Advertisement
ದೀಪ ಸಂಜೀವಿನಿ, ಇದೊಂದು ಕೌಶಲ್ಯಾಭಿ ವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ- ರಾಜ್ಯ ಗ್ರಾಮೀಣ ಜೀವ ನೋಪಾಯ ಸಂವರ್ಧನ ಸಂಸ್ಥೆಯ ಅಡಿಯಲ್ಲಿನ ಕಾರ್ಯನಿರ್ವಹಿಸುವ ಸ್ವ-ಸಹಾಯ ಸಂಘಗಳ ಮೂಲಕ ಸ್ವತಃ ಮಹಿಳೆಯರೇ ದೀಪಗಳನ್ನು ತಯಾರಿಸಿ ನೇರ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಆರ್ಥಿಕ ಬೆಂಬಲವಾಗಿದೆ. ಈ ಯೋಜನೆಯು ಎರಡು ವರ್ಷಗಳಿಂದ ಪ್ರಾರಂಭವಾಗಿದ್ದು, ಗ್ರಾಪಂ ಅಡಿಯಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಕೈಚಳಕ, ಪರಿಶ್ರಮ ಹಾಗೂ ಸೃಜನಶೀಲತೆಯಿಂದ ತಯಾರಿಸಿದ ವಿವಿಧ ವಿನ್ಯಾಸದ ಮಣ್ಣಿನ ದೀಪಗಳಿಗೆ ಮಾರುಕಟ್ಟೆ ಒದಗಿಸುವುದಕ್ಕೆ ಹಾಗೂ ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುವುದರ ಮೂಲಕ ಮಹಿಳೆಯರ ಸ್ವಾವಲಂಬಿ ನಡೆಗಳನ್ನು ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
Related Articles
Advertisement
ಥರಹೇವಾರಿ ದೀಪ ತಯಾರಿ: ಮೈಸೂರಿನ ತಿ.ನರಸೀಪುರ ತಾಲೂಕಿನ ಭೀಮಾ ಬಾಯಿ ಮಹಿಳಾ ಸ್ವ-ಸಹಾಯ ಸಂಘದವರು ಆನೆ ದೀಪ, ಗಣೇಶ ದೀಪ, ಏಳು ಮತ್ತು 9 ದೀಪಗಳನ್ನು ಒಳಗೊಂಡ ದೀಪ, ನವಿಲು ದೀಪ, ಮ್ಯಾಜಿಕ್ ದೀಪ, ಲ್ಯಾಂಪ್ ಸೇರಿದಂತೆ ವಿವಿಧ ವಿನ್ಯಾಸದ ಆಕರ್ಷಕ ದೀಪಗಳನ್ನು ಕಳೆದ ಎರಡು ತಿಂಗಳುಗಳಿಂದ ಸಿದ್ಧಗೊಳಿಸಿದ್ದಾರೆ. ಬಹುಮಹಡಿ ಕಟ್ಟಡದಲ್ಲಿ ಸ್ಟಾಲ್ ಹಾಕಿದ್ದು, ಸುತ್ತಲಿನ ವಿಕಾಸಸೌಧ, ವಿಧಾನಸೌಧ, ಆಡಿಟ್ ಭವನ ಹಾಗೂ ಎಂ.ಎಸ್. ಬಿಲ್ಡಿಂಗ್‌ನಲ್ಲಿ ಕೆಲಸ ಮಾಡುವ ನೌಕರರು ಬಂದು ತಮಗಿಷ್ಟವಾದ ದೀಪಗಳನ್ನು ಖರೀದಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಗಿಂತ ಈ ಸಲ ವ್ಯಾಪಾರವು ಚೆನ್ನಾಗಿ ಆಗಿದೆ ಎಂದು ಸಂಘದ ಶೃತಿ ಗೋವಿಂದ್ ತಿಳಿಸುತ್ತಾರೆ.
ಬೆಳಗಾವಿಯ ಜಿಜಾಯು ಸ್ವ-ಸಹಾಯ ಸಂಘ ಮತ್ತು ಶ್ರೀಸಾನ್ವಿ ಸ್ವ-ಸಹಾಯ ಸಂಘ, ಬೆಂಗಳೂರು ನಗರ, ಗ್ರಾಮಾಂತರ ಸೇರಿ ರಾಜ್ಯದ ನಾನಾ ಭಾಗದ ಸಂಘದವರು ವಿವಿಧ ಶೈಲಿಯ ದೀಪಗಳನ್ನು ತಯಾರಿಸಿ ನೇರ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಈ ಕೌಶಲ್ಯಾಭಿವೃದ್ಧಿ ಯೋಜನೆಯು ನೆರವಾಗುತ್ತಿದೆ. ●ಶಿಲ್ಪಾ ಕಡುಲ್ಕರ್, ಶ್ರೀಸಾನ್ವಿ ಸಂಘದ ಸದಸ್ಯರು.
ನಮ್ಮ ಸಂಪ್ರದಾಯಕ್ಕೆ ಹೊಸ ಮೆರುಗು ತರುವ ಉದ್ದೇಶದಿಂದಾಗಿ ಗ್ರಾಮೀಣ ಸೊಗಡಿನ ಮತ್ತು ಸ್ಥಳೀಯ ಸ್ವ-ಸಹಾಯ ಗುಂಪುಗಳ ಕೈಚಳಕದಿಂದ ತಯಾರಿಸಿದ ವಿವಿಧ ಬಗೆಯ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಉತ್ಪನ್ನಗಳನ್ನು ಕಚೇರಿ ಕಾರ್ಯಕ್ರಮಗಳಿಗೆ ಅಥವಾ ವಿಶೇಷ ವ್ಯಕ್ತಿಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ಗ್ರಾಮೀಣ ಮಹಿಳೆಯರ ಬದುಕನ್ನು ಬೆಳಕಾಗಿಸಿ ಪ್ರೋತ್ಸಾಹಿಸಬೇಕಾಗಿದೆ. ●ಉಮಾ ಮಹದೇವನ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ.
-ಭಾರತಿ ಸಜ್ಜನ್