Advertisement

ಅಭಿವೃದ್ಧಿಗೆ ಸ್ಪಂದಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ

10:24 AM Jul 07, 2019 | Suhan S |

ರಾಣಿಬೆನ್ನೂರ: ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಇಲಾಖೆಗಳಿಂದ ನಾಗರಿಕರಿಗೆ ದೊರೆಯಬೇಕಾದ ಸೌಲಭ್ಯ ಚಾಚೂ ತಪ್ಪದೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಮತ್ತು ಅಭಿವೃದ್ಧಿಗೆ ಸಹಕರಿಸದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಈ ದಿಸೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ಪಾಲಿಸಬೇಕು ಎಂದು ಪೌರಾಡಳಿತ ಸಚಿವ ಆರ್‌.ಶಂಕರ್‌ ಹೇಳಿದರು.

Advertisement

ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಸ್ಥಳೀಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೃದ್ಧರಿಗೆ, ಅಂಗವಿಕಲರಿಗೆ ವಿಧವೆಯರಿಗೆ ಸಕಾಲಕ್ಕೆ ಮಾಸಾಶನ ನೀಡಬೇಕು. ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಾಗರಿಕರು ಎದುರಿಸುವ ಸಮಸ್ಯೆಗಳಿಗೆ ಸ್ಪಂದಿಸಬೇಕು. ಯಾರೂ ಸಹ ಸಮಸ್ಯೆಗಳನ್ನು ಹೊತ್ತು ತಂದು ತಮ್ಮ ಬಳಿ ಹೇಳಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಅಭಿವೃದ್ಧಿ ಕುರಿತು ಇತ್ತೀಚಿಗೆ ಚಿಂತನಾ ಸಭೆ ಏರ್ಪಡಿಸಿದ್ದು, ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆ ಕಡಿವಾಣ, ಜನರಿಗೆ ತೊಂದರೆಯಾಗದಂತೆ ವರ್ತುಲ ರಸ್ತೆ ನಿರ್ಮಾಣ, ಮಾಸ್ಟರ್‌ ಪ್ಲಾನ್‌ ಕೈಗೊಳ್ಳಲು ನೀಲ ನಕ್ಷೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿರುವೆ. ನಗರದ ಜನತೆಗೆ 24X7 ನೀರು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ನೀರಿನ ಶೇಖರಣೆ ವಿಚಾರವಾಗಿ ಈಗಾಗಲೇ ವಿವರವಾಗಿ ಚರ್ಚಿಸಲಾಗಿದೆ ಎಂದರು.

ನಗರದ ಸಾರ್ವಜನಿಕ ಆಸ್ಪತ್ರೆಯನ್ನು ನವೀಕರಣ ಮಾಡಲಾಗಿದೆ. ಆದರೆ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಸ್ವಚ್ಛತೆಗೆ ಒತ್ತು ನೀಡಬೇಕು. ವಾಹನಗಳ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಉದ್ಯಾನ ನಿರ್ಮಿಸಿ ಅಲ್ಲಿ ಬೆಂಚುಗಳನ್ನು ಅಳವಡಿಸಬೇಕು. ಇದರಿಂದ ರೋಗಿಗಳಿಗೆ ಸಂತಸವಾಗುವುದರ ಮೂಲಕ ಮಾನಸಿಕ ನೆಮ್ಮದಿ ಹೊಂದಲು ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಎಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಪೌರಾಡಳಿತ ನಿರ್ದೇಶನಾಲಯದ ಮುಖ್ಯ ಎಂಜಿನಿಯರ್‌ ಸತ್ಯನಾರಾಯಣ, ಕಾರ್ಯಪಾಲಕ ಎಂಜಿನಿಯರ್‌ ಸೋಮೇಶ ಎಂ.ಸಿ., ಹೆಸ್ಕಾಂ ಹುಬ್ಬಳ್ಳಿ ವಿಭಾಗದ ಮುಖ್ಯ ಎಂಜಿನಿಯರ್‌ ಎಂ.ಎಂ.ಬೇವಿನಮರದ, ಯುಟಿಪಿ ವಿಶೇಷ ಭೂಸ್ವಾಧೀನಾಧಿಕಾರಿ ಅಬೀದ್‌ ಗದ್ಯಾಳ, ತಹಶೀಲ್ದಾರ್‌ ಸಿ.ಎಸ್‌. ಕುಲಕರ್ಣಿ, ತಾಪಂ ಇಒ ಎಸ್‌.ಎಂ.ಕಾಂಬಳೆ, ನಗರಸಭೆ ಪೌರಾಯುಕ್ತ ಡಾ| ಎನ್‌. ಮಹಾಂತೇಶ, ತಾಪಂ ವ್ಯವಸ್ಥಾಪಕ ಬಸವರಾಜ ಶಿಡೇನೂರ ಸೇರಿದಂತೆ ತಾಲೂಕು ಮತ್ತು ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next