ಪಲ್ಲೆಕೆಲೆ: ಶ್ರೀಲಂಕಾ ಎದುರಿನ ಏಕದಿನ ಸರಣಿಯಲ್ಲಿ ಭಾರತ ಗೆಲುವಿನ ಆರಂಭ ಪಡೆದಿದೆ. ಶುಕ್ರವಾರದ ಮೊದಲ ಮುಖಾಮುಖಿಯನ್ನು 4 ವಿಕೆಟ್‌ಗಳಿಂದ ತನ್ನದಾಗಿಸಿಕೊಂಡಿದೆ.
ಶ್ರೀಲಂಕಾ 48.2 ಓವರ್‌ಗಳಲ್ಲಿ 171ಕ್ಕೆ ಆಲೌಟಾದರೆ, ಭಾರತ 38 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿತು. 25ಕ್ಕೆ 3 ವಿಕೆಟ್ ಉಡಾಯಿಸಿದ ಬಳಿಕ ಅಜೇಯ 22 ರನ್ ಮಾಡಿದ ಆಫ್ ಸ್ಪಿನ್ನರ್ ದೀಪ್ತಿ ಶರ್ಮ ಪಂದ್ಯಶ್ರೇಷ್ಠ ಗೌರವ ಒಲಿಸಿಕೊಂಡರು.
ಬೌಲಿಂಗ್ ಸರದಿಯಲ್ಲಿ ಮಿಂಚಿದ ಉಳಿದಿಬ್ಬರೆಂದರೆ ಮಧ್ಯಮ ವೇಗಿಗಳಾದ ರೇಣುಕಾ ಸಿಂಗ್ (29ಕ್ಕೆ 3) ಮತ್ತು ಪೂಜಾ ವಸ್ತ್ರಾಕರ್ (26ಕ್ಕೆ 2). ಇವರಲ್ಲಿ ಪೂಜಾ ಬ್ಯಾಟಿಂಗ್‌ನಲ್ಲೂ ಗಮನ ಸೆಳೆದರು (19 ಎಸೆತ, ಅಜೇಯ 21 ರನ್, 2 ಸಿಕ್ಸರ್).
ಅಪಾಯಕಾರಿ ಚಾಮರಿ ಅತಪಟ್ಟು (2) ಅವರನ್ನು ಅಗ್ಗಕ್ಕೆ ಕೆಡವಿದ ರೇಣುಕಾ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ಹಂಸಿಕಾ ಕರುಣಾರತ್ನೆ ಅವರನ್ನು ದೀಪ್ತಿ ಸೊನ್ನೆಗೆ ಉರುಳಿಸಿದರು. ಓಪನರ್ ಹಾಸಿನಿ ಪೆರೆರ (37), ಹರ್ಷಿತಾ ಮಾಧವಿ (28) ಮತ್ತು ನೀಲಾಕ್ಷಿ ಡಿ ಸಿಲ್ವ (43) ಸೇರಿಕೊಂಡು ಲಂಕಾ ಸರದಿಯನ್ನು ಬೆಳೆಸಿದರು.
ಭಾರತ ಕೂಡ ಆರಂಭಿಕ ಕುಸಿತಕ್ಕೆ ಸಿಲುಕಿತು. ಸ್ಮತಿ ಮಂಧನಾ (4), ಯಾಸ್ತಿಕಾ ಭಾಟಿಯ (1) ಬೇಗನೇ ಪೆವಿಲಿಯನ್ ಸೇರಿಕೊಂಡರು. ಆದರೆ ನಾಯಕಿಯ ಆಟವಾಡಿದ ಹರ್ಮನ್‌ಪ್ರೀತ್ ಕೌರ್ ಸರ್ವಾಧಿಕ 44 ರನ್ (63 ಎಸೆತ, 3 ಬೌಂಡರಿ), ಶಫಾಲಿ ವರ್ಮ 35 ರನ್ (40 ಎಸೆತ, 1 ಬೌಂಡರಿ, 2 ಸಿಕ್ಸರ್), ದೇವಲ್ 34 ರನ್ (40 ಎಸೆತ, 2 ಬೌಂಡರಿ) ಹೊಡೆದು ತಂಡವನ್ನು ದಡ ಸೇರಿಸಿದರು.