Advertisement

ಸಮರಕ್ಕೂ ಸಿದ್ಧ: ಸಂಸತ್ತಿನಿಂದ ಚೀನಕ್ಕೆ ರಕ್ಷಣ ಸಚಿವ ರಾಜನಾಥ್‌ ನೇರ ಎಚ್ಚರಿಕೆ

01:43 AM Sep 16, 2020 | Hari Prasad |

ಹೊಸದಿಲ್ಲಿ: ನಮ್ಮ ಸಾರ್ವಭೌಮತೆಯ ವಿಚಾರದಲ್ಲಿ ರಾಜಿಯಾಗುವುದಿಲ್ಲ. ಶಾಂತಿಗೂ ಸಿದ್ಧರಿದ್ದೇವೆ, ಹಾಗೆಯೇ ಶಸ್ತ್ರವೆತ್ತಲೂ ತಯಾರಾಗಿದ್ದೇವೆ…

Advertisement

– ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ಸಂಸತ್ತಿನಲ್ಲಿ ಚೀನದ ವಿರುದ್ಧ ಗುಡುಗಿದ್ದು ಹೀಗೆ. ಭಾರತ ಮತ್ತು ಚೀನ ನಡುವಿನ ಗಡಿ ಸಂಘರ್ಷ ಸಂಬಂಧ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಅವರು, ವಾಸ್ತವ ನಿಯಂತ್ರಣ ರೇಖೆಯ (LAC) ಸ್ಥಿತಿಗತಿಯನ್ನು ಬದಲಾಯಿಸಲು ಮುಂದಾದರೆ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಸಿದರು.

ಲಡಾಖ್‌ ಪರಿಸ್ಥಿತಿ ನಮಗೆ ಸವಾಲಾಗಿದೆ ಎನ್ನಲು ಹಿಂಜರಿಯುವುದಿಲ್ಲ ಎಂದ ರಾಜನಾಥ್‌, ಭಾರತೀಯ ಸೇನಾ ಪಡೆಗಳು ಎಂಥದ್ದೇ ಶಕ್ತಿಯನ್ನು ಹಿಮ್ಮೆಟ್ಟಿಸಲು ಸಿದ್ಧವಾಗಿವೆ ಎಂಬುದನ್ನು ಸದನಕ್ಕೆ ತಿಳಿಸಬಯಸುತ್ತೇನೆ. ಸದನ ನಮ್ಮ ಸಶಸ್ತ್ರ ಪಡೆಗಳ ಮೇಲೆ ಸಂಪೂರ್ಣ ನಂಬಿಕೆ ಇರಿಸಬೇಕು ಮತ್ತು ಬೆಂಬಲಿಸಬೇಕು. ನಮ್ಮ ಪಡೆಗಳು ದೇಶ ಹೆಮ್ಮೆಪಡುವಂತೆ ಮಾಡುತ್ತವೆ ಎಂದು ಪ್ರತಿಪಾದಿಸಿದರು.

ಈ ಸದನವು ನಮ್ಮ ರಕ್ಷಣ ಪಡೆಗಳ ಬೆನ್ನಿಗೆ ನಿಲ್ಲುವ ನಿರ್ಣಯ ತೆಗೆದುಕೊಳ್ಳಬೇಕು. ಆ ಮೂಲಕ ಹಿಮಾಲಯದ ಕೆಟ್ಟ ತಾಪಮಾನದಲ್ಲೂ ತಾಯ್ನಾಡನ್ನು ಕಾಯುವ ಯೋಧರಲ್ಲಿ ಧೈರ್ಯ ತುಂಬಬೇಕು ಎಂದು ಮನವಿ ಮಾಡಿದರು.

ಗಾಲ್ವಾನ್‌ನಲ್ಲಿ ಕೆಚ್ಚೆದೆಯ ಹೋರಾಟ
ಜೂ. 15ರ ಗಾಲ್ವಾನ್‌ ಸಂಘರ್ಷದ ಬಗ್ಗೆ ಮಾಹಿತಿ ನೀಡಿದ ರಾಜನಾಥ್‌, ನಮ್ಮ ಪಡೆಗಳು ಚೀನದವರಿಗೆ ಮರೆಯಲಾರದ ಪೆಟ್ಟು ನೀಡಿವೆ. ಅಂದು ಚೀನದ ಕಡೆ ಬಹಳಷ್ಟು ಸಾವುನೋವುಗಳಾಗಿವೆ ಎಂದರು.

Advertisement

ನಿಲುವು ಮನದಟ್ಟು ಮಾಡಿದ್ದೇನೆ
ಇತ್ತೀಚೆಗಷ್ಟೇ ಚೀನದ ರಕ್ಷಣ ಸಚಿವರ ಜತೆ ನಡೆದ ಸಭೆಯಲ್ಲೂ ಭಾರತದ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಎಲ್‌ಎಸಿ ಬಳಿ ಚೀನದ ವರ್ತನೆ 1993, 1996ರ ಒಪ್ಪಂದಗಳ ಉಲ್ಲಂಘನೆಯಾಗಿವೆ. ಚೀನ ಸೇನಾ ಜಮಾವಣೆ ಆರಂಭಿಸಿದ ಮೇಲೆ ಈ ಒಪ್ಪಂದಗಳ ನಿಯಮ ಉಲ್ಲಂಘಿಸಲಾಗಿದೆ ಎಂದರು.

ಧೈರ್ಯಶಾಲಿ ಯೋಧರು
ಚೀನ ಎಷ್ಟೇ ಪ್ರಚೋದಿಸಿದರೂ ನಮ್ಮ ಯೋಧರು ಸಂಯಮ ಪ್ರದರ್ಶಿಸಿದ್ದಾರೆ. ನಮ್ಮ ನೆಲದ ಸ್ವಾಮಿತ್ವಕ್ಕೆ ಧಕ್ಕೆ ಎದುರಾದಾಗ ಅಷ್ಟೇ ಕೆಚ್ಚೆದೆಯನ್ನೂ ಪ್ರದರ್ಶಿಸಿದ್ದಾರೆ. ಇದಕ್ಕೆ ಗಾಲ್ವಾನ್‌ನಲ್ಲಿನ ಸಂಘರ್ಷದ ವೇಳೆ ಚೀನದ ಕಡೆ ಆಗಿರುವ ನಷ್ಟವೇ ಸಾಕ್ಷಿ. ನಮ್ಮ ಯೋಧರು ಭಾರತದ ಒಂದಿಂಚು ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ  ಎಂದು ರಾಜನಾಥ್‌ ಸಿಂಗ್‌ ಸೇನೆಯ ಪರಾಕ್ರಮವನ್ನು ಕೊಂಡಾಡಿದರು.

ಚಳಿಗಾಲ ಎದುರಿಸಲು ಸೇನೆ ಸಿದ್ಧತೆ
ಸಂಘರ್ಷಮಯ ಸ್ಥಿತಿಯ ನಡುವೆ ಭಾರತೀಯ ಸೇನೆಯು ಲಡಾಖ್‌ನ ಉಗ್ರ ಚಳಿಗಾಲವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಸಿ ಮಾಡುವ ಸಲಕರಣೆಗಳು, ದೇಹ ಬೆಚ್ಚಗಿಡುವ ಬಟ್ಟೆಗಳು, ಆಹಾರ ಧಾನ್ಯಗಳು ಮತ್ತು ಟೆಂಟ್‌ ಉಪಕರಣಗಳನ್ನು ಶೇಖರಿಸಿಕೊಳ್ಳುತ್ತಿದೆ. ಅಗತ್ಯ ಶಸ್ತ್ರಾಸ್ತ್ರಗಳನ್ನು ಕೂಡ ಗಡಿಯತ್ತ ರವಾನೆ ಮಾಡುತ್ತಿದೆ.

ಭಾರೀ ಸೇನಾ ಜಮಾವಣೆ
ಎಲ್‌ಎಸಿ ಉದ್ದಕ್ಕೂ ಚೀನವು ಭಾರೀ ಪ್ರಮಾಣದ ಸೇನೆ ಜಮಾವಣೆ ಮಾಡಿದೆ ಎಂಬುದನ್ನು ರಾಜನಾಥ್‌ ಸದನದ ಗಮನಕ್ಕೆ ತಂದರು. ಗೋಗ್ರಾ, ಕೋಂಗ್‌ಕಾ ಲಾ ಮತ್ತು ಪ್ಯಾಂಗಾಂಗ್‌ ಲೇಕ್‌ನ ಉತ್ತರ ಮತ್ತು ದಕ್ಷಿಣ ದಂಡೆಯಲ್ಲೂ ಭಾರತ ಮತ್ತು ಚೀನ ಪಡೆಗಳ ನಡುವೆ ಕೆಲವು ಬಾರಿ ಸಂಘರ್ಷ ನಡೆದಿದೆ. ನಮ್ಮ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next