Advertisement

ಸೋಲು ಶಾಶ್ವತವಲ್ಲ

11:50 PM Sep 29, 2019 | Sriram |

ಜೀವನದಲ್ಲಿ ಸೋಲು ಗೆಲುವು ಎಲ್ಲರ ಬದುಕಿನಲ್ಲಿ ಇದ್ದದ್ದೇ. ಕೆಲವರು ಸೋಲುತ್ತಾರೆ ಇನ್ನೂ ಕೆಲವರು ಗೆಲ್ಲುತ್ತಾರೆ. ಆದರೆ ಸತತ ಸೋಲು ಕಂಡ ಅನಂತರವೂ ಗೆಲ್ಲುವುದಿದೆಯಲ್ಲಾ ಅದು ಸಾಮಾನ್ಯ ಸಂಗತಿಯಲ್ಲ.

Advertisement

ಹೆಚ್ಚಿನವರು ಒಂದು ಸೋಲು ಕಂಡ ಅನಂತರ ಮತ್ತೆ ಆ ಗುರಿಯ ಕಡೆ ಕಣ್ಣೆತ್ತಿ ಸಹ ನೋಡುವುದಿಲ್ಲ. ಗೆಲುವು ಹೇಗೆ ಶಾಶ್ವತವಲ್ಲವೋ ಹಾಗೆ ಸೋಲು ಕೂಡ ಶಾಶ್ವತವಲ್ಲ ಎನ್ನುವುದು ಹೆಚ್ಚಿನವರು ಗಣನೆಗೆ ತೆಗೆದುಕೊಳ್ಳದ ವಿಷಯವಾಗಿದೆ. ಈ ಸೋಲಿನಿಂದ ಮತ್ತೆ ಏಳುವುದು ಹೇಗೆ… ಏನು ಮಾಡಬೇಕು ಎನ್ನುವ ಪ್ರಯತ್ನಕ್ಕೆ ನಮ್ಮ ಸುತ್ತಮುತ್ತಲೇ ಅನೇಕ ಉದಾಹರಣೆಗಳಿವೆ ಆದರೆ ನಾವು ಅದನ್ನು ತಿಳಿಯುವ ಗೋಜಿಗೆ ಹೋಗದೆ ನಾವು ನಮ್ಮ ಕನಸುಗಳನ್ನು ಬಲಿ ಕೊಡಲು ಸಿದ್ಧರಾಗಿರುತ್ತೇವೆ.
ನೀವು ಗಮನಿಸರಬಹುದು. ಇಸ್ರೋದ ಮೊನ್ನೆ ಮೊನ್ನೆಯ ಘಟನೆ ಅದೆಷ್ಟು ಸ್ಫೂರ್ತಿದಾಯಕವಾಗಿತ್ತು. ಅದೆಷ್ಟು ವರುಷಗಳ ಕನಸು, ಪರಿಶ್ರಮಗಳು ಒಟ್ಟು ಸೇರಿ ವಿಶ್ವದೆದುರು ಅದೇನನ್ನೋ ಸಾಧಿಸಲು ಪಣತೊಟ್ಟಂತೆ ಕಾದು ಕುಳಿತಿತ್ತು. ಇನ್ನೊಂದು ಕಡೆ ತಮ್ಮ ಸಾಧನೆಯನ್ನು ಅಭಿನಂದಿಸಲು ದೇಶವೇ ರಾತ್ರಿ 2 ಗಂಟೆಯ ವೇಳೆಯಲ್ಲಿ ಒಟ್ಟಿಗೆ ಇದ್ದಿತು. ತನ್ನ ಕನಸು ನನಸಾಗುವ ಸುಸಂದರ್ಭಕ್ಕೆ ನಿರೀಕ್ಷಿತ ಗುರಿ ತಲುಪುವ ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ಆ ಕ್ಷಣ ಇಡೀ ಇಸ್ರೋದ ಕುಟುಂಬ ಯಾವ ರೀತಿ ತನ್ನ ಪರಿಸ್ಥಿತಿಯನ್ನು ಎದುರಿಸಿರಬೇಡ.

ಇಸ್ರೋದ ಅಧ್ಯಕ್ಷರು ಗದ್ಗದಿತ ಧ್ವನಿಯಲ್ಲಿ ತಲೆ ತಗ್ಗಿಸಿ ಮಾತನಾಡಿದಾಗ ಅಲ್ಲಿ ರಾತ್ರಿ ಹಗಲೆನ್ನದೆ ಕೆಲಸ ನಿರ್ವಹಿಸಿದ ವಿಜ್ಞಾನಿಗಳು ಎಷ್ಟು ಕುಗ್ಗಿರಬೇಡ. ಎಲ್ಲ ಹಂತದ ಪ್ರಯತ್ನದಲ್ಲೂ ಗೆದ್ದು ತನ್ನ ಕೊನೆಯ ಕ್ಷಣದಲ್ಲಿ ಗೆಲುವಿನ ಗುರಿಯ ಬಿಂದುವನ್ನು ಮುಟ್ಟಲಾಗಲಿಲ್ಲ ಎಂದಾಗ ಅಲ್ಲಿನ ಪ್ರತಿಯೊಬ್ಬರ ಮಾನಸಿಕತೆಯನ್ನು ಅರಿಯುವುದು ಕಷ್ಟ ಸಾಧ್ಯ.

ಆ ಸಂದರ್ಭದಲ್ಲಿ ದೇಶದ ಪ್ರಧಾನಿ ಮುಂದೆ ಬಂದು ಇದು ಸೋಲಲ್ಲ ಎಂದು ಬೆನ್ನು ತಟ್ಟಿ ಭರವಸೆಯ ಅಪ್ಪುಗೆಯ ಕೊಟ್ಟಾಗ, ಇಡೀ ದೇಶಕ್ಕೆ ದೇಶವೇ ನಿಂತು ನಿಮ್ಮದು ಸೋಲಲ್ಲ ಎಂದು ಒಂದೇ ಕಂಠದಲ್ಲಿ ಹೇಳಿಸಿಕೊಂಡದ್ದು ಇದೆಯಲ್ಲಾ  ಅದು ನಿಜಕ್ಕೂ ಸೋಲಿನ ಅಂಚಿನಲ್ಲಿರುವ ಪ್ರತಿಯೊಬ್ಬರಿಗೂ ಮತ್ತೂಮ್ಮೆ ಎಡವಿ ಬಿದ್ದ ನೆಲದಿಂದ ಕೊಸರಿ ನಿಲ್ಲುವಂಥ ಅದಮ್ಯ ಆತ್ಮಶಕ್ತಿಯನ್ನು ತುಂಬಬಲ್ಲದು.

ಹೀಗೆ ಪ್ರತಿಯೊಬ್ಬರಿಗೂ ತಾನೂ ಸೋತಾಗ, ತನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಗೆಲುವು ಸಿಗದಾಗ ತನ್ನ ಹೆಗಲಿಗೆ ಹೆಗಲು ಕೊಟ್ಟು ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುವಂಥ ಧನಾತ್ಮಕ ವಾತಾವರಣ ನಿರ್ಮಿಸಿದ್ದೇ ಆದಲ್ಲಿ ಗೆಲುವಿನ ಗುರಿ ಹೆಚ್ಚೇನು ದೂರವಿಲ್ಲವೆಂದು ನಮಗೆ ಅನಿಸಿಬಿಡಬಹುದು.

Advertisement

 - ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next