Advertisement

ದೇಶ ಕಾಯುವ ಅವರು ಹಬ್ಬಕ್ಕೆ ಬೆಳಕಾಗಿ ಬಂದರು!

09:17 AM Nov 10, 2018 | Team Udayavani |

ದೀಪಾವಳಿ ಎಂದರೆ ಕುಟುಂಬ ಸೇರಿ ಆಚರಿಸಿ ಸಂಭ್ರಮಿಸುವ ಹಬ್ಬ. ಆದರೆ ನಮ್ಮ ದೇಶವನ್ನು ಕಾಯುತ್ತಿರುವ ಸೇನೆಯವರ ಮನೆಯಲ್ಲಿ ದೀಪಾವಳಿ ಸಂಭ್ರಮ ಹೇಗೆ ಎಂಬುದನ್ನು ಸೆರೆ ಹಿಡಿದುಕೊಡುವ ಪ್ರಯತ್ನ ಇದು “ಯೋಧರ ಮನೆಯಲ್ಲಿ  ದೀಪಾವಳಿ’. 

Advertisement

ಸುಳ್ಯ: ಗಡಿಭಾಗದಲ್ಲಿ ದೇಶ ಕಾಯುವ ಅಪ್ಪ ಹಬ್ಬಕ್ಕೆ ಜತೆ ಸೇರಿದ್ದರಿಂದ ಮಗಳಂದಿರ ಸಂಭ್ರಮಕ್ಕೆ ಪಾರವೇ ಇಲ್ಲ. ಎಲ್ಲ ಹಬ್ಬಕ್ಕಿಂತಲೂ ಈ ಬಾರಿಯ ಹಬ್ಬ ತುಸು ಹೆಚ್ಚೇ ಎನ್ನುತ್ತ ಸಂಭ್ರಮಿಸುತ್ತಿದ್ದ ಮನೆ ಮಂದಿಯ ಮೊಗಗಳಲ್ಲಿ ಸಂತಸದ ಬೆಳಕು ಹಣತೆಯ ಪ್ರಭೆಯನ್ನು ಮೀರಿಸಿತ್ತು!

ಜಮ್ಮು ಕಾಶ್ಮೀರದಿಂದ 60 ಕಿ.ಮೀ. ದೂರದ ಉಧಂಪುರದಲ್ಲಿ ಸೇವೆ ಸಲ್ಲಿಸುತ್ತಿರುವ ಜಟ್ಟಿಪಳ್ಳದ ರಾಜೇಂದ್ರ ಅವರ ಮನೆಯಲ್ಲಿ ದೀಪಾವಳಿ ಗೌಜಿ ಮನೆ ಮಾಡಿತ್ತು. ವರ್ಷದಲ್ಲಿ ಮೂರು ಬಾರಿ ರಜೆ ಇದ್ದರೂ ಅವರು ದೀಪಾವಳಿಗೆ ಬರಲಾಗದೆ ಮೂರು ವರ್ಷ ಕಳೆದಿತ್ತು. ಈ ಬಾರಿ ಹಬ್ಬಕ್ಕೆ ಬಂದವರಿಗೆ ಮನೆ ಮಂದಿಯ ಜತೆ ಬೆಳಕಿನ ಹಬ್ಬದ ಸಂಭ್ರಮ -ಸಡಗರ.

ಅವರ ಪುಟ್ಟ ಮನೆಯಲ್ಲಿ ರಾತ್ರಿ 11 ಗಂಟೆಯ ತನಕ ಹಣತೆಯ ಬೆಳಕು, ಪಟಾಕಿ ಸದ್ದು ಇತ್ತು. ಸಿಹಿ ತಿನಿಸು ಬಾಯಿ ತುಂಬಾ ತುಂಬಿತ್ತು. ಯೋಧನ ಜತೆಗೆ ಮನೆ ಮಂದಿ ಹಬ್ಬ, ಹಬ್ಬದೂಟ ಸವಿದು ರಂಗು ತುಂಬಿದರು. “ನಮ್ಮಲ್ಲಿ ಹಣತೆ ಹಚ್ಚಿ, ಪಟಾಕಿ ಸಿಡಿಸುವ ಆಚರಣೆ ಮಾತ್ರ ಇದೆ. ಅದನ್ನು ವರ್ಷಂಪ್ರತಿ ಸಂಭ್ರಮಿಸುತ್ತೇವೆ. ಆದರೆ ಈ ಬಾರಿ ಸಂಭ್ರಮ ದುಪ್ಪಟ್ಟು’ ಎಂದರು ಮನೆ ಮಂದಿ.


22 ವರ್ಷಗಳಿಂದ ಸೇನೆಯಲ್ಲಿರುವ ರಾಜೇಂದ್ರ ಅವರ ಮನೆಯಲ್ಲಿ ತಾಯಿ, ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಈ ಬಾರಿಯ ದೀಪಾವಳಿಗೆ ರಾಜೇಂದ್ರ ಅವರ ಆಗಮನ ದೀಪಗಳ ಬೆಳಕು ಇನ್ನಷ್ಟು ಪಸರಿಸಿದೆ.

“ಮೂರು ವರ್ಷಗಳ ಹಿಂದೆ ತಂದೆ ದೀಪಾವಳಿ ಹಬ್ಬಕ್ಕೆ ಬಂದಿದ್ದರು. ಬಳಿಕ ಈ ಬಾರಿಯೇ ಬಂದದ್ದು. ಈ ಸಲ 
ಆಚ  ರಣೆ, ಸಂಭ್ರಮ ತುಸು ಹೆಚ್ಚೇ ಅನ್ನ ಬಹುದು’ ಎಂದು ತಂದೆ ಜತೆಗಿನ ದೀಪಾವಳಿ ಹಬ್ಬದ ಸವಿಯನ್ನು ಹಂಚಿ  ಕೊಂಡರು ಪ್ರಥಮ ಪಿಯುಸಿ ವಿದ್ಯಾರ್ಥಿನಿ, ಹಿರಿ ಮಗಳು ಸುಚಿತ್ರಾ ಆರ್‌.

Advertisement

ರಾಜೇಂದ್ರ ಅವರ ತಾಯಿ ಕುಸುಮಾವತಿ, ಪತ್ನಿ ಕನಕಲತಾ; ಪುತ್ರಿಯರು ಸುಚಿತ್ರಾ, ರೋಶ್ನಿ. ರಾಜೇಂದ್ರ ಅವರು ರಾಜಸ್ಥಾನ, ಪಂಜಾಬ್‌, ಅಸ್ಸಾಂ ಮೊದಲಾದೆಡೆ ಕರ್ತವ್ಯ ನಿರ್ವಹಿಸಿ, ಈಗ ಜಮ್ಮುವಿನಲ್ಲಿ  ಸೇವೆ ಸಲ್ಲಿಸುತ್ತಿದ್ದಾರೆ.

ನವೋಲ್ಲಾಸದೊಂದಿಗೆ ಕರ್ತವ್ಯಕ್ಕೆ…
“ದೀಪಾವಳಿಗೆ ಬಾರದೆ ಮೂರು ವರ್ಷ ಆಯಿತು. ಪ್ರತಿ ವರ್ಷ ಬರುವುದು ಅಸಾಧ್ಯ. ನ.3ಕ್ಕೆ ಊರಿಗೆ ಬಂದಿದ್ದೆ. ಹಬ್ಬದ ದಿನಗಳಲ್ಲಿ ಮನೆ ಮಂದಿಯೆಲ್ಲ ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದೆವು. ನವೋಲ್ಲಾಸದೊಂದಿಗೆ ನ. 12ಕ್ಕೆ ಹೊರಡುತ್ತೇನೆ. ನ.15ಕ್ಕೆ ಕರ್ತವ್ಯಕ್ಕೆ ಸೇರುತ್ತೇನೆ.
 ರಾಜೇಂದ್ರ, ಯೋಧ

22 ವರ್ಷಗಳ ಅವಧಿಯಲ್ಲಿ ಕೇವಲ ಮೂರು ಬಾರಿ ದೀಪಾವಳಿ ಹಬ್ಬಕ್ಕೆ ಬಂದಿದ್ದಾರೆ. ಅವರ ಜತೆಗೆ ಹಬ್ಬ ಆಚರಣೆ ವಿಶೇಷ. 
ಕನಕಲತಾ, ರಾಜೇಂದ್ರರ ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next