Advertisement

ದೇಹಳ್ಳಿ-ಅನಗೋಡದಲ್ಲಿ ವ್ಯಾಪಕ ಅರಣ್ಯನಾಶ

08:09 PM Jun 15, 2021 | Team Udayavani |

ಯಲ್ಲಾಪುರ: ತಾಲೂಕಿನ ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶವಾದ ದೇಹಳ್ಳಿ ಮತ್ತು ಅನಗೋಡ ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪಕ ಅರಣ್ಯನಾಶ ಮತ್ತು ಖನಿಜಾಂಶಯುಕ್ತ ಮಣ್ಣು ಕಳ್ಳಸಾಗಣೆಯಾಗಿದ್ದು, ಸುಮಾರು ಕೋಟಿ ರೂಪಾಯಿಯಷ್ಟು ಅರಣ್ಯ ಪರಿಸರ ನಾಶವಾಗಿದೆ.

Advertisement

ಅರಣ್ಯ ಕಾನೂನನ್ನು ಅರಣ್ಯಾಧಿಕಾರಿಗಳೇ ಉಲ್ಲಂಘಿಸಿ ಪರಿಸರ ನಾಶಕ್ಕೆ ಕಾರಣವಾಗಿದ್ದು ಖಂಡನಾರ್ಹ. ಅಂತಹ ಅರಣ್ಯಾಧಿಕಾರಿ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಪರಿಸರ ನಾಶಕ್ಕೆ ಕಾರಣವಾದ ಬೀಸಗೋಡ, ಕುಂಬ್ರಾಳ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಕುಂಬ್ರಾಳದಲ್ಲಿ ಅರಣ್ಯ ಮಾರಣ ಹೋಮವಾಗಿರುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಜೀವನ ಹಾಗೂ ವಾಸ್ತವ್ಯಕ್ಕಾಗಿ ಅರಣ್ಯ ಭೂಮಿ ಸಾಗುವಳಿ ಮಾಡುವವರ ಮೇಲೆ ವಿನಾಃಕಾರಣ ದೌರ್ಜನ್ಯ, ಕಿರುಕುಳ ಮಾಡಿ ಹಿಂಸಿಸುವ ಅರಣ್ಯ ಇಲಾಖೆ ಸಿಬ್ಬಂದಿ ಇಂತಹ ಕಾನೂನು ಬಾಹಿರ ಕೃತ್ಯಕ್ಕೆ ಪ್ರೇರಕವಾಗಿರುವುದು ವಿಷಾದಕರ. ನಿರಂತರ ಹಲವು ದಿನಗಳಿಂದ ಅಪಕೃತ್ಯ ಜರುಗುತ್ತಿದ್ದರೂ ಅರಣ್ಯ ಇಲಾಖೆ ಮೌನವಾಗಿರುವುದು ಖೇದಕರ ಎಂದರು. ದೇಹಳ್ಳಿ ಗ್ರಾಪಂ ವ್ಯಾಪ್ತಿಯ ಕುಂಬ್ರಾಳದಲ್ಲಿ ಹತ್ತರಿಂದ 50 ವರ್ಷದ ಸಿಸಂ, ನಂದಿ, ಮತ್ತಿ, ಸಾಗುವನಿ ಮುಂತಾದ ಬೆಲೆಬಾಳುವ ಮರ ಕಡಿದು, ಮಣ್ಣಿನಲ್ಲಿ ಹುಗಿದು ಸಾಕ್ಷ್ಯ ನಾಶಮಾಡಿ ಸುಮಾರು 250ರಿಂದ 300ಕ್ಕಿಂತ ಹೆಚ್ಚಿನ ಗಿಡ-ಮರ ನಾಶಕ್ಕೆ ಕಾರಣವಾಗಿರುವುದು ಅರಣ್ಯಅಧಿಕಾರಿಗಳ ಕರ್ತವ್ಯ ಚ್ಯುತಿ ಎಸಗಿದ್ದಾರೆ.

ಈ ಪ್ರದೇಶವು ಕಾಳಿನದಿ ಹಿನ್ನೀರು ಪ್ರದೇಶ ಅಂಚಿನಲ್ಲಿರುವುದರಿಂದ ಭೂ ಕುಸಿತ, ಔಷಧಯುಕ್ತ ಸೂಕ್ಷ್ಮ ಗಿಡಗಳು ವನ್ಯಜೀವಿಗಳಿಗೆ ಆತಂಕ, ಸಾಂಪ್ರದಾಯಯುಕ್ತ ಜೇನು ಅಭಿವೃದ್ಧಿಗೆ ಮಾರಕ. ವಿವಿಧ ವಿಧದಲ್ಲಿ ಜೀವ ವೈವಿಧ್ಯತೆ ನಾಶ ಮುಂತಾದ ಪರಿಸರ ಹಾನಿಕರ ಕೃತ್ಯಕ್ಕೆ ಅರಣ್ಯ ಇಲಾಖೆ ನಿರ್ಲಕ್ಷ್ಯತನ ಕಾರಣವೆಂದು ರವೀಂದ್ರ ನಾಯ್ಕ ವಿವರಿಸಿದರು.

ಖನಿಜಯುಕ್ತ ಮಣ್ಣು ಕಳ್ಳಸಾಗಾಣೆ: ಅನಗೋಡ ಗ್ರಾಪಂ ವ್ಯಾಪ್ತಿಯಲ್ಲಿನ ಬೀಸಗೋಡ ಗ್ರಾಮದ ಸುತ್ತಮುತ್ತ ದಿನದಿಂದ ದಿನಕ್ಕೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ವ್ಯಾಪಕವಾಗಿ ಬೆಲೆಬಾಳುವ ಖನಿಜಯುಕ್ತ ಮಣ್ಣು ಕಳ್ಳತನವಾದರೂ ಅರಣ್ಯ ಇಲಾಖೆ ನಿದ್ರೆಯಲ್ಲಿರುವುದು ಖಂಡನಾರ್ಹ. ಜೊತೆಗೆ ಮಣ್ಣು ತೆಗೆಯುವಾಗ ಮರಗಿಡ ಕೆಡವಲಗಿದೆ. ಖನಿಜಯುಕ್ತ ಮಣ್ಣು ಕಳ್ಳಸಾಗಣೆ ಕುರಿತು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಕಾನೂನು ಬಾಹಿರ ಕೃತ್ಯಕ್ಕೆ ಕಾರಣವಾದ ಅರಣ್ಯ ಅಧಿಕಾರಿ ಮೇಲೆ ತಕ್ಷಣ ಕಾನೂನು ಕ್ರಮ ಅವಶ್ಯ ಎಂದು ರವೀಂದ್ರ ನಾಯ್ಕ ಅಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next