Advertisement
ಜಗತ್ತಿನಲ್ಲಿರುವವರೆಲ್ಲ ಯಾವುದಾದರೊಂದು ಡಿಗ್ರಿ ಪಡೆದಿರ ಲೇಬೇಕೆಂಬುದು ಕಡ್ಡಾಯವೇನಲ್ಲ. ಅವರವರ ಶಕ್ತಿಗೆ, ಆಸಕ್ತಿಗೆ ಅನುಸಾರವಾಗಿ ಎಲ್ಲರೂ ಅವರವರಿಗೆ ಇಷ್ಟ ಬಂದಿದ್ದನ್ನು, ಕೈಲಾದ್ದನ್ನು ಓದಬಹುದು. ಕೆಲವರು ಕಷ್ಟಪಟ್ಟುಕೊಂಡು ಕೆಲಸಕ್ಕೂ ಹೋಗಿ ಸಂಜೆ ಕಾಲೇಜಿಗೂ ಹೋಗಿ ಓದುತ್ತಾರೆ. ಮತ್ತೆ ಕೆಲವರು ಮುಕ್ತ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗೆ ಕಟ್ಟಿ ಮನೆಯಲ್ಲಿಯೇ ಓದಿಕೊಳ್ಳು ತ್ತಾರೆ. ಏನನ್ನಾದರೂ ಓದುವುದು ಪರೀಕ್ಷೆ ಮುಗಿಸಿ ಪಾಸಾದೆ ಎಂದು ಪ್ರಮಾಣ ಪತ್ರ ತೆಗೆದುಕೊಳ್ಳುವುದಕ್ಕಾ? ಅಥವಾ ಮನುಷ್ಯ ಎಷ್ಟೇ ಓದಿಕೊಂಡರೂ ಜ್ಞಾನವನ್ನು ಬೆಳೆಸಿಕೊಳ್ಳುವುದಕ್ಕೆ ಕೊನೆಯೇ ಇಲ್ಲ ಎಂದಾ? ಪ್ರಪಂಚದ ಅನೇಕ ವಿಚಾರಗಳನ್ನು ಅರೆದು ಕುಡಿಯುವುದಿರಲಿ, ಕಡೇ ಪಕ್ಷ ಗಮನಹರಿಸಲು ಕೂಡ ನಮ್ಮ ಒಂದು ಜನ್ಮ ಸಾಲುವುದಿಲ್ಲ. ಏಕೆಂದರೆ ಕಲಿಯುವುದಕ್ಕೆ ಅಂತ್ಯವೇ ಇಲ್ಲ.
Related Articles
Advertisement
ಓದಿದವರಷ್ಟೇ ಬುದ್ಧಿವಂತರಲ್ಲ: ತಾತ್ತಿಕವಾಗಿ ಜೀವನದ ಮೂಲ ಧ್ಯೇಯವೇ ಜ್ಞಾನ ಸಂಪಾದನೆ. ಕೆಲಸಕ್ಕೆ ಹೋಗುವುದು, ದುಡಿಯುವುದು, ಸಂಸಾರ ಮಾಡುವುದು, ಮನೆ ಕಟ್ಟುವುದು, ಕಾರು ಖರೀದಿಸುವುದು ಇವೆಲ್ಲ ಜೀವನದ ಒಂದೊಂದು ಘಟ್ಟಗಳಲ್ಲಿ ಸಂಭವಿಸುತ್ತಾ ಹೋಗುವ ಚಟುವಟಿಕೆಗಳಷ್ಟೆ. ಜ್ಞಾನ ಸಂಪಾದನೆ ನಿರಂತರ. ನಾವು ಸಮಾಜದ ಮುಂದೆ ತೋರ್ಪಡಿಸಿಕೊಳ್ಳುವುದಕ್ಕೆ ಎಲ್ಲವನ್ನೂ ಕೊಂಡುಕೊಳ್ಳಬಹುದು. ಆದರೆ ಅದನ್ನು ಎತ್ತಿಹಿಡಿದುಕೊಳ್ಳುವಷ್ಟು ಘನತೆ ನಮ್ಮಲ್ಲಿ ಇದೆಯಾ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಮನುಷ್ಯನ ನಡವಳಿಕೆಯಲ್ಲಿಯೇ ಅವನ ಡಿಗ್ರಿ ಸರ್ಟಿಫಿಕೇಟ್ ಎದ್ದು ಕಾಣಿಸುತ್ತಿರುತ್ತದೆ.
ಕೆಲ ಹುಡುಗರು ಅತಿ ಕಡಿಮೆ ಓದಿರುತ್ತಾರೆ; ಕಾರಣಾಂತರ ಗಳಿಂದ ಆಟೋ ಓಡಿಸುತ್ತಿರುತ್ತಾರೆ, ಮನೆಮನೆಗೆ ಹಾಲು, ಪೇಪರ್ ಹಾಕುತ್ತಿರುತ್ತಾರೆ. ಆದರೆ ಅವರ ಜ್ಞಾನದ ಮಟ್ಟ ಅಗಾಧವಾಗಿರುತ್ತದೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯ ಘನತೆಯುಕ್ತ ವ್ಯಕ್ತಿತ್ವ ಅವರಲ್ಲಿರುತ್ತದೆ. ಅತಿ ಹೆಚ್ಚು ಓದಿರುವವರು ಮಾತ್ರ ಬುದ್ಧಿವಂತರೆಂದುಕೊಳ್ಳುವುದು ತಪ್ಪು. ಕಡಿಮೆ ಓದಿರುವ ಕೆಲ ವ್ಯಕ್ತಿಗಳು ವಿದ್ಯಾವಂತರಿಗಿಂತ ಹೆಚ್ಚು ಸಭ್ಯರಾಗಿರುತ್ತಾರೆ. ನಿಜವಾಗಲೂ ವಿದ್ಯೆ ನಮ್ಮ ತಲೆಗೆ ಹತ್ತಿದ್ದರೆ ನಮ್ಮನ್ನು ಅದು ಚುರುಕುಗೊಳಿಸುತ್ತದೆಯೇ ಹೊರತು ಪೆದ್ದರನ್ನಾಗಿ ಮಾಡಲು ಸಾಧ್ಯವಿಲ್ಲ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿ ಯರಿಂಗ್ ಮುಗಿಸಿ, ಎಂಬಿಎ ಮುಗಿಸಿ, ಎಂಬಿಬಿಎಸ್ ಮುಗಿಸಿ ಕೆಲಸ ಮಾಡಲು ಹೊರಬರುತ್ತಾರೆ. ಅವರಲ್ಲಿ ಕೆಲವರಿಗೆ ಅತ್ತ ಇಂಗ್ಲಿಷ್ ಕೂಡ ಸರಿಯಾಗಿ ಬರುವುದಿಲ್ಲ. ಇತ್ತ ಅವರ ಮಾತೃಭಾಷೆಯಾದ ಕನ್ನಡವೂ ನೆಟ್ಟಗೆ ಗೊತ್ತಿರುವುದಿಲ್ಲ. ಹದಿನೈದು ವರ್ಷದ ವಿದ್ಯಾಭ್ಯಾಸದ ಸಮಯದಲ್ಲೇ ಭಾಷೆ ಕಲಿಯದ ಇವರು ಮುಂದೆ ಯಾವ ಪುಸ್ತಕ ಓದಿ ಅದನ್ನು ಕಲಿಯಬಲ್ಲರು? ನಮ್ಮಲ್ಲಿರುವ ಜ್ಞಾನವನ್ನು ವ್ಯಕ್ತಪಡಿಸಲು ಬೇಕಾಗಿರುವುದು ಶಿಷ್ಟವಾದ ಒಂದು ಭಾಷೆ. ಅದನ್ನೇ ಸರಿಯಾಗಿ ಕಲಿಯದಿದ್ದರೆ ಬೇರೇನು ಕಲಿತರೂ ವ್ಯರ್ಥವೇ. ನಾವು ಕಾಲೇ ಜಿಗೆ ಹೋಗಿ ಬರೀ ಪಾಠ ಕೇಳಿಬಿಟ್ಟರೆ ದೊಡ್ಡ ವ್ಯಕ್ತಿ ಆಗುತ್ತೇ ವೆಂಬುದು ಭ್ರಮೆ. ಯಾವುದೇ ವಿಷಯವನ್ನಾದರೂ ಗಮನ ಇಟ್ಟು ಕೇಳಿಸಿಕೊಂಡು, ಸಾಮಾನ್ಯ ಜ್ಞಾನವನ್ನೂ ಬೆಳಿಸಿಕೊಂಡು, ಓದು ಮುಗಿಸಿದ ಅನಂತರ ನಮ್ಮ ನಡವಳಿಕೆ ಮತ್ತು ವ್ಯಕ್ತಿತ್ವವನ್ನು ಪಾಲಿಶ್ ಮಾಡಿಕೊಳ್ಳುತ್ತಿರಬೇಕು.
ಬದುಕಿನ ವಿದ್ಯೆ ಕಲಿಯಬೇಕು: ನಾನು ಓದಿಕೊಂಡಿದ್ದೇನೆ, ಡಬಲ್ ಡಿಗ್ರಿ ತೆಗೆದುಕೊಂಡಿದ್ದೇನೆ ಅಂತ ಇಷ್ಟ ಬಂದಹಾಗೆ ನಡೆದುಕೊಳ್ಳುವುದು ನಮಗೆ ಶೋಭೆ ತರುವುದಿಲ್ಲ. ಎದುರಿರುವ ಜನರೇ ನಮ್ಮ ಸಾಮರ್ಥ್ಯವನ್ನು ನಮಗೆ ತಿಳಿಸಬೇಕು. ನಾವು ಎಷ್ಟು ಓದಿದ್ದೇವೆ, ಎಷ್ಟು ತಿಳಿದುಕೊಂಡಿದ್ದೇವೆ, ಎಷ್ಟು ಬುದ್ಧಿವಂತರು ಎಂಬುದು ತಿಳಿಯುವುದು ನಮ್ಮ ನಡವಳಿಕೆಯ ಮೂಲಕ. ದುಡ್ಡು ಕೊಟ್ಟು ಸರ್ಟಿಫಿಕೇಟ್ ತೆಗೆದುಕೊಂಡರೆ “ನಾನೂ ವಿದ್ಯಾವಂತ’ ಎಂಬುದನ್ನು ತೋರಿಸಿಕೊಳ್ಳಲು ನಾವು ಹೋದಲ್ಲೆಲ್ಲ ಅದನ್ನೂ ಕೊರಳಿಗೆ ತೂಗು ಹಾಕಿಕೊಳ್ಳಬೇಕಾಗುತ್ತದೆ!
ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ|ಈ ಜಗತ್ತಿನಲ್ಲಿ ಜ್ಞಾನಕ್ಕಿಂತ ಪವಿತ್ರವಾದದ್ದು ಮತ್ತು ಭವ್ಯವಾದದ್ದು ಬೇರೊಂದಿಲ್ಲ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಉಪದೇಶ ಮಾಡಿದ್ದಾನೆ. ಶ್ರೀಕೃಷ್ಣನು ಜ್ಞಾನವೇ ಎಲ್ಲಾ ಕರ್ಮಗಳಿಗೂ ಮೂಲ, ಅಜ್ಞಾನದಿಂದ ಕೂಡಿರುವವರು ಕೆಳಮಟ್ಟದ ಕ್ರಿಯೆಗಳನ್ನೇ ಮಾಡುತ್ತಿರುತ್ತಾರೆ ಎಂದು ಹೇಳುತ್ತಾ, ಸರ್ವಂ ಕಾರ್ಮಾಖಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ| ಎಂದು ಭೋಧಿಸಿದ. ನಮ್ಮ ಎಲ್ಲ ಕರ್ಮಗಳು ದಿವ್ಯ ಜ್ಞಾನದಲ್ಲಿ ಪರಿಸಮಾಪ್ತಿ ಯಾಗುತ್ತವೆ. ನಿಜವಾದ ಜ್ಞಾನಿಗಳು ಜ್ಞಾನ ಪಡೆದುಕೊಂಡ ಅನಂತರ ಕರ್ಮಮಾರ್ಗದಲ್ಲಿ ಹೋರಾಡಲು ಮುನ್ನಡೆ ಯುತ್ತಾರೆ. ಪರಮಾತ್ಮನಾಡಿದ ಈ ಮಾತುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದರೆ ನಮ್ಮ ಅಪ್ಪ-ಅಮ್ಮ ಅಜ್ಜಿ-ತಾತ ಯಾವಾಗಲೂ ಏಕೆ ನಮಗೆಲ್ಲ ಚೆನ್ನಾಗಿ ಓದು ಅಂತ ಬೈಯುತ್ತಿದ್ದರು ಎಂಬುದು ಅರ್ಥವಾಗುತ್ತದೆ. ನಿಜವಾದ ವಿದ್ಯಾವಂತನನ್ನು ಜಗತ್ತಿನ ಯಾವ ಮೂಲೆಗೆ ಕರೆದುಕೊಂಡು ಹೋಗಿ ಬಿಟ್ಟರೂ ನಿಯತ್ತಿನಿಂದ, ಚೆನ್ನಾಗಿ ಬದುಕಿ ತೋರಿಸುತ್ತಾನೆ. ಸರ್ಟಿಫಿಕೇಟ್ ವಿದ್ಯಾವಂತ; ಆ ಸರ್ಟಿಫಿಕೇಟ್ ಅವನ ಜತೆ ಇರುವವರೆಗೆ ಮಾತ್ರ ನೆಮ್ಮದಿಯಾಗಿರುತ್ತಾನೆ. ರೂಪಾ ಅಯ್ಯರ್