Advertisement

Deepavali Spcl: ಮೂಲ ನಕ್ಷತ್ರದ ಹುಡುಗಿ…

02:11 PM Nov 12, 2023 | Team Udayavani |

“ಇನ್ನೂ ತೆಂಗಿನ ಕಾಯಿ ಹೆಕ್ಕಿ ತರೋಕೆ ಹೋಗಲ್ಲ. ಹಳ್ಳದಲ್ಲಿ ತೇಲಿ ಹೋದರೆ ಹೋಗಲಿ ಯಾವ ಸಂಸಾರ ಕಟ್ಟಿ ಬೆಳೆಸಬೇಕಿದೆ?’ ಎಂದು ಗೊಣಗುತ್ತಾ ರಾಯರು ಜಗುಲಿಯ ಕಂಬಕ್ಕೆ ಒರಗಿ ಹೆಂಡತಿಯಿಂದ ಬಿಸಿ ಬಿಸಿ ಕಾಫಿಯ ನಿರೀಕ್ಷೆಯಲ್ಲಿದ್ದರು. ಅಸಲಿಗೆ ಹೆಂಡತಿ ಮನೆಯೊಳಗಿಲ್ಲ, ಹಿತ್ತಲಿನಲ್ಲಿ ಸೊಂಪಾಗಿ ಬೆಳೆದ ಬಸಲೆ ಸೊಪ್ಪು ತರಲು ಹೋಗಿದ್ದಾರೆ. ಅಡುಗೆ ಮನೆಯಲ್ಲಿ ಸದ್ದು ಮಾಡಿದ್ದು ನಾಲ್ವತ್ತರ ಗಡಿ ದಾಟಿದ ಮಗ ಶ್ಯಾಮ್‌ ನೆತ್ತಿಯ ಮೇಲೆ ಉಳಿದಿರುವ ನಾಲ್ಕು ಕೂದಲು ಸರಿ ಮಾಡಿಕೊಳ್ಳುತ್ತಾ ಕಾಫೀ ತಂದು ರಾಯರ ಎದುರಿಗಿಟ್ಟ. ರಾಯರಿಗೆ ಸಿಡಿಲು ಹೊಡೆದಂತೆ ಆಯ್ತು “ಅಯ್ಯೋ ದೇವ್ರೆ ನನ್‌ ಮಾತು ಕೇಳಿಸಿಕೊಂಡನೋ ಏನೋ !?’ ಎಂದುಕೊಂಡರು.

Advertisement

“ಮೇಲಿನ ಪೇಟೆಯ ಬ್ರೋಕರ್‌ ಶಾಂತಮ್ಮ ಬರ ಹೇಳಿದ್ದಾರೆ ಒಂದೊಳ್ಳೆ ಮದುವೆ ಸಂಬಂಧ ಇದ್ಯಾಂತೆ’ ಎಂದು ಹೇಳಿ ಮಗನ ಮುಖ ನೋಡಿದ್ದೆ ತಡ, ಮಗ ಹೆಗಲ ಮೇಲಿನ ಟವೆಲ್‌ ಕೊಡವಿ ಎಲೆ-ಅಡಿಕೆ ಹರಿವಾಣ ಮಂಚದಾಡಿ ತಳ್ಳಿ ಹೊರ ನಡೆದ. ರಾಯರಿಗೆ ಬೇಕಾದಷ್ಟು ತೋಟ,ಹಣ,ಆಸ್ತಿ ಅಂತಸ್ತು ಎಲ್ಲವೂ ಇದೆ. ಸಾಲದೆಂಬಂತೆ ಪಟ್ಟಣದಲ್ಲೊಂದು ಟಾಕೀಸ್‌ ಬೇರೆ ಆದರೆ ದೇವರು ಒಂದು ವಿಚಾರದಲ್ಲಿ ಮಾತ್ರ ದ್ರೋಹ ಮಾಡಿ ಬಿಟ್ಟಿದ್ದ. ಮಗನಿಗೆ ಮದುವೆಯ ಯೋಗವಿರಲಿ, ಕನಿಷ್ಟ ಹುಡುಗಿಯನ್ನು ಭೇಟಿ ಮಾಡುವ ಯೋಗವೂ ಇರಲಿಲ್ಲ. ಪೇಟೆಯ ಬ್ರೋಕರ್‌ ಶಾಂತಮ್ಮ, ಈ ಬಾರಿ ಒಂದೊಳ್ಳೆ ಸಂಬಂಧವನ್ನೇ ಹೇಳಿದಂತೆ ಅನಿಸಿತು. ಹುಡುಗಿಯ ಪೂರ್ವಾಪರ ತಿರುಗ-ಮುರುಗ ಕೇಳಿ ತಿಳಿದು ಒಂದು ನಗೆ ಬೀರಿ ಮನೆಯ ಹಾದಿ ಹಿಡಿದರು ರಾಯರು.

ಇತ್ತಾ ಹುಡುಗಿ ಕಡೆಯವರು ಕೂಡ ಬ್ರೋಕರ್‌ ಹೇಳಿದ ಮಾತಿಗೆ ತಲೆದೂಗಿದರು. ಆ ಸಂಬಂಧ ಬೇಡ, ಈ ಹುಡುಗ ಬೇಡ ಎಂದು ಕಾದು ಕಾದು ಹುಡುಗಿಯ ವಯಸ್ಸು ಮೂವತ್ತೈದು ದಾಟಿದೆ. ಈಗ ಬರುವ ಸಂಬಂಧಗಳೆಲ್ಲ ವಿಚ್ಛೇದನವಾಗಿರುವವು. ಇಲ್ಲ ಮತ್ಯಾವುದೋ ಚಟಕ್ಕೆ ಬಿದ್ದವರೇ ಆಗಿರುತ್ತಿದ್ದರು. ಅಂತೂ ಎರಡೂ ಕಡೆಯವರನ್ನು ಬೇರೆ ಬೇರೆಯಾಗಿ ಭೇಟಿಯಾಗಿ, ಪರಸ್ಪರರ ಒಳಿತಿನ ಸಂಗತಿಗಳಿಗೆ ಇನ್ನಷ್ಟು ಬಣ್ಣ ಬಳಿದು ಒಪ್ಪಿಸಿ ಮದುವೆ ಮಾಡಿಯೇ ಬಿಟ್ಟರು ಬ್ರೋಕರ್‌ ಶಾಂತಮ್ಮ. ಈಗ ರಾಯರ ಮನೆಯಲ್ಲಿ ಹೊಸ ಬೆಳಕು ಮೂಡಿದೆ. ಆ ಬೆಳಕಿನಲ್ಲಿ “ಮೂಲ ನಕ್ಷತ್ರದ ಹುಡುಗಿ ಶ್ರೇಯಸ್ಸಲ್ಲ’ ಎಂಬ ಅಘೋಷಿತ ಕಟ್ಟುಪಾಡು ಮತ್ತು ಹಳ್ಳಿಯಲ್ಲಿ ಇರುವ ಹುಡುಗ ಉತ್ತಮನಲ್ಲ ಎಂಬ ಮೊಂಡು ಮಾತು ಪ್ರಜ್ವಾಲಿಸುತ್ತಿರುವ ಸಂಸಾರದ ಬೆಳಕಿನಲ್ಲಿ ಮುಲಾಜಿಲ್ಲದೆ ಕಾಲು ಕಿತ್ತಿದೆ.

-ಅಶ್ವಿ‌ನ್‌ ದಾವಣಿಬೈಲು

Advertisement

Udayavani is now on Telegram. Click here to join our channel and stay updated with the latest news.

Next