Advertisement

Deepavali: ಕಂಡಿತು ಭರವಸೆಯ ಬೆಳಕು

02:06 PM Nov 12, 2023 | Team Udayavani |

2016ರ ಮಳೆಗಾಲದ ಸಮಯವದು. ಮಕ್ಕಳ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮುಂಬೈಗೆ ಬಂದಿದ್ದ ನಾನು ನಮ್ಮ ಸಂಸ್ಥೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಸಂಸ್ಥೆಯಲ್ಲಿ ಕೃತಕ ಗರ್ಭಧಾರಣಾ ವ್ಯವಸ್ಥೆಗಳಿದ್ದ ಕಾರಣ ಭಾರತೀಯ ಸೇನೆಯಲ್ಲಿ ಮಕ್ಕಳಾಗದ ಸಮಸ್ಯೆಯಿದ್ದವರು, ತಮಗೆ ಚಿಕಿತ್ಸೆ ಮಾಡಿಸಿಕೊಳ್ಳಲು ಅನುಕಂಪದ ಆಧಾರದಲ್ಲಿ ಮುಂಬೈ ಅಥವಾ ದೆಹಲಿಗೆ ಪೋಸ್ಟಿಂಗ್‌ ಹಾಕಿಸಿಕೊಂಡು ಬರುತ್ತಿದ್ದರು. ಸಮಯಕ್ಕೆ ಮೊದಲೆ ಜನಿಸುವ ಪ್ರೀಟರ್ಮ್ ಮಕ್ಕಳನ್ನು ಬದುಕಿಸುವಲ್ಲಿ ನಮ್ಮ ಸಂಸ್ಥೆಗೆ ಉತ್ತಮ ಹೆಸರಿತ್ತು. ಕೆಲವು ಎಂಟುನೂರು ಗ್ರಾಮು ತೂಗಿದ ಪ್ರೀಟರ್ಮ್ ಮಕ್ಕಳನ್ನೂ ನಾವು ಎರಡು ಮೂರು ತಿಂಗಳ ಹೋರಾಟದ ನಂತರ ಉಳಿಸಿಕೊಳ್ಳುವಲ್ಲಿ ಸಫ‌ಲವಾಗಿದ್ದ ನಿದರ್ಶನಗಳಿತ್ತು. ಅದು ಸೇನೆ ಮತ್ತು ಸೇನೆಯ ಕುಟುಂಬದವರ ಚಿಕಿತ್ಸೆಗೆ ಮಾತ್ರ ಸಂಬಂಧಿಸಿದ ಆಸ್ಪತ್ರೆಯಾದ ಕಾರಣ, ಸರಕಾರಿ ಸಂಸ್ಥೆಗಳಂತೆ ಹತ್ತು ಮಕ್ಕಳನ್ನು ನೋಡಿಕೊಳ್ಳಲು ಒಂದೇ ಸಿಸ್ಟರ್‌ ಇರುವಂತಹ ಸ್ಥಿತಿಯಿರಲಿಲ್ಲ. ಅತೀ ಕಡಿಮೆ ತೂಕದ ಮಗುವು ನಮ್ಮ ಐಸಿಯುವಿನಲ್ಲಿ ದಾಖಲಾದಲ್ಲಿ ಆ ಒಂದು ಮಗುವನ್ನು ಮಾತ್ರ ನಿರಂತರವಾಗಿ ಗಮನಿಸಲು ಸಿಸ್ಟರ್‌ಗಳು ಮತ್ತು ನನ್ನಂತಹ ಸ್ನಾತಕೋತ್ತರ ವಿದ್ಯಾರ್ಥಿಗಳು ಹಗಲು ರಾತ್ರಿ ಡ್ನೂಟಿ ಮಾಡುತ್ತಿದ್ದರು.

Advertisement

ಜುಲೈ ತಿಂಗಳ ಶನಿವಾರದ ಆ ಮಧ್ಯಾಹ್ನ ನನಗೆ ಬಹಳ ಚನ್ನಾಗಿ ನೆನಪಿದೆ. ಸಮಯ ಸುಮಾರು 2.30 ಆಗುತ್ತಿದ್ದಂತೆ, ನಾನು ನನ್ನ ಆ ದಿನದ ಡ್ನೂಟಿ ಮುಗಿಸಿ ಊಟಕ್ಕೆ ಹೋಗಲು ತಯಾರಾಗುತ್ತಿದ್ದೆ. ಆಗ ಹೆರಿಗೆ ವಾರ್ಡಿನಲ್ಲಿ ಆರು ತಿಂಗಳ ಗರ್ಭಿಣಿಯೊಬ್ಬಳು ಹೊಟ್ಟೆ ನೋವಿನೊಂದಿಗೆ ಬಂದಳು. ಅವಳು ಮಗುವನ್ನು ಹೆರಲು ತಯಾರಾಗುತ್ತಿದ್ದಂತೆ, ಅಷ್ಟು ಕಡಿಮೆ ಅವಧಿಯ ಮಗುವು ಉಳಿಯುವುದು ಬಹಳ ಕಷ್ಟವೆಂದು ಹಿರಿಯ ವೈದ್ಯರುಗಳಿಗೆ ಅನಿಸತೊಡಗಿತು. ಅಷ್ಟು ಕಡಿಮೆ ಅವಧಿಯ ಮಗು ಹೆಚ್ಚಿನ ಸಂದರ್ಭದಲ್ಲಿ ಹುಟ್ಟಿದ ಕೆಲವೇ ಸಮಯದಲ್ಲಿ ಅಸುನೀಗುವ ಕಾರಣ ಆ ಮಗು ಉಳಿಯಬಹುದೆಂಬ ಆಸೆಯು ಯಾರಲ್ಲಿಯೂ ಇರಲಿಲ್ಲ. ಆದರೂ ನಾವು ಸರಿಯಾದ ನಿಯಮಾವಳಿಗಳನ್ನು ಅನುಸರಿಸುವ ಸಂಸ್ಥೆಯಾಗಿದ್ದ ಕಾರಣ, ಮಗುವನ್ನು ಸ್ವೀಕರಿಸಲು ತಯಾರಾದೆವು. ಸುಮಾರು ಆರು ನೂರು ಗ್ರಾಮ್‌ ತೂಗುವ ಮಾಂಸದ ಮುದ್ದೆಯೊಂದು ತಾಯಿಯ ಗರ್ಭದಿಂದ ಹೊರಬಂದು ದುರ್ಬಲವಾದ ಅಳುವನ್ನು ಅತ್ತು ಮೌನಕ್ಕೆ ಜಾರಿತು. ಮಗುವಿಗೆ ಆಮ್ಲಜನಕವನ್ನು ನೀಡಿ ಆರೈಕೆ ಆರಂಭಿಸಿದ ನಾವು, ಮಗುವನ್ನು ಎತ್ತಿಕೊಂಡು ಹೋಗಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಿದೆವು.

ಮಗು ಸುಮಾರು ಎರಡು ವಾರಗಳ ಕಾಲ ವೆಂಟಿಲೇಟರ್‌ ಸಹಾಯದಿಂದ ಕೃತಕ ಉಸಿರಾಟದಲ್ಲಿತ್ತು. ತಾಯಿಯ ಹಾಲು ಸ್ವೀಕರಿಸುವ ಪರಿಸ್ಥಿತಿಯಲ್ಲಿ ಮಗುವು ಇಲ್ಲದ ಕಾರಣ ವಿವಿಧ ಸೂಜಿಗಳ ಮೂಲಕ ನಾವು ಮಗುವಿನ ರಕ್ತಕ್ಕೆ ಕೃತಕವಾದ ಪ್ರೋಟೀನ್‌ ಮತ್ತು ಲವಣಾಂಶಗಳನ್ನು ನೀಡುತ್ತಿದ್ದೆವು. ಆ ಮಗುವಿನಲ್ಲಿ ಅವಧಿಗೆ ಮೊದಲು ಹುಟ್ಟುವ ಶಿಶುವಿಗೆ ಬರುವ ಎಲ್ಲಾ ಸಮಸ್ಯೆಗಳು ಹಂತ ಹಂತವಾಗಿ ಬಂತು. ನಮ್ಮ ಪಠ್ಯಪುಸ್ತಕದಲ್ಲಿದ್ದ ಹೆಚ್ಚಿನ ಸಮಸ್ಯೆಗಳನ್ನು ನಮಗೆ ಒಂದೇ ಮಗುವಿನಲ್ಲಿ ನೋಡಲು ಸಿಕ್ಕಿತು. ಮಗು ಉಳಿಯುವ ಆಸೆಯಿಲ್ಲದಿದ್ದರೂ, ನಾವು ಪುಸ್ತಕದಲ್ಲಿ ತಿಳಿಸಿದಂತೆ ಪ್ರತಿಯೊಂದು ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡುತ್ತಾ ಬಂದೆವು. ಕೆಲವೊಂದು ಕಾಯಿಲೆಗಳು ಮಗುವಿನಲ್ಲಿ ಎಷ್ಟು ಉಲ್ಬಣವಾಯಿತೆಂದರೆ, ಮಗುವು ಉಳಿಯುವುದು ಕಷ್ಟವೆಂದು ನಾವು ಮನಸ್ಸಿನಲ್ಲಿ ಗ್ರಹಿಸಿಬಿಡುತ್ತಿದ್ದೆವು. ಮತ್ತು ನಾಳೆ ದಿನ ಮತ್ತೆ ಡ್ನೂಟಿಗೆ ಬಂದಾಗ ಆ ಮಗು ಜೀವಂತವಾಗಿರುವುದನ್ನು ಕಂಡು ನಿಟ್ಟುಸಿರು ಬಿಡುತ್ತಿದ್ದೆವು. ಇನ್ನೇನು ಕಥೆ ಮುಗಿಯಿತೆಂದು ನಾವು ಗ್ರಹಿಸಿದ ಒಂದೆರಡು ದಿನಗಳಲ್ಲಿ ಮಗು ಪವಾಡ ಸದೃಶವಾಗಿ ಚೇತರಿಸಿಕೊಳ್ಳುತ್ತಿತ್ತು.

ವೈದ್ಯರ ಪ್ರಯತ್ನದ ಜೊತೆಗೆ ಕಣ್ಣಿಗೆ ಕಾಣದ ಶಕ್ತಿಯೊಂದು ನಮ್ಮನ್ನು ಮುನ್ನೆಡೆಸುವಂತೆ ನಮಗೆ ಭಾಸವಾಗುತ್ತಿತ್ತು. ನಮ್ಮ ಸಂಸ್ಥೆಯ ಹಿಂದಿನ ಅಂಕಿ ಅಂಶಗಳ ಪ್ರಕಾರ ಆರುನೂರು ಗ್ರಾಮ್‌ ತೂಗುವ ಮಗುವು ಬದುಕುಳಿಯುವ ಸಾಧ್ಯತೆ ತೀರಾ ವಿರಳವಾಗಿತ್ತು. ಆರಂಭದಲ್ಲಿ ನಂಬಿಕೆ ಕಳೆದುಕೊಂಡಿದ್ದ ನಾವು ಈ ಮಗುವು ನಿಧಾನವಾಗಿ ಕೆಲವು ಗ್ರಾಮುಗಳ ತೂಕ ಹೆಚ್ಚಿಸಿಕೊಳ್ಳುತ್ತಿದ್ದಂತೆ ಮಗು ಬದುಕುಳಿಯುವ ಬಗ್ಗೆ ನಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡೆವು. ಸುಮಾರು ಮೂರು ತಿಂಗಳ ಪ್ರಯತ್ನದ ನಂತರ ಸುಮಾರು ಒಂದು ಕೆಜಿ ಎಂಟುನೂರು ಗ್ರಾಮ್‌ ತೂಗು ಮಗುವು ನಮ್ಮ ಐಸಿಯುನಿಂದ ಮನೆಗೆ ಹೋಗಲು ತಯಾರಾಗುತ್ತಿದ್ದಂತೆ, ನಮ್ಮ ಹೃದಯದೊಳಗೆ ನಾವು ಅಸಾಧ್ಯವಾದ ಕೆಲಸವನ್ನು ಸಾಧಿಸಿದ ಖುಷಿ ಜಿನುಗುತ್ತಿತ್ತು. ನನ್ನ ಮೂರು ವರ್ಷಗಳ ಸ್ನಾತಕೋತ್ತರ ಪದವಿ ಮುಗಿಯುವ ಸಮಯಕ್ಕೆ ಆ ಮಗುವು ಎಲ್ಲಾ ಮೂರು ವರ್ಷದ ಮಕ್ಕಳಂತೆ ನಮ್ಮ ಹೊರ ರೋಗಿ ವಿಭಾಗಕ್ಕೆ ತನ್ನ ಹೆತ್ತವರೊಂದಿಗೆ ನಡೆದುಕೊಂಡು ಬರುತ್ತಿತ್ತು. ಮಕ್ಕಳಿಗೆ ಆಟವಾಡಲು ಸಿದ್ದಪಡಿಸಿದ್ದ ಜಾಗದಲ್ಲಿ ಆ ಮಗುವು ಬೇರೆ ಮಕ್ಕಳ ಜೊತೆಗೆ ಆಟವಾಡುವುದನ್ನು ನಾನು ನೋಡುತ್ತಿದ್ದಂತೆ, ನಮ್ಮ ಮನಸ್ಸಿನಲ್ಲಿ ಆ ಮಗುವು ನಮ್ಮ ಕಣ್ಣ ಮುಂದೆ ಹೋರಾಡಿ ಬೆಳೆದ ದಿನಗಳು ನೆನಪಾಗುತ್ತಿದ್ದವು. ಪರಿಸ್ಥಿತಿ ಎಷ್ಟೇ ತದ್ವಿರುದ್ಧವಾಗಿದ್ದರೂ, ನಮ್ಮ ಪಯತ್ನವನ್ನು ನಾವು ಕೈ ಬಿಡದಿದ್ದರೆ ಭರವಸೆಯ ಬೆಳಕನ್ನು ಮೂಡುವುದೆಂಬ ನೀತಿಪಾಠವನ್ನು ಆ ಮಗುವು ನಮಗೆ ಕಲಿಸಿತ್ತು!

-ಮೇಜರ್‌
ಡಾ. ಕುಶ್ವಂತ್‌
ಕೋಳಿಬೈಲು,
ಮಕ್ಕಳ ತಜ್ಞ ವೈದ್ಯರು,
ಮಡಿಕೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next