Advertisement

ಸಿಡ್ನಿ ಟೆನಿಸ್‌: ಹಾಲಿ ಚಾಂಪಿಯನ್‌ ಕೊಂಟಾಗೆ ಮೊದಲ ಸುತ್ತೇ ಕಂಟಕ

01:05 PM Jan 10, 2018 | |

ಸಿಡ್ನಿ: ಹಾಲಿ ಚಾಂಪಿಯನ್‌ ಜೊಹಾನ್ನಾ ಕೊಂಟಾ ಸಿಡ್ನಿ ಇಂಟರ್‌ನ್ಯಾಶನಲ್‌ ಟೆನಿಸ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ. ಬ್ರಿಟನ್ನಿನ ಈ ನೆಚ್ಚಿನ ಆಟಗಾರ್ತಿಯನ್ನು ಪೋಲಂಡಿನ ಅಗ್ನಿಸ್ಕಾ ರಾದ್ವಂಸ್ಕಾ 6-3, 7-5 ಅಂತರದಿಂದ ಮಣಿಸಿದರು.

Advertisement

ಈ ಪ್ರಥಮ ಸುತ್ತಿನ ಪಂದ್ಯ ಎನ್ನುವುದು ಕಳೆದ ವರ್ಷದ ಫೈನಲ್‌ ಸ್ಪರ್ಧೆಯ ಪುನರಾವರ್ತನೆ ಆಗಿತ್ತು. ಆದರೆ ಫ‌ಲಿತಾಂಶ ಮಾತ್ರ ತಿರುವು ಮುರುವಾಯಿತು. 2017ರ ಸಿಡ್ನಿ ಫೈನಲ್‌ನಲ್ಲಿ ಕೊಂಟಾ 6-4, 6-2ರಿಂದ ರಾದ್ವಂಸ್ಕಾಗೆ ಸೋಲುಣಿಸಿ ಚಾಂಪಿಯನ್‌ ಆಗಿದ್ದರು. ಈ ಬಾರಿ ಮೊದಲ ಸುತ್ತಿನಲ್ಲೇ ರಾದ್ವಂಸ್ಕಾ ಸೇಡು ತೀರಿಸಿಕೊಂಡರು. ಇವರಿಬ್ಬರ ಕಾದಾಟ 82 ನಿಮಿಷಗಳ ತನಕ ಸಾಗಿತು.

ರಾದ್ವಂಸ್ಕಾ ಅವರಿನ್ನು ಅಮೆರಿಕದ ಅರ್ಹತಾ ಆಟಗಾರ್ತಿ ಕ್ಯಾಥರಿನ್‌ ಬೆಲ್ಲಿಸ್‌ ವಿರುದ್ಧ ಆಡಲಿದ್ದಾರೆ. ಮೊದಲ ದಿನದಾಟದಲ್ಲಿ ಯುಎಸ್‌ ಓಪನ್‌ ಚಾಂಪಿಯನ್‌ ಸ್ಟೀಫ‌ನ್‌ ಸ್ಲೋನ್‌ ಕೂಡ ಮೊದಲ ಸುತ್ತಿನ ಆಘಾತಕ್ಕೆ ಒಳಗಾಗಿದ್ದರು. ಇಟೆಲಿಯ ಅರ್ಹತಾ ಆಟಗಾರ್ತಿ ಕ್ಯಾಮಿಲಾ ಜಾರ್ಜಿ 6-3, 6-0 ಅಂತರದಿಂದ ಸ್ಲೋನ್‌ಗೆ ಸೋಲುಣಿಸಿದ್ದರು. 

ಆತಿಥೇಯ ನಾಡಿನ ಆಶ್‌ ಬಾರ್ಟಿ ದ್ವಿತೀಯ ಸುತ್ತಿನ ಜಯ ದೊಂದಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇದು ತವರಿನ ಡಬ್ಲ್ಯುಟಿಎ ಕೂಟದಲ್ಲಿ ಬಾರ್ಟಿ ಕಾಣುತ್ತಿರುವ ಮೊದಲ ಕ್ವಾರ್ಟರ್‌. ಆಸ್ಟ್ರೇಲಿಯದ  ದರಿಯಾ ಗವ್ರಿಲೋವಾ, ಸಮಂತಾ ಸ್ಟೋಸರ್‌ ದ್ವಿತೀಯ ಸುತ್ತಿನಲ್ಲಿ ಪರಸ್ಪರ ಎದುರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next