Advertisement

ವಸತಿ ನಿಲಯಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ವಿಳಂಬ

11:12 AM Jun 06, 2022 | Team Udayavani |

ಹುನಗುಂದ: ಶೈಕ್ಷಣಿಕ ವರ್ಷ ಆರಂಭವಾಗಿ ಹದಿನೈದು ದಿನಗಳು ಗತಿಸಿದರೂ ಸರ್ಕಾರ ವಸತಿ ನಿಲಯಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ವಿಳಂಬ ಮಾಡಿದ್ದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ ಸೌಲಭ್ಯ ಸಿಗದೇ ನಿತ್ಯವೂ ಹಣ ಕೊಟ್ಟು ಶಾಲೆಗಳಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಹೌದು. ಪ್ರತಿ ವರ್ಷ ಸರ್ಕಾರ ಶಾಲೆಗಳ ಶೈಕ್ಷಣಿಕ ವರ್ಷವನ್ನು ಮೇ 28-29 ರಂದು ಆರಂಭಿಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷ ಮಹಾಮಾರಿ ಕೊರೊನಾದಿಂದ ಶಾಲೆಗಳು ಸಂಪೂರ್ಣ ಬಂದ್‌ ಆಗಿ ವಿದ್ಯಾರ್ಥಿಗಳ ಕಲಿಕೆಯ ಮತ್ತು ಮಕ್ಕಳ ಭವಿಷ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರಿದ್ದರಿಂದ ಪ್ರಸಕ್ತ ವರ್ಷ ಮೇ 16ರಿಂದ ಅಂದರೆ ಪ್ರತಿ ವರ್ಷಕ್ಕಿಂತ ಹದಿನೈದು ಮುಂಚಿತವಾಗಿಯೇ ಶಾಲೆ ಆರಂಭಿಸಲಾಗಿದೆ.

ಸರ್ಕಾರ ಅದಕ್ಕೆ ಪೂರಕವಾಗಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ 5ರಿಂದ 10ನೇ ತರಗತಿ ಮಕ್ಕಳ ವಸತಿ ಸೌಲಭ್ಯದ ಅರ್ಜಿ ಸಲ್ಲಿಕೆಯ ಕಾರ್ಯ ಮಾಡಬೇಕಿತ್ತು. ಆದರೆ ವಿಳಂಬ ಮಾಡಿದ್ದರಿಂದ ವಸತಿ ಸೌಲಭ್ಯ ಸಿಗಲು ತಡವಾಗಿದ್ದರಿಂದ ತಾಲೂಕಿನ ಸಾವಿರಾರು ಬಡ ವಿದ್ಯಾರ್ಥಿಗಳು ನಿತ್ಯ ಬಸ್‌ಗೆ ತಿರಗಾಡುವಂತಾಗಿದೆ.

ಸರ್ಕಾರಕ್ಕೆ ಪಾಲಕರ ಹಿಡಿಶಾಪ: ಪ್ರಸಕ್ತ ವರ್ಷ ಆರಂಭವಾಗಿ ಅರ್ಧ ತಿಂಗಳುಗಳೇ ಗತಿಸಿದರೂ ವಸತಿ ನಿಲಯಕ್ಕೆ ಅರ್ಜಿ ಆಹ್ವಾನಿಸದೇ ಇರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಗ್ರಾಮೀಣ ಪ್ರದೇಶದ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮಕ್ಕಳ ಪಾಲಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ತಡವಾಯ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ: ವಸತಿ ನಿಲಯದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಜೂನ್‌ 1ರಿಂದ ಆನ್‌ಲೈನ್‌ ಅರ್ಜಿ ಆರಂಭಿಸಿದ್ದು, ವಸತಿ ನಿಲಯದ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ತುಸು ನೆಮ್ಮದಿ ತಂದರೂ ಈ ಪ್ರಕ್ರಿಯೆ ಮುಗಿದು ಹಾಸ್ಟೇಲ್‌ ಸೇರಲು ಇನ್ನು ಒಂದು ತಿಂಗಳ ಹೋಗುತ್ತೇ ಎನ್ನುವ ಆತಂಕ ಕೂಡಾ ಮನೆ ಮಾಡಿದೆ.

Advertisement

ಸರ್ಕಾರದ ವಿಳಂಬ ನೀತಿಯಿಂದ ಇಷ್ಟು ದಿನ ವಿದ್ಯಾರ್ಥಿಗಳು ಪಡಬಾರದ ಕಷ್ಟ ಅನುಭವಿಸಿದ್ದು, ಸರ್ಕಾರ ಈಗಲಾದರೂ ವಸತಿ ನಿಲಯದ ಪ್ರವೇಶ ಆಯ್ಕೆ ಪ್ರಕ್ರಿಯೆಯನ್ನು ಇನ್ನಷ್ಟು ದಿನ ಮುಂದೂಡದೇ ಬೇಗ ಮುಗಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಬೇಕೆನ್ನುವುದು ಪಾಲಕರ ಒತ್ತಾಯವಾಗಿದೆ.

ಸರ್ಕಾರದ ವಸತಿ ನಿಲಯಗಳಿಗೆ ಅರ್ಜಿ ಕರೆಯಲು ಸರ್ಕಾರದ ವಿಳಂಬ ಧೋರಣೆಯಿಂದ ಮಕ್ಕಳಿಗೆ ನಿತ್ಯವೂ ಹಣ ಕೊಟ್ಟು ಶಾಲೆಗೆ ಕಳುಹಿಸಲು ಹರ ಸಾಹಸಪಡುವಂತಾಗಿದೆ.  -ಗ್ಯಾನಪ್ಪ ಪೂಜಾರಿ, ಗ್ರಾಪಂ ಮಾಜಿ ಸದಸ್ಯ, ತಿಮ್ಮಾಪುರ.

ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೋಸ್ಕರ ನಡೆಯುತ್ತಿರುವ ವಸತಿ ನಿಲಯಗಳಿಗೆ ಪ್ರತಿ ವರ್ಷ ಹಾಸ್ಟೇಲ್‌ ಪ್ರವೇಶ ಪ್ರಕ್ರಿಯೆ ಮೇ ಮೊದಲ ವಾರದಲ್ಲಿಯೇ ಆರಂಭವಾಗುತ್ತಿದ್ದವು ಆದರೆ ಪ್ರಸಕ್ತ ವರ್ಷದಲ್ಲಿ ಸ್ವಲ್ಪ ತಡವಾಗಿದೆ. ಸದ್ಯ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಬಹುದು.  -ಎಂ.ಎಚ್‌.ಕಟ್ಟಿಮನಿ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹುನಗುಂದ.      

„ಮಲ್ಲಿಕಾರ್ಜುನ ಎಂ ಬಂಡರಗಲ್ಲ

Advertisement

Udayavani is now on Telegram. Click here to join our channel and stay updated with the latest news.

Next