ಚಿಕ್ಕೋಡಿ: ಇಂದಿನ ಹೈಟೆಕ್ ಯುಗದಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆದು ನೌಕರಿಯತ್ತ ವಾಲುವುದು ಸರ್ವೇ ಸಾಮಾನ್ಯ, ಆದರೆ ಬರದ ನಾಡಿನ ಓರ್ವ ಮಹಿಳೆ ಪದವಿ ಮುಗಿಸಿ ಬದುಕು ಕಟ್ಟಿಕೊಳ್ಳಲು ಆಡು ಸಾಕಾಣಿಕೆ ಪ್ರಾರಂಭಿಸಿ ಯಶಸ್ವಿನ ಮೆಟ್ಟಿಲು ಹತ್ತಿ ಇತರರಿಗೆ ಮಾದರಿಯಾಗಿದ್ದಾರೆ.
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ವೀಣಾ ಶಿವಬಾಳು ನಿರ್ವಾಣಿ ಎಂಬ ಮಹಿಳೆಯು ಕಳೆದ ಎಂಟು ವರ್ಷಗಳಿಂದ ಆಡು ಸಾಕಾಣಿಕೆಯಲ್ಲಿ ತೊಡಗಿಕೊಂಡು ಪುರುಷರು ಮಾಡುವ ಕೆಲಸವನ್ನು ನಾನು ಮಾಡಬಲ್ಲೆ ಎಂಬುದಕ್ಕೆ ಮಹಿಳೆ ಸೂಕ್ತ ನಿದರ್ಶನವಾಗಿದ್ದಾರೆ. ಬಿ.ಎ.ಪದವಿಧರಾಗಿರುವ ವೀಣಾ ನಿರ್ವಾಣಿ ಅವರು ನೌಕರಿ ಕಡೆಗೆ ವಾಲುವದನ್ನು ಬಿಟ್ಟು ಆಯ್ಕೆ ಮಾಡಿಕೊಂಡಿದ್ದು ಕೃಷಿ ಕ್ಷೇತ್ರ. ಪ್ರಾರಂಭದಲ್ಲಿ ಹೈನುಗಾರಿಕೆ ಆರಂಭಿಸಿದ ಅನುಭವ ಇದ್ದುದ್ದರಿಂದ ಪ್ರಾಣಿಗಳೊಂದಿಗೆ ಅನ್ಯೋನ್ಯತೆ, ಅನುಭವ ಎಲ್ಲವು ಅವರನ್ನು ಇಂದು ಆಡು ಸಾಕಾಣಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ವೀಣಾ ಅವರು ರಾಜಸ್ಥಾನ ಮೂಲದ ಶಿರೋಹಿ, ಸೋಜೋತ,ಜಮನಾಪರಿ ಹಾಗೂ ಬಿಟಲ್ ವಿವಿಧ ತಳಿಯ ಆಡು ಮತ್ತು ಹೋತುಗಳನ್ನು ಸಾಕಾಣಿಕೆ ಮಾಡಿ ಲಾಭದಾಯಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸುಮಾರು 150 ರಿಂದ 200 ಆಡು ಹಿಡಿಯುವ ಉತ್ತಮ ಶೆಡ್ ನಿರ್ಮಿಸಿದ್ದು, ಇದರಲ್ಲಿ ಆಡುಗಳಿಗೆ ಮೇವು ಹಾಗೂ ನೀರು ನೀಡಲು ಅಚ್ಚುಕಟ್ಟಾದ ಗೋದಲಿಯನ್ನು ನಿರ್ಮಿಸಿದ್ದಾರೆ. ಆಡುಗಳಿಗಇತರರಿಗೆ ಯಾಗಿ ಆಹಾರ ನೀಡಿದ್ದಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಆಡುಗಳನ್ನು ಕಟ್ಟಿ ಮೇಯಿಸುವದರಿಂದ ನಿರ್ದಿಷ್ಟ ವೇಳೆಗೆ ಸರಿಯಾದ ಪ್ರಮಾಣದಲ್ಲಿ ಮೇವು ಹಾಕಲು ಸಾಧ್ಯವಾಗುತ್ತದೆ. ಆಡುಗಳಲ್ಲಿ ಜೀರ್ಣಕ್ರಿಯೇ ಸರಿಯಾಗಿ ನಿರೀಕ್ಷಿತ ತೂಕ ಪಡೆಯಲು ನೆರವಾಗುವದರಿಂದ ಶೆಡ್‌ದಲ್ಲಿಯೇ ಆಡುಗಳನ್ನು ಸಾಕಾಣಿಕೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದೇವೆ ಎನ್ನುತ್ತಾರೆ ಮಹಿಳೆ.
ಪ್ರಾರಂಭದಲ್ಲಿ ನಾಲ್ಕು ಅಥವಾ ಐದು ಆಡುಗಳೊಂದಿಗೆ ಆರಂಭಿಸಿ ಇಂದು ಸುಮಾರು 100 ಕ್ಕೂ ಹೆಚ್ಚು ವಿವಿಧ ತಳಿಗಳ ಆಡುಗಳು ಅವರ ಶೆಡ್‌ದಲ್ಲಿ ಸಾಕಾಣಿಕೆ ಮಾಡಿದ್ದಾರೆ. ಕರೋಶಿ ಪ್ರದೇಶವು ಮೊದಲೆ ಬರಪೀಡಿತ ಪ್ರದೇವೆಂದು ಮನಗಂಡು ಆರ್ಥಿಕವಾಗಿ ಸಬಲತೆ ಕಾಣುವ ನಿಟ್ಟಿನಲ್ಲಿ ಅವರು ಆಡು ಸಾಕಾಣಿಕೆ ಕ್ಷೇತ್ರಕ್ಕೆ ಮೊದಲು ಆಧ್ಯತೆ ನೀಡಿ 2013ರಲ್ಲಿ 50 ಸಾವಿರ ರೂಗಳ ಬಂಡವಾಳ ಹಾಕಿ ಒಂದು ಜಮುನಾಪಾರಿ ಹೋತು ಮತ್ತು ಐದು ಆಡುಗಳನ್ನು ಸಾಕಾಣಿಕೆ ಮಾಡಿದ ಪರಿಣಾಮ ಇಂದು ಆಡು ಸಾಕಾಣಿಕ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ, ಖರ್ಚು ವೆಚ್ಚ ತೆಗೆದು ಪ್ರತಿ ವರ್ಷ 10 ಲಕ್ಷ ರೂ ಆದಾಯ ಬರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ನಮ್ಮ ಭಾಗದ ಆಡುಗಳನ್ನು ಸಾಕುವದರಿಂದ ತೂಕ ಮತ್ತು ಮಾಂಸದ ಇಳುವರಿ ಕಡಿಮೆ. ಹಾಗಾಗೀ ಉತ್ತರ ಭಾರತದ ವಿವಿಧ ತಳಿಯ ಆಡುಗಳನ್ನು ಸಾಕುವದರಿಂದ ಮಾಂಸದ ಇಳುವರಿಯಲ್ಲಿ ಹೆಚ್ಚಿಗೆ ಆಗುತ್ತದೆ. ಇದರಿಂದ ಮಹಾರಾಷ್ರ್ಟದ ಪುಣೆ, ಗಡಹಿಂಗ್ಲಜ, ಫಲ್ಟನ್ ಸೇರಿದಂತೆ ಉತ್ತರ ಕರ್ನಾಟಕದ ದೊಡ್ಡ ದೊಡ್ಡ ಜಿಲ್ಲೆಗಳಲ್ಲಿ ಈ ತಳಿಯ ಆಡಿನ ಮಾಂಸ ಹೆಚ್ಚಿಗೆ ಮಾರಾಟ ಆಗುತ್ತದೆ. ಇದರಿಂದ ತಮಗೆ ಹೆಚ್ಚಿನ ಲಾಭ ದೊರೆಯುತ್ತದೆ ಎನ್ನುತ್ತಾರೆ ವೀಣಾ ನಿರ್ವಾಣಿ.
ಕೃಷಿ ಮಹಿಳೆ ಪ್ರಶಸ್ತಿ ಬಾಚಿಕೊಂಡ ವೀಣಾ: ಅಚ್ಚುಕಟ್ಟಾದ ಆಡು ಸಾಕಾಣಿಕೆ ಮಾಡಿಕೊಂಡು ಇತರರಿಗೆ ಮಾದರಿಯಾದ ವೀಣಾ ನಿರ್ವಾಣಿ ಅವರಿಗೆ ಕಳೆದ 2017ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಉತ್ತಮ ಕೃಷಿ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.
ಕೆಲಸವಿಲ್ಲವೆಂದು ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವ ಬದಲು ಕೃಷಿಯಲ್ಲಿ ಲಾಭದಾಯಕವಾದ ಆಡು, ಕೋಳಿ ಇನ್ನಿತರ ಸ್ವಂತ ಉದ್ಯೋಗ ಮಾಡುವ ದೈರ್ಯ, ಛಲ ಇರಬೇಕು. ಮಾಡುವ ಕೆಲಸವನ್ನು ಶ್ರೇದ್ಧೆಯಿಂದ ಮಾಡಿದರೇ ಕಂಡಿತ ಮಾಡುವ ಉದ್ಯೋಗ ಕೈಹಿಡಿಯುತ್ತದೆ. ಮಹಿಳೆಯರು ಸ್ವಂತ ಉದ್ಯೋಗ ಮಾಡುವ ಸಂಕಲ್ಪ ಮಾಡಬೇಕು ಎನ್ನುತ್ತಾರೆ ವೀಣಾ ನಿರ್ವಾಣಿ.