Advertisement

ಕರ್ತವ್ಯಲೋಪ; ತಹಶೀಲ್ದಾರ್‌ ಹುದ್ದೆಯಿಂದ ಬಿಡುಗಡೆ

03:39 PM Jun 12, 2022 | Team Udayavani |

ತೆಲಸಂಗ: ಕರ್ನಾಟಕ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರಗಳಿಗೆ ಸಂಬಂಧಪಟ್ಟ ಮತದಾರರ ಹೆಸರುಗಳನ್ನು ಸೇರಿಸುವಲ್ಲಿ ಅಥಣಿ ತಹಶೀಲ್ದಾರ್‌ ಲೋಪವೆಸಗಿದ್ದಕ್ಕೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ಸೂಚನೆಯ ಮೇರೆಗೆ ಅಥಣಿ ಗ್ರೇಡ್‌ 1 ತಹಶೀಲ್ದಾರ್‌ ದುಂಡಪ್ಪ ಕೋಮಾರ ಅವರನ್ನು ಅಥಣಿ ತಹಶೀಲ್ದಾರ್‌ ಹುದ್ದೆಯಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ ಹೊರಡಿಸಿದ್ದಾರೆ.

Advertisement

ಅಥಣಿ ತಾಲೂಕಿನಲ್ಲಿ ಶಿಕ್ಷಕರು ಹಾಗೂ ಪದವೀಧರರು ಮತದಾರರ ಪಟ್ಟಿಯಲ್ಲಿ ನಿಗದಿತ ನಮೂನೆಯಲ್ಲಿ ದಾಖಲಾತಿಗಳೊಂದಿಗೆ ಮಾಹಿತಿ ನೀಡಿದ್ದರೂ ಸಹ ಸಾಕಷ್ಟು ಹೆಸರುಗಳು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ. ಸಾಕಷ್ಟು ಮತದಾರರ ನೋಂದಣಿ ಅರ್ಜಿಗಳನ್ನು ಬಾಕಿ ಇಟ್ಟುಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಅಥಣಿ ಇವರು ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯತನ ತೋರಿಸಿದ್ದು, ಚುನಾವಣಾ ಆಯೋಗ ಹಾಗೂ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ತೋರಿರುತ್ತಾರೆ. ಸದರಿ ಅಂಶವನ್ನು ಗಂಭೀರವಾಗಿ ಪರಿಗಣಿಸಿ, ಚುನಾವಣಾ ಪ್ರಕ್ರಿಯೆ ಅಂತಿಮ ಹಂತದಲ್ಲಿರುವುದರಿಂದ ಮತ್ತಷ್ಟು ಲೋಪಗಳು ಜರುಗದಂತೆ ತಹಶೀಲ್ದಾರ್‌ ದುಂಡಾಪ್ಪ ಕೋಮಾರ ಅವರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಹಾಗೂ ಅವರ ಸ್ಥಾನಕ್ಕೆ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶ ಗ್ರೇಡ್‌ 2 ತಹಶೀಲ್ದಾರ್‌ ವಿ.ಎಂ.ಗೋಠೆಕರ ಅವರನ್ನು ನಿಯುಕ್ತಿಗೊಳಿಸಲು ಹಾಗೂ ದುಂಡಪ್ಪ ಕೋಮಾರ ಮೇಲೆ ಪ್ರಕರಣ ದಾಖಲಿಸಿ, ಸೇವೆಯಿಂದ ಅಮಾನತುಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ಅವರ ಸೂಚನೆ ಅನ್ವಯ ದುಂಡಪ್ಪ ಕೋಮಾರ ಅವರನ್ನು ಜೂ.10 ರಂದು ಅಪರಾಹ್ನ ಅಥಣಿ ತಹಶೀಲ್ದಾರ್‌ ಹುದ್ದೆಯಿಂದ ಬಿಡುಗಡೆಗೊಳಿಸಿ, ವಿ.ಎಂ. ಗೋಠೆಕರ ಅವರನ್ನು ಅಥಣಿ ತಹಶೀಲ್ದಾರ್‌ ಹುದ್ದೆಗೆ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಜೂ.8ರಂದು ಅಥಣಿ ತಹಶೀಲ್ದಾರ್‌ ಕಚೇರಿಯ ಮತದಾರರ ಹೆಸರು ಸೇರ್ಪಡೆ ನಿರ್ಲಕ್ಷ್ಯದ ಕುರಿತು ಮತದಾರರ ಪಟ್ಟಿಯಲಿಲ್ಲ ಶಿಕ್ಷಕರ ಹೆಸರು! ಎಂಬ ಶೀರ್ಷಿಕೆಯಡಿ “ಉದಯವಾಣಿ’ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ವರದಿ ಆಧರಿಸಿದ ಅಧಿಕಾರಿಗಳು, ಸಮಸ್ಯೆ ಪರಿಶೀಲಿಸಿ ತಹಶೀಲ್ದಾರ್‌ ದುಂಡಪ್ಪ ಕೋಮಾರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಕ್ರಮಕ್ಕೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next