Advertisement

ನೈವೇದ್ಯಕ್ಕೆ ಸಿಹಿ ಕಡುಬು ಮಾಡಿ ಲಕ್ಷ್ಮೀ ಪೂಜೆ

07:35 PM Nov 14, 2020 | Karthik A |

ಸಾಲು ಸಾಲಾಗಿ ದೀಪಗಳನ್ನು ಹಚ್ಚುವ ಹಬ್ಬವೇ ದೀಪಾವಳಿ. ಉತ್ತರ ಭಾರತದಲ್ಲಿ ದೀಪಾವಳಿ ಹಬ್ಬವು ಹೊಸ ವರ್ಷದ ಹಬ್ಬವೂ ಹೌದು. ಸಾಂಪ್ರದಾಯಿಕವಾಗಿ ಶುಕ್ಲಪಕ್ಷದ ಪಾಡ್ಯ ದಿನಗಳಲ್ಲಿ ಆಚರಿಸಲಾಗುತ್ತದೆ.

Advertisement

ಕೆಟ್ಟದೆಲ್ಲ ಕಳೆದು ಒಳ್ಳೆಯದರ ಪ್ರತೀಕವಾಗಿಯೇ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ಎಂದು ಆಚರಿಸ ಲಾಗುತ್ತದೆ. ಪ್ರಪಂಚದ ಎಲ್ಲಡೆ ಜನರು ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲದಕ್ಕೂ ಹೆಚ್ಚಾಗಿ “ಪಟಾಕಿ’ಗಳ ಹಬ್ಬವೆಂದೇ ದೀಪಾವಳಿ ಪ್ರಸಿದ್ದಿಯನ್ನು ಪಡೆದಿದೆ. ಈ ಸಂದರ್ಭ ಎಲ್ಲರ ಮನೆಯ ಬಾಗಿಲುಗಳನ್ನು ದೀಪಗಳಿಂದ ಬೆಳಗಲಾಗುತ್ತದೆ. ನಮ್ಮ ದೇಶದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ಅರೆ…! ದೀಪಾವಳಿ ಹಬ್ಬದ ಬಗ್ಗೆ ಮೆಲುಕು ಹಾಕುವುದರಲ್ಲಿ ನಮ್ಮ ಮನೆಯಲ್ಲಿ ಆಚರಿಸಿದ ನನ್ನ ಬಾಲ್ಯದ ಆಚರಣೆ ನೆನಪಾಯಿತು. ಬಾಲ್ಯದಲ್ಲಿ ನಾನು ರಾಯಚೂರು ಜಿಲ್ಲೆಯ ಒಂದು ಚಿಕ್ಕ ಹಳ್ಳಿಯಲ್ಲಿದೆ.. ಅಲ್ಲಿನ ಜನಜೀವನ, ಸಂಸ್ಕೃತಿ ಮತ್ತು ಹಬ್ಬದಲ್ಲಿ ಮಾಡುತ್ತಿರುವ ತಯಾರಿ ಎಲ್ಲವೂ ತುಂಬಾ ಸಂತಸ ನೀಡುತ್ತಿತ್ತು.

Advertisement

ಆ ದಿನ ಬೆಳಗ್ಗೆಯಿಂದಲೇ ಹಬ್ಬದ ತಯಾರಿ ಶುರುವಾಗುತ್ತಿತ್ತು. ಅಡುಗೆ, ತಿಂಡಿ, ತಿನಿಸಿನ ಜವಾಬ್ದಾರಿ ಅಮ್ಮ, ಚಿಕ್ಕಮ್ಮ, ಅಜ್ಜಿಯದಾದರೆ. ಪೂಜೆಗೆ ಬೇಕಾಗುವ ಹೂ, ತೋರಣಗಳನ್ನು ಸಿದ್ಧಪಡಿಸುವುದು ಅಪ್ಪ, ಚಿಕ್ಕಪ್ಪನ ಕೆಲಸವಾಗಿತ್ತು. ಅನಂತರ ಹೂ, ತೋರಣಗಳಿಂದ ಮನೆಗೆ ಶೃಂಗಾರವನ್ನು ತಮ್ಮಂದಿರು, ತಂಗಿಯರ ಜತೆಗೂಡಿ ಮಾಡುತ್ತಿದ್ದೆವು.

ದೀಪಾವಳಿಯ ದಿನ ಸಂಜೆ ನಮ್ಮ ಊರಿನ ಹಿರಿಯರು, ಕಿರಿಯರು, ಯುವಕರು, ಮಕ್ಕಳೆಲ್ಲರೂ ದೇವಸ್ಥಾನದಲ್ಲಿ ಸೇರುತ್ತಿದ್ದರು. ಹಾಗೆಯೇ ಗೆಳತಿಯರೆಲ್ಲರ ಜತೆಗೂಡಿ ದೇವಸ್ಥಾನದ ಸುತ್ತ ಇಟ್ಟಿರುವ ಹಣತೆಗಳಿಗೆ ಎಣ್ಣೆ, ಬತ್ತಿ ಇಟ್ಟು ದೀಪಗಳನ್ನು ಉರಿಸುತ್ತಿದ್ದೆವು. ಅನಂತರ ಸಂತಸ ಭಕ್ತಿ ಭಾವದಿಂದ ನಮಸ್ಕರಿಸಿ ಮಂಗಳಾರತಿಯ ಬಳಿಕ ಸಿಗುವಂಥ ಪ್ರಸಾದವನ್ನು ನೆನೆಸಿಕೊಂಡರೆ, ಮನಸ್ಸಿಗೆ ಅದೇಕೋ ಈಗಲೂ ಖುಷಿ ಎನಿಸುತ್ತದೆ.

ಅಲ್ಲಿಂದ ಕೂಡಲೆ ಮನೆಗೆ ಮರಳಿ ಮನೆ ದೇವರಿಗೆ ಮಂಗಳಾರತಿ ಮಾಡಿ ಅನಂತರ ಪೂಜೆ, ನೈವೇದ್ಯಕ್ಕೆ ಸಿಹಿ ಕಡುಬು ಮಾಡಿ ಲಕ್ಷ್ಮೀ ಪೂಜೆ ಮಾಡಿ ಬೆಳಗ್ಗೆ ಬಲೀಂದ್ರನ ವಿಸರ್ಜನೆ ಮಾಡಿ ಸ್ನಾನ ಮಾಡಿದರೆ ಅಲ್ಲಿಗೆ ದೀಪಾವಳಿ ಹಬ್ಬವೂ ಮುಗಿಯತು. ಅಂತೂ ಚಿಕ್ಕಂದಿನಲ್ಲಿ ಆಚರಿಸಿದ ದೀಪಾವಳಿ ಹಬ್ಬದ ಉತ್ಸಾಹವನ್ನು ನೆನೆದರೆ ಈಗಲೂ ಕೂಡ ಒಂದು ರೀತಿಯಲ್ಲಿ ಮನಸ್ಸಿಗೆ ಖುಷಿಯನಿಸುತ್ತದೆ.


ಅನ್ನಪೂರ್ಣ, ಕಲಬುರಗಿ ವಿಶ್ವವಿದ್ಯಾನಿಲಯ

Advertisement

Udayavani is now on Telegram. Click here to join our channel and stay updated with the latest news.

Next