚಿತವಾಗಿ ಮನೆ ಬಾಗಿಲಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.

ಜನನ-ಮರಣ ದಾಖಲೆ ಪತ್ರಗಳನ್ನು ತಕ್ಷಣವೇ ನೀಡುವ ಕೆಲಸವಾಗಬೇಕು. ದಾಖಲೆಗಳಲ್ಲಿ ಹೆಸರುಗಳು ತಪ್ಪಾಗಿ ಮುದ್ರಣವಾದ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ದಿನದಂದು ಸಂಜೆಯೊಳಗಾಗಿ ತಿದ್ದುಪಡಿ ಮಾಡಿ ಫಲಾನುಭವಿಗಳಿಗೆ ನೀಡಬೇಕು. ಭೂ ದಾಖಲೆಗಳನ್ನು ನೀಡಲು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಹುಬ್ಬಳ್ಳಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಪ್ರದೇಶಗಳು ನಗರ ವ್ಯಾಪ್ತಿಗೆ ಬಂದಿದ್ದು, ಅವುಗಳಿನ್ನೂ ಭೂ ಮಾಪನ ಇಲಾಖೆ ಸುಪರ್ದಿಗೆ ಬಂದಿಲ್ಲ, ಅದೊಂದು ಕೆಲಸವಾಗಬೇಕಿದೆ ಎಂದು ಹೇಳಿದರು.

ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ ಮಾತನಾಡಿ, ನಗರಕ್ಕೆ ಕಂದಾಯ ಸಚಿವರು ಆಗಮಿಸಿದ್ದ ಸಮಯದಲ್ಲಿ ಅವರೊಂದಿಗೆ ಕಂದಾಯ ದಾಖಲೆ ಜನರ ಮನೆ ಬಾಗಿಲಿಗೆ ಯೋಜನೆ ಕುರಿತು ಚರ್ಚಿಸಿದ್ದು, ಇಂದು ರಾಜ್ಯಾದ್ಯಂತ ಜಾರಿಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಹುಬ್ಬಳ್ಳಿ ನಗರ ತಾಲೂಕು ವ್ಯಾಪ್ತಿಯಡಿ 9 ಸಾಝಾಗಳು ಇವೆ. ತಾಲೂಕಿನ ವ್ಯಾಪ್ತಿಗೆ 25 ಗ್ರಾಮಗಳು ಒಳಪಡುತ್ತವೆ. ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಕೋವಿಡ್‌ನಿಂದ ಮೃತಪಟ್ಟ 178 ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದವರ ಕುಟುಂಬಕ್ಕೆ ತಲಾ 1.50 ಲಕ್ಷದಂತೆ 2.67 ಕೋಟಿ ರೂ. ನೀಡಲಾಗಿದೆ. 511 ಎಪಿಎಲ್‌ ಪಡಿತರ ಚೀಟಿ ಹೊಂದಿದ ಫಲಾನುಭವಿ ಕುಟುಂಬಕ್ಕೆ 50 ಸಾವಿರದಂತೆ 2.55 ಕೋಟಿ ರೂ. ನೀಡಲಾಗಿದೆ. 2021-22ರಲ್ಲಿ 1211 ರೈತರಿಗೆ ಬೆಳೆ ಪರಿಹಾರವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಲಾದೆ. ಮಳೆಯಿಂದ ಹಾನಿಯಾದ ತಾಲೂಕಿನ 88 ಮನೆಗಳಲ್ಲಿ “ಬಿ’ ವರ್ಗದ 24 ಮನೆಗಳಿಗೆ ತಲಾ 5 ಲಕ್ಷ, “ಸಿ’ ವರ್ಗದ 64 ಮನೆಗಳಿಗೆ ತಲಾ 50 ಸಾವಿರ ರೂ. ನೀಡಲಾಗಿದೆ ಎಂದರು.

Advertisement

ನಂತರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಾಗಶೆಟ್ಟಿಕೊಪ್ಪದ ರೈತರ ಮನೆ ಬಾಗಿಲಿಗೆ ತೆರಳಿ ಕಂದಾಯ ದಾಖಲೆಗಳನ್ನು ನೀಡಿದರು. ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮಂಜುನಾಥ ಬುರ್ಲಿ, ಪ್ರಕಾಶ ಕುರಹಟ್ಟಿ, ರೈತ ಮುಖಂಡರಾದ ಮಾರುತಿ ಬೀಳಗಿ, ಬಸವಣೆಪ್ಪ ಮೆಣಸಿನಕಾಯಿ, ಈಶ್ವರಗೌಡ ಪಾಟೀಲ, ರೈತರು, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next