ಜಮ್ಮುಕಾಶ್ಮೀರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡು ದಿನಗಳ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರವಾಸದ ಕೈಗೊಂಡಿದ್ದು ಇಂದು ಬೆಳಿಗ್ಗೆ ಲೇಹ್ ಗೆ ತಲುಪಿದ್ದಾರೆ.
ರಾಜ್ ನಾಥ್ ಸಿಂಗ್ ಇಂದು ಲಡಾಕ್ ಗೆ ಭೇಟಿ ನೀಡಲಿದ್ದು, ಶನಿವಾರ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದ್ದಾರೆ. ಇಂದಿನ ಭೇಟಿಯಲ್ಲಿ ಸಚಿವರಿಗೆ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಾಥ್ ನೀಡಲಿದ್ದಾರೆ.
“ಲಡಾಕ್ ಮತ್ತು ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡುತ್ತಿದ್ದು ಗಡಿಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು. ಮಾತ್ರವಲ್ಲದೆ ಈ ಪ್ರದೇಶದಲ್ಲಿ ನಿಯೋಜಿಸಲಾದ ಸಶಸ್ತ್ರ ಪಡೆಗಳ ಸಿಬ್ಬಂದಿಯೊಂದಿಗೆ ಮಾತುಕತೆ ಕೂಡ ನಡೆಸುತ್ತೇನೆ ಎಂದು ರಾಜನಾಥ್ ಸಿಂಗ್ ಅವರು ಶುಕ್ರವಾರ ಬೆಳಿಗ್ಗೆ ಟ್ವೀಟ್ ಮೂಲಕ ತಿಳಿಸಿದ್ದರು.
ಬುಧವಾರ ಭಾರತ ಮತ್ತು ಚೀನಾ ನಡುವಿನ ಕಮಾಂಡರ್ ಹಂತದ ಮಾತುಕತೆ ನಡೆದಿದ್ದು. ಈ ಸಂದರ್ಭದಲ್ಲಿ ಚೀನಾ ಪ್ಯಾಂಗಾಂಗ್ ತ್ಸೋನ ಫಿಂಗರ್ 4ರಿಂದ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಲು ನಿರಾಕರಿಸಿತ್ತು ಎಂದು ವರದಿ ತಿಳಿಸಿದೆ.ಗಲ್ವಾನ್ ಕಣಿವೆ ಪ್ರದೇಶ, ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಲು ಭಾರತ ಮತ್ತು ಚೀನಾ ಎರಡೂ ಒಪ್ಪಿಗೆ ಸೂಚಿಸಿದ್ದವು. ಆದರೆ ಎಲ್ಲಾ ಗಡಿ ಪ್ರದೇಶದಿಂದ ಚೀನಾ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಭಾರತ ಬೇಡಿಕೆ ಇಟ್ಟಿರುವುದಾಗಿ ವರದಿ ತಿಳಿಸಿದೆ.
ಜುಲೈ ಆರಂಭದಲ್ಲಿ ರಾಜನಾಥ್ ಸಿಂಗ್ ಲಡಾಖ್‌ಗೆ ಭೇಟಿ ನೀಡಬಹುದೆಂದು ನಿರೀಕ್ಷಿಸಲಾಗಿತ್ತು ಆದರೆ ಅವರ ಪ್ರವಾಸವನ್ನು ಮುಂದೂಡಲಾಗಿತ್ತು. ಏತನ್ಮಧ್ಯೆ ಜುಲೈ 3 ರಂದು ಪ್ರಧಾನಿ ನರೇಂದ್ರ ಮೋದಿ ಗಡಿಗೆ ಭೇಟಿ ನೀಡಿ ಯೋಧರೊಂದಿಗೆ ಚರ್ಚಿಸಿದ್ದರು ಮಾತ್ರವಲ್ಲದೆ ಆತ್ಮಸ್ತೈರ್ಯ ತುಂಬಿದ್ದರು. ಅದಾಗಿ ಎರಡು ವಾರಗಳ ನಂತರ ರಕ್ಷಣಾ ಸಚಿವರು ಲಡಾಖ್ ಗೆ ಭೇಟಿ ನೀಡುತ್ತಿದ್ದಾರೆ.
ಜೂನ್ 15 ರಂದು ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ಗಡಿಯಲ್ಲಿ ನಿರಂತರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.