ನಮ್ಮಲ್ಲಿ ಯಾವತ್ತೂ ಅಪ್ಪನ ಪಂಚಾಂಗ ಹೊರಗೆ ಬರದೆ ದೀಪಾವಳಿ ಆಗುತ್ತಲೇ ಇರಲಿಲ್ಲ.
Advertisement
ಆಣಿಯಲ್ಲಿ ನೇತಾಡುತ್ತಿರುವ ಪಂಚಾಂಗ ತೆಗೆದು ಜಗಲಿಯ ತುದಿಯಲ್ಲಿ ಅಂಗಡಿ ಮುಚ್ಚಿಕೊಂಡು ಕೊಕ್ಕರೆ ಕೂತು ”ರಾತ್ರಿ ಚಂದ್ರೋದಯಂ.. ತೈಲ್ಯಾಭ್ಯಂಗಂ.. ಆಕಾಶದೀಪಂ..”ಅಂತ ಪಂಚಾಂಗ ಬಿಡಿಸುತ್ತಿದ್ದರು. ಅವಲಕ್ಕಿ ಪಂಚಕಜ್ಜಾಯ, ದೋಸೆ ಚಟ್ನಿ, ಪೂಜೆ ಪಾಯಸ ಎಲ್ಲ ಕಾರ್ಯಕ್ರಮ..ಎಲ್ಲವೂ ಇದರ ನಂತರವೇ. ಅದಾಗಲೇ ದೀಪಾವಳಿ ಬರುತ್ತಿದೆ ಅಂತ ಅಲ್ಲೊಂದು ಇಲ್ಲೊಂದು ಪಟಾಕಿ ಸದ್ದಿನಿಂದಲೇ ಗೊತ್ತಾಗುತ್ತಿತ್ತು ನಮಗೆ.
Related Articles
Advertisement
ಆಮೇಲೆ ಅಪ್ಪ ಹೇಳಿದ ದಿವಾ ಗಂಟೆಗೆ ಸರಿಯಾಗಿ ಹಣತೆ ಹಚ್ಚಿ, ಸಾಧ್ಯವಾದಷ್ಟು ರಭಸದಲ್ಲಿ ಜಾಗಟೆ ಬಾರಿಸಿ, ಶಂಖನಾದಗೈದು, ಕೊಡಪಾನದಲ್ಲಿ ಬಾವಿಯಿಂದ ಸಾಕಾ ಬೇಕಾ ಅಂತ ನೀರು ಸೇದಿ ಹಂಡೆಗೆ ತುಂಬಿಸುತ್ತಿದ್ದೆವು. ಮಧ್ಯೆ ಅಣ್ಣ ತಂದ ಪಟಾಕಿಯಲ್ಲಿ ಒಂದೆರಡನ್ನು ಕದ್ದು ತೆಗೆದು ಸ್ಫೋಟಿಸುತ್ತಿದ್ದೆವು. ಢಂ ಟಕಾರ್..!
ತುಂಬಿತೂ ತುಂಬಿತು..ಸಾಕೂ ಸಾಕೂ ಅಂದರೂ ನಮ್ಮ ನೀರೆಳೆಯುವ ಆಟ ಮುಗಿಯುತ್ತಿರಲಿಲ್ಲ. ಮತ್ತೊಂದೆರಡು ಬಾಲ್ದಿಯನ್ನೂ ಚರಿಗೆಯನ್ನೂ ತುಂಬಿ ತುಳುಕಿಸುತ್ತಿದ್ದೆವು. ಅದಾದ ಮೇಲೆ ಅಮ್ಮ ಅರ್ಧ ಗಂಟೆಯಲ್ಲಿ ಮಾಡಿದ ಅವಲಕ್ಕಿಯನ್ನು ಕ್ಷಣಮಾತ್ರದಲ್ಲಿ ಇಲ್ಲವಾಗಿಸುತ್ತಿದ್ದೆವು. ಅಪ್ಪ ಹೇಳುವ ಭ್ರಮ್ಮರಕ್ಕಸ ದಾರಿತಪ್ಪಿಸಿದ ಕತೆಯನ್ನೋ, ಚೆಂಡಾಡಿಯ ಭಟ್ರನ್ನು ಮೋಹಿನಿ ಅಡ್ಡಗಟ್ಟಿದಾಗ ಆ ಮನುಷ್ಯ ಭಾಗವತ ಓದುತ್ತಾ ತಾಳೆ ಮರ ತುದಿಯಲ್ಲಿ ಸೇಫಾಗಿ ಕೂತ ಕತೆಯನ್ನೋ, ಮರುದಿನ ಮೂರ್ತೆಯವನು ಹಗ್ಗಕಟ್ಟಿ ಇಳಿಸಿದ ರೋಚಕ ಕತೆಯನ್ನೋ ಕೇಳುತ್ತ ಗೂಡುದೀಪಕ್ಕೆ ಗೋಂದು ಹಚ್ಚುತ್ತಿದ್ದೆವು. ಅಮೇಲೆ ಅಣ್ಣ ಸ್ವಲ್ಪ ಚಿಲ್ಲರೆಯನ್ನು ಬಚ್ಚಲ ಹಂಡೆಯೊಳಗೆ ಚೆಲ್ಲಿಬಿಡುತ್ತಿದ್ದ. “ಕಡೇಗೆ ಮಿಂದವರಿಗೆ ದುಡ್ಡು” ಅನ್ನುತ್ತಿದ್ದ. ಮರುದಿನ ಕುದಿವ ನೀರಿಗೆ ಕೈಹಾಕಿ ಅದನ್ನು ತೆಗೆಯಲಾಗದು ಎಂಬುದು ನಮ್ಮ ಮುಗ್ಧ ಮಂಡೆಗೆ ಹೋಗುತ್ತಿರಲಿಲ್ಲ; ಕಣ್ಣರಳಿಸುತ್ತಿದ್ದೆವು. “ಇನ್ನ್ ಬೆಳಗ್ಗೆವರೆಗೆ ಯಾರೂ ಬೆಸ್ರೊಟ್ಟೆ (ಬಚ್ಚಲುಮನೆ) ನೀರ್ ಮುಟ್ಟುಗಿಲ್ಲೆ” ಅಂತ ಅಮ್ಮ ತಾಕೀತು ಮಾಡುತ್ತಿದ್ದರು. ನಾವ್ಯಾರೂ ಮಾತೆಯ ಮಾತಿಗೆ ತಪ್ಪಿ ‘ವಚನಭ್ರಷ್ಟ’ರಾಗುತ್ತಿರಲಿಲ್ಲ.
ಮರುದಿನದ ಸಂಭ್ರಮಗಳನ್ನು ಮನಸ್ಸಲ್ಲೇ ಕಲ್ಪಿಸಿಕೊಳ್ಳುತ್ತಾ, ಪಟಾಕಿ ಯಾವುದು ಸಿಗಬಹುದು, ಹಿಂಗಾದ್ರೆ ಹಂಗೆ ಆಯಿದ್ದ್ ಹೆಂಗೆ.. ಅಂತ ಲೆಕ್ಕ ಹಾಕುತ್ತಾ ಮಲಗುತ್ತಿದ್ದೆವು, ಹೊರಳಾಡುತ್ತಿದ್ದೆವು. ಆ ರಾತ್ರಿ ನಿದ್ದೆ ನಿಧಾನಗತಿಯಲ್ಲಿ ಪರಮ ಉದಾಸೀನದಿಂದ ನಮ್ಮ ಮೇಲೆ ಮುಸುಕೆಳೆಯುತ್ತದೆ. ಹಾಗೇ ನಾವು ಬಣ್ಣದ ಲೋಕಕ್ಕೆ ಹೋಗಿಬಿಡುತ್ತಿದ್ದೆವು. ಮರುದಿನ ಢಾಂ ಢೀಂ ಢಿಷ್ ಪಟಾರ್..ಸುಂಯ್..ಟಪಕ್… ಎಂಥ ಅದ್ಭುತ ಜಗತ್ತು! ಪಟಾಕಿ ಪ್ರಕೃತಿಗೆ ಮಾರಕ, ಪರಿಸರ ಮಾಲಿನ್ಯ ತಪ್ಪಿಸಿ…ಖುಷಿಯ ಮತ್ತು ಸುರಕ್ಷಿತ ದೀಪಾವಳಿ ನಮ್ಮದಾಗಲಿ, ಪಟಾಕಿ ಇಲ್ಲದ ಹಬ್ಬದ ಶುಭಾಶಯಗಳು ನಿಮಗೆ…. “ಹಬ್ಬ ಹಿಂಗೆ ಚಪ್ಪೆ ಆದ್ರೆ ಹೆಂಗೆ ಮಾರ್ರೆ..!” *ಜಯರಾಮ ನಾವಡ
ನಿಟಿಲಾಪುರ,