ರಾಯಚೂರು: ಕೋವಿಡ್ ಹೊಡೆತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ವರ್ತಕ ವಲಯ ಈ ಬಾರಿ ಲಕ್ಷ್ಮೀ ಪೂಜೆಯನ್ನುಸರಳ ರೀತಿಯಲ್ಲೇ ಆಚರಿಸಲು ಮುಂದಾಗಿದೆ. ದೀಪಾವಳಿ ಹಬ್ಬದಂದು ಬಹುತೇಕರು ಸೀಮಿತ ಜನರನ್ನು ಆಹ್ವಾನಿಸಿ ಪೂಜೆ ಮಾಡುತ್ತಿದ್ದು, ಅದಕ್ಕಾಗಿ ಸಾಮಗ್ರಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.
ಮಾರುಕಟ್ಟೆಯಲ್ಲಿ ಶನಿವಾರ ಜನ ಹೂ, ಹಣ್ಣು, ಮಾವಿನ ಎಲೆ, ಬಾಳೆ ಗೊನೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿ ಖರೀದಿಯಲ್ಲಿ ಜನ ತೊಡಗಿದ್ದು, ಕಂಡುಬಂತು. ಹಿಂದಿನ ವರ್ಷಕ್ಕಿಂತ ಬೇಡಿಕೆ ಕಡಿಮೆಯಾಗಿದ್ದರೂ ಹೂ ಹಣ್ಣುಗಳದರದಲ್ಲೇನು ಇಳಿಕೆ ಕಂಡು ಬರಲಿಲ್ಲ. ಅದರಲ್ಲೂ ಚಂಡು, ಹೂ, ಸೇವಂತಿ, ಕುಂಬಳಕಾಯಿಗಳಿಗೆ ಭಾರೀ ಬೇಡಿಕೆ ಇತ್ತು. ಜನರನ್ನು ಸೇರಿಸದಂತೆ ಸರಳಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಪೂಜೆಗಳಿಗೆ ಬೇಕಾದ ಸಾಮಗ್ರಿಗಳ ಖರೀದಿಸಬೇಕಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಗ್ರಾಹಕರು.
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹಬ್ಬದ ವಾತಾವರಣದಲ್ಲಿ ಕಳೆ ಕಂಡು ಬರುತ್ತಿಲ್ಲ. ಎಲ್ಲೆಲ್ಲೂ ನೀರಸ ಎನಿಸುವಂತಿದೆ. ಅದಕ್ಕೆ ಕಳೆದ ಕೆಲ ತಿಂಗಳಿಂದ ನಿರೀಕ್ಷಿತ ವ್ಯಾಪಾರ ವಹಿವಾಟು ಇಲ್ಲದಿರುವುದು ಕಾರಣ ಇರಬಹುದು. ಕೇಳಿಸದ ಪಟಾಕಿ ಸದ್ದು: ದೀಪಾವಳಿ ಇನ್ನೂ ಮೂರ್‍ನಾಲ್ಕು ದಿನಗಳು ಇರುವಾಗಲೇ ಎಲ್ಲೆಲ್ಲೂ ಪಟಾಕಿ ಸದ್ದು ಶುರುವಾಗುತ್ತಿತ್ತು.
ಆದರೆ, ಈ ಬಾರಿ ಪಟಾಕಿ ಸದ್ದು ಕೇಳಿದಂತಾಗಿದೆ. ಬಸವೇಶ್ವರ ವೃತ್ತದಲ್ಲಿ ಇಷ್ಟೊತ್ತಿಗಾಗಲೇ ಪಟಾಕಿ ವ್ಯಾಪಾರಭರ್ಜರಿಯಾಗಿಯೇ ನಡೆಯುತ್ತಿತ್ತು. ಈ ಬಾರಿ ಜಿಲ್ಲಾಡಳಿತ ಅವಕಾಶನೀಡದ ಕಾರಣ ವರ್ತಕರು ವ್ಯಾಪಾರಕ್ಕೆ ಮುಂದಾಗಿಲ್ಲ. ಅಲ್ಲದೇ, ಯಾರಾದರೂ ಪಟಾಕಿ ಸಿಡಿಸಿದ್ದು ಕಂಡು ಬಂದರೆ ಕ್ರಮ ಜರುಗಿಸುವಂತೆ ಜಿಲ್ಲಾಡಳಿತ ನಿರ್ದೇಶನ ಕೂಡ ನೀಡಿದೆ.