ಹೊಸದಿಲ್ಲಿ : ಭ್ರಷ್ಟಾಚಾರ ನಿಗ್ರಹಿಸುವ ಲೋಕಪಾಲ ರಚನೆಯನ್ನು ವಿಳಂಬಿಸುವುದು ಎಷ್ಟು ಮಾತ್ರಕ್ಕೂ ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಖಡಕ್ ಆಗಿ ಹೇಳಿದೆ.
ಲೋಕಪಾಲ ರಚನೆಯು ಈಗಾಗಲೇ ಮೂರು ವರ್ಷದಿಂದ ನನೆಗುದಿಗೆ ಬಿದ್ದಿದೆ ಎಂಬ ಅರ್ಜಿಯ ಮೇಲಿನ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಲೋಕಪಾಲ ಸ್ಥಾಪನೆಗೆ ಅವಕಾಶ ಕಲ್ಪಿಸುವ ಕಾನೂನನ್ನು 2013ರಲ್ಲೇ ಸಂಸತ್ತಿನಲ್ಲಿ ಪಾಸು ಮಾಡಲಾಗಿತ್ತು. ಅಣ್ಣಾ ಹಜಾರೆ ನೇತೃತ್ವದಲ್ಲಿ, ಅರವಿಂದ ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಮತ್ತಿತ್ತರ ಭಾರೀ ಹೋರಾಟದ ಬಳಿಕ ಒಂದು ವರ್ಷದ ತರುವಾಯ ಲೋಕಪಾಲ ಮಸೂದೆಯನ್ನು ಕಾಯಿದೆಯಾಗಿ ಜಾರಿಗೆ ತರಲಾಗಿತ್ತು.
ಕಳೆದ ತಿಂಗಳಲ್ಲಿ ಕೇಂದ್ರ ಸರಕಾರ, ಸುಪ್ರೀಂ ಕೋರ್ಟಿಗೆ, “ಲೋಕಪಾಲ ನೇಮಕಾತಿಯನ್ನು ಈ ಕ್ಷಣಕ್ಕೇ ಮಾಡಲಾಗದು. ಏಕೆಂದರೆ ಆ ಕುರಿತ ಸಮಿತಿಯೊಂದಕ್ಕೆ ಕೆಲವೊಂದು ಬಹುಮುಖ್ಯ ಬದಲಾವಣೆಗಳನ್ನು ತರಬೇಕಿದೆ ಮತ್ತು ಆ ಸಮಿತಿಗೆ ನೇಮಿಸಲಾಗುವ ಸದಸ್ಯರ ಹೆಸರನ್ನು ಸಂಸತ್ತು ಅನುಮೋದಿಸಬೇಕಾಗಿದೆ’ ಎಂದು ಹೇಳಿತ್ತು.
ಅವಶ್ಯವಿರುವ ಮಹತ್ತರ ಬದಲಾವಣೆಯ ಪ್ರಕಾರ ವಿರೋಧ ಪಕ್ಷ ನಾಯಕನ ಹುದ್ದೆಯ ಮರು ವ್ಯಾಖ್ಯಾನ ಮಾಡಬೇಕಾಗಿದೆ ಮತ್ತು ಲೋಕಸಭೆಯಲ್ಲಿನ ಬೃಹತ್ ವಿರೋಧ ಪಕ್ಷದ ನಾಯಕನನ್ನು ಲೋಕಪಾಲ ಆಯ್ಕೆಯ ಮಂಡಳಿಯಲ್ಲಿ ಸೇರಿಸಿಕೊಳ್ಳಬೇಕಾಗಿದೆ ಎಂದು ಕೇಂದ್ರ ಸರಕಾರ ಹೇಳಿತ್ತು.
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷ ನಾಯಕನಾಗಲು ಅರ್ಹವಿರುವಷ್ಟು ಸ್ಥಾನಗಳನ್ನು ಜಯಿಸಿರಲಿಲ್ಲ; ಹಾಗಾಗಿ ವಿರೋಧ ಪಕ್ಷ ನಾಯಕನ ಹುದ್ದೆಯ ಮರು ವ್ಯಾಖ್ಯಾನ ಅಗತ್ಯವಾಗಿತ್ತು ಮತ್ತು ಈ ಕುರಿತ ಬದಲಾವಣೆಗೆ ಸಂಸತ್ತಿನ ಅನುಮೋದನೆ ಅಗತ್ಯವಿತ್ತು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ಹೇಳಿದೆ.