ಅಂಧಕಾರದ ವಿರುದ್ಧ ಬೆಳಕಿನ ಹೋರಾಟ, ದುಷ್ಟ ಶಕ್ತಿಗಳ ದಮನ ಶಿಷ್ಟರಿಗೆ ಸಮಾಧಾನ ನೀಡುವ ಅಜ್ಞಾನದಿಂದ ಜ್ಞಾನದ ಕಡೆಗೆ ಮುನ್ನಡೆಸುವ ಅಧರ್ಮದ ವಿರುದ್ಧ ಧರ್ಮ ಸೆಣೆಸಾಟ ನಡೆಸುವ, ಮನ ಮನೆಗಳನ್ನು ಬೆಳಗಿಸುವ ಹಬ್ಬ ದೀಪಾವಳಿ ಹಬ್ಬ. ಈ ಹಬ್ಬವನ್ನು ಆಶ್ವಯುಜ ಕೃಷ್ಣ ಪಕ್ಷದ ತ್ರಯೋದಶಿಯಿಂದ ಕಾರ್ತಿಕ ಶುದ್ಧ ಪಾಡ್ಯದವರೆಗೂ ಆಚರಿಸುತ್ತೇವೆ. ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಆಚರಣೆಗಳಲ್ಲಿ ಬಹಳ ಬದಲಾವಣೆಗಳಾಗಿವೆ.
ತ್ರಯೋದಶಿಯಂದು ನೀರುತುಂಬವ ಹಬ್ಬ ಅಥವಾ ಜಲಪೂರ್ಣ ತ್ರಯೋದಶಿ ಎನ್ನುತ್ತಾರೆ. ಅಂದು ಸಂಜೆಯ ಹೊತ್ತಿಗೆ ಮನೆಯನ್ನೆಲ್ಲ ಶುಚಿಗೊಳಿಸಿ ರಂಗೋಲಿ ಹಾಕಿ ತಳಿರು ತೋರಣ ಕಟ್ಟಿ ಎಲ್ಲೆಡೆ ಅಂದರೆ ಮನೆಯ ಮುಂದೆ ತುಳಸಿಕಟ್ಟೆಯ ಹತ್ತಿರ ದೀಪಗಳನ್ನು ಹಚ್ಚುತ್ತಾರೆ. ಮನೆಯ ದಕ್ಷಿಣ ದಿಕ್ಕಿಗೆ ಯಮ ದೀಪ ಎಂದು ದೀಪಹಚ್ಚಿ ಯಮನಿಗೆ ವಂದಿಸಲಾಗುತ್ತದೆ. ಅಲ್ಲದೇ ಯಮದೀಪ ದಾನ ಎಂದು ಹಿತ್ತಾಳೆ, ಕಂಚು, ಬೆಳ್ಳಿಯ ದೀಪಗಳನ್ನು ಶಕ ದಾನ ಮಾಡುವ ಪದ್ಧತಿಯಿದೆ. ಬಚ್ಚಲು ಮನೆಯ ಹಂಡೆಗೆ ನೀರು ತುಂಬಿಸಿ, ಕಟ್ಟೆಯ ಮೇಲೆ ರಂಗೋಲಿ ಹಾಕಿ ಮಾರನೆಯ ದಿನದ ಎಣ್ಣೆ ಸ್ನಾನಕ್ಕೆ ಸಿದ್ಧ ಮಾಡಿಟ್ಟುಕೊಳ್ಳುತ್ತಾರೆ. ಒಲೆಯಲ್ಲಿ ಉರಿಹಾಕಿ ಹಂಡೆನೀರು ಕಾಯಿಸುವುದು, ಅವಿಭಕ್ತ ಕುಟುಂಬಗಳು, ಒರಳು, ಒನಕೆ, ಬೀಸುವ ಕಲ್ಲಿನ ಉಪಯೋಗಗಳು ಇನ್ನು ಅನೇಕ ಮಾಹಿತಿಗಳು ಚರಿತ್ರೆಯ ಪುಟಗಳಲ್ಲಿ ದಾಖಲಾಗುವ ವಿಚಾರಗಳಾಗಿವೆ.
ನರಕಾಸುರನ ಸಂಹಾರವನ್ನು ಸಂಭ್ರಮಿಸಲು ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮೊದಲೇ ಎದ್ದು ಪಟಾಕಿ ಸಿಡಿಸಿ ಎÇÉೆಡೆ ದೀಪ ಹಚ್ಚಿ ದೇವರ ಮುಂದೆ ಒಂದು ತಾಮ್ರದ ತಂಬಿಗೆಯೆಲ್ಲಿ ನೀರನ್ನಿಟ್ಟು ಅದರಲ್ಲಿ ಗಂಗೆಯನ್ನು ಆಹ್ವಾನಿಸಿ ಪೂಜಿಸಿ ಎಲ್ಲರೂ ಸ್ನಾನಮಾಡುವ ನೀರಿಗೆ ಅದನ್ನು ಬೆರೆಸಿ, ಎಣ್ಣೆ ಇಟ್ಟು ದೇವರಿಗೆ ಆರತಿ ಮಾಡಿ ಮನೆಯಲ್ಲಿ ಗೋ ಮಾತೆ ಇದ್ದರೆ ಅದಕ್ಕೂ ಆರತಿ ಮಾಡಿ, ತುಳಸಿಗೆ, ಹೊಸ್ತಿಲಿಗೆ ಆರತಿ ಮಾಡಿ ಮನೆಯವರೆಲ್ಲ ಆರತಿ, ಎಣ್ಣೆ ಶಾಸ್ತ್ರ ಮಾಡಿಕೊಂಡು ಅಭ್ಯಂಜನ ಮಾಡುತ್ತಾರೆ. ನವವಿವಾಹಿತ ಮಗಳು, ಅಳಿಯನನ್ನು ಆಮಂತ್ರಿಸಿ ವಿಧವಿಧವಾದ ಅಡಿಗೆಗಳನ್ನು ಮಾಡಿ ಉಪಚರಿಸಿ ಉಡುಗೊರೆ ಇತ್ತು ಸಂಭ್ರಮಿಸುತ್ತಾರೆ.
ಅಶ್ವಯುಜ ಅಮಾವಾಸ್ಯೆಯಂದು ಲಕ್ಷ್ಮೀ- ಕುಬೇರನ ಪೂಜೆಯನ್ನು ಮಾಡಬೇಕು. ಲಕ್ಷ್ಮೀ ಎಂದರೆ ಸಂಪತ್ತಿನ ಅಧಿದೇವತೆ. ಲಕ್ಷ್ಮೀ ಎಂದರೆ ಬೆಳಕು, ಜ್ಞಾನ, ಆರೋಗ್ಯ, ಸುಖ, ಶಾಂತಿ, ಯಶಸ್ಸನ್ನು ದಯಪಾಲಿಸುವ ದಯಾಮಯಿ. ಬೆಳ್ಳಿ ತಂಬಿಗೆಯಲ್ಲಿ ಬಾದಾಮಿ, ದ್ರಾಕ್ಷಿ, ಗೋಡಂಬಿ, ಖರ್ಜೂರ, ಕಲ್ಲು ಸಕ್ಕರೆಯನ್ನು ಹಾಕಿ ಮಾವಿನೆಲೆಗಳನ್ನು ಇಟ್ಟು ಕಲಶ ಸಿದ್ಧ ಮಾಡಿ ಅದರ ಮೇಲೆ ಬೆಳ್ಳಿತಟ್ಟೆಯಲ್ಲಿ ಅಕ್ಕಿ ಹಾಕಿ ಲಕ್ಷ್ಮೀ ನಾರಾಯಣರ ವಿಗ್ರಹವನ್ನಿಟ್ಟು ಬಂಗಾರದ ಒಡವೆಗಳಿಂದ ಅಲಂಕರಿಸಿ ನಾಣ್ಯಗಳನ್ನು ಸುತ್ತಲೂ ಜೋಡಿಸಿ ದೀಪಗಳನ್ನು ಬೆಳಗಿಸಿ ಮಂತ್ರರ್ಪೂರ್ವಕವಾಗಿ ಲಕ್ಷಿ¾à ನಾರಾಯಣರನ್ನು ಪೂಜಿಸಬೇಕು. ಜತೆಗೆ ಕುಬೇರನ ಪೂಜೆಯನ್ನು ಮಾಡಿ ಕುಬೇರನನ್ನು ಪ್ರಾರ್ಥಿಸಬೇಕು. ” ಓಂ ಧನದಾಯ ನಮಸ್ತುಭ್ಯಮ್, ನಿಧಿ ಪದ್ಮಾಧಿಪಾಯಾಚ ಭವಂತು ತತ್ಸಸಾಧನಮೇ ಧನಧಾನ್ಯಾದಿ ಸಂಪದಃ’ ಎಂದು ಪ್ರಾರ್ಥಿಸಿ ಹಬ್ಬದಡುಗೆಯನ್ನು ನೈವೇದ್ಯ ಮಾಡಿ ಆರತಿ, ಮಂಗಳಾರತಿಯನ್ನು ಮಾಡಬೇಕು. ಕಾರ್ತಿಕ ಶುದ್ಧ ಪಾಡ್ಯಮಿಯಂದು ಬಲಿಪಾಡ್ಯಮಿ ಆಚರಣೆ. ಕಾರ್ತಿಕ ಮಾಸ ನಿಯಾಮಕ ಇಂದಿರಾ ಸಹಿತ ದಾಮೋದರ. ಈ ಮಾಸವನ್ನು ದಾಮೋದರ ಮಾಸ ಎಂದು ಕರೆಯುತ್ತಾರೆ.
ಬಲಿ, ಪರಮದೈವ ಭಕ್ತ, ಪ್ರಹ್ಲಾದನ ಮೊಮ್ಮಗ ವಿರೋಚನ ಮತ್ತು ದೇವಾಂಗರ ಮಗ. ಬಲಿ ಅನೇಕ ರಾಜರುಗಳನ್ನು ಗೆದ್ದು ಚಕ್ರಾಧಿಪತ್ಯವನ್ನು ಸ್ಥಾಪಿಸಿ ಬಲಿ ಚಕ್ರವರ್ತಿ ಎನಿಸುತ್ತಾನೆ. ದಾನವರ ಗುರು ಶುಕ್ಲಾಚಾರ್ಯರ ಸಲಹೆಯಂತೆ ಇಂದ್ರಪದವಿಗೆ ಬರಲು ನೂರು ಅಶ್ವಮೇಧ ಯಾಗಗಳನ್ನು ನರ್ಮದಾ ನದಿಯ ಉತ್ತರ ಭಾಗದಲ್ಲಿ ನೆರವೇರಿಸುತ್ತಾನೆ. ನೂರನೆಯ ಯಾಗ ಮಾಡುತ್ತಿರುವಾಗ ಬಲಿ ಇಂದ್ರಪದವಿಗೆ ಬರುವುದು ಇಷ್ಟವಿಲ್ಲದ ದೇವತೆಗಳು ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ಮಹಾವಿಷ್ಣು ಅದಿತಿ ಕಶ್ಯಪನ ಮಗನಾಗಿ ಜನಿಸಿ ವಾಮನ ರೂಪದಿಂದ ಬಲಿಯ ಯಾಗ ಶಾಲೆಗೇ ಪ್ರವೇಶಿಸುತ್ತಾನೆ. ಅಪ್ರತಿಮ ಕಾಂತೀಯ ವಟುವನ್ನು ಕಂಡು ಎಲ್ಲರೂ ಬೆರಗಾಗಿ ನೋಡುತ್ತಾರೆ. ಬಲಿಯನ್ನು ವಾಮನ ನನಗೇನಾದರೂ ದಾನ ಕೊಡು ಎಂದು ಕೇಳುತ್ತಾನೆ. ಬಲಿ ಏನುಬೇಕಾದರು ಕೊಡಲು ಸಿದ್ಧನಿದ್ದರೂ, ಕೇವಲ ಮೂರುಪಾದ ಭೂಮಿ ಸಾಕೆಂದು ವಾಮನ ಹಠ ಹಿಡಿಯುತ್ತಾನೆ.
ಬಲಿಯ ಗುರುಗಳಾದ ಶುಕ್ರಾಚಾರ್ಯರಿಗೆ ಅನುಮಾನ ಬಂದು ಇವನು ಸಾಕ್ಷಾತ್ ಶ್ರೀಹರಿಯೆ, ಏನೋ ಅವಾಂತರ ಮಾಡಲು ಬಂದಿದ್ದಾನೆ ಎಂದು ಯೋಚಿಸಿ ಬಲಿಗೆ ದಾನ ಕೊಡಲು ಒಪ್ಪಬೇಡ ಎಂದರು ಕೇಳದೆ, ಮೂರುಪಾದ ಭೂಮಿಯನ್ನು ಅಳೆದುಕೊ ಎಂದು ಹೆಂಡತಿ ಸಂಧ್ಯಾವಳಿಯ ಒಪ್ಪಿಗೆಯಿಂದ ಸಮ್ಮತಿಸುತ್ತಾನೆ. ವಾಮನ ಒಂದು ಪಾದವನ್ನು ಇಟ್ಟ ತತ್‌ಕ್ಷಣ ಭೂಮಂಡಲವನ್ನೆಲ್ಲ ಆಕ್ರಮಿಸುವ ತ್ರಿವಿಕ್ರಮನಾಗಿ ಬೆಳೆದು ಮತ್ತೂಂದು ಪಾದದಿಂದ ಅಂತರಿಕ್ಷವನ್ನು ಆಕ್ರಮಿಸುತ್ತಾನೆ. ಮತ್ತೂಂದು ಪಾದವನ್ನು ಎಲ್ಲಿಡಲಿ ಎಂದು ಕೇಳಿದಾಗ ಬಲಿಗೆ ತಿಳಿಯುತ್ತದೆ ಇವನು ಸಾಕ್ಷಾತ್ ಶ್ರೀವಿಷ್ಣುವೇ ಎಂದು. ತತ್‌ಕ್ಷಣ ತನ್ನ ಶಿರದ ಮೇಲಿಡಲಿ ಎಂದು ತಲೆ ತಗ್ಗಿಸಿದಾಗ ಅವನನ್ನು ಪಾತಾಳ ಲೋಕಕ್ಕೆ ಒತ್ತಿಬಿಡುತ್ತಾನೆ ಮತ್ತು ಪಾತಾಳ ಲೋಕದ ಅಧಿಪತಿಯನ್ನಾಗಿ ಮಾಡಿ. ಈ ದಿನ ಎಂದರೆ ಕಾರ್ತಿಕ ಶುದ್ಧ ಪಾಡ್ಯಮಿ ಬಲಿಪಾಡ್ಯಮಿ ಎಂದೇ ಪ್ರಸಿದ್ಧವಾಗಲಿ, ಅಂದು ಎಲ್ಲರೂ ಬಲಿಯನ್ನು ಪೂಜಿಸಲಿ, ಬಲಿ ನೀನು ಚಿರಂಜೀವಿಗಳ ಸಾಲಿಗೆ ಸೇರುವೆ ಎಂದು ಆಶೀರ್ವದಿಸುತ್ತಾನೆ.
ಭೂಲೋಕದಲ್ಲಿ ಅಂದಿನಿಂದ ಎಲ್ಲರೂ ಬಲಿಚಕ್ರವರ್ತಿಯನ್ನು ಪೂಜಿಸುತ್ತಾರೆ. ದೀಪಾವಳಿಯಲ್ಲಿ ದೀಪ ದೇವತೆಯನ್ನು ಈ ಮಂತ್ರದಿಂದ ಪೂಜಿಸಬೇಕು. “ಭೋ ದೀಪ ಬ್ರಹ್ಮರೂಪಸ್ತವಮ್ ಅಂಧಕಾರನಿವಾರಕ ಇಮಾಂ ಮಾಯಾ ಕೃತಾಂ ಗೃಹಣ್ಣನ್ ತೇಜಹ ಮಯಿ ಪ್ರವತ್ರಯ ದೀಪಾವಲಿಂ ಮಯಾ ದತ್ತಾಂ ಗೃಹಾಣ ಪರಮೇಶ್ವರ ಆರಾತಿಕ್ಯರ್ ಪ್ರದಾನೇನ ಜ್ಞಾನದೃಷ್ಟಿಪದೋ ಭವ ಅಗ್ನಿಜ್ಯೋತಿರ್ ರವೀಹಿ ಜ್ಯೋತೋಚಂದ್ರಜ್ಯೋತಿ ಸ್ಥೈವ ಚ ಉತ್ತಮಃ ಸರ್ವತೇಜಸ್ಸು ದೀಪೋಯಮ್ ಪ್ರತಿಗೃಹ್ಯತಾಂ ದೀಪಾವಲಿಮ್ ಸಮರ್ಪಯಾಮಿ ”.
*ಸಾವಿತ್ರಿ ರಾವ್, ಕ್ಲೀವ್‌ಲ್ಯಾಂಡ್