ದೊಡ್ಡಬಳ್ಳಾಪುರ: ದೀಪಾವಳಿ ಹಬ್ಬದ ಸಾಲಿನ ನರಕ ಚತುರ್ದಶಿ ಆಚರಿಸಲು ತಾಲೂಕಿನಲ್ಲಿ ಸಿದ್ಧತೆಗಳು ನಡೆಯುತ್ತಿದ್ದು, ಈ ಬಾರಿ ದೀಪಾವಳಿಯಲ್ಲಿ ಪಟಾಕಿ ವ್ಯಾಪಾರಿಗಳು ಹೆಚ್ಚಿನ ಮಾರಾಟದ ನಿರೀಕ್ಷೆಯಲ್ಲಿದ್ದಾರೆ. ಕೊರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಪಟಾಕಿ ವ್ಯಾಪಾರ ಈ ಬಾರಿ ಬಿರುಸಾಗುವ ಲಕ್ಷಣಗಳು ಕಾಣುತ್ತಿವೆ.
ಈ ಬಾರಿಯೂ ಸುಪ್ರೀಂ ಕೋರ್ಟ್ ಆದೇಶದಂತೆ ಹಸಿರು ಪಟಾಕಿ ಹಾಗೂ ಮಾಲಿನ್ಯ ರಹಿತ ಪಟಾಕಿಗಳ ಮಾರಾಟಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಎಂದಿನಂತೆ ಪಟಾಕಿ ಮಾರಾಟಕ್ಕೆ ಪರವಾನಗಿ ಸಿಗುವುದು ವಿಳಂಬವಾಗಿತ್ತು. ಪ್ರತಿವರ್ಷ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಪಟಾಕಿಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೆಆರ್‌ಎನ್ ಲೋಕದ ಬಳಿ ಖಾಸಗಿ ಜಮೀನಿನಲ್ಲಿ ಪಟಾಕಿ ಮಾರಾಟಕ್ಕೆ ಪರವಾನಗಿ ನೀಡಲಾಗಿದೆ. ನಗರದ ಕೆಆರ್‌ಎನ್ ಲೋಕದ ರಸ್ತೆಯ ಕೆಸಿಪಿ ವೃತ್ತದ ಬಳಿ ಪರವಾನಗಿ ಪಡೆದ 8 ಅಂಗಡಿಗಳ ವ್ಯಾಪಾರಿಗಳು ಪಟಾಕಿಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ.
ಮಾರ್ಗಸೂಚಿ ಅನ್ವಯ ಮಾರಾಟ: ಸುಪ್ರೀಂ ಕೋರ್ಟ್ ಸೂಚನೆಯಂತೆ ಹಸಿರು ಪಟಾಕಿಗಳ ತಯಾರಿಕೆಯ ಮಾರ್ಗಸೂಚಿ ಅನುಸರಿಸಿ ತಯಾರಿಸಲಾಗಿರುವ ಕಂಪನಿಗಳಿಂದಲೇ ನಾವು ಪಟಾಕಿಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ, ಗ್ರಾಹಕರು ಯಾವುದೇ ಆತಂಕವಿಲ್ಲದೇ ಖರೀದಿಸಬಹುದು. ಆದರೆ, ಎಂದಿನಂತೆ ನಮಗೆ ಪಟಾಕಿ ಅಂಗಡಿ ಇಡುವುದಕ್ಕೆ ಜಾಗ ನೀಡುವುದು ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಪರವಾನಗಿ ಪಡೆಯುವುದು ವಿಳಂಬವಾಗುತ್ತಿದೆ. ಈ ಬಾರಿ ಪರವಾನಗಿ ಬೇಗ ಸಿಕ್ಕಿದರೂ ಸಹ, ಸ್ಥಳವನ್ನು ನಿಗದಿ ಮಾಡಲು, ಪರದಾಡುವಂತಾಗಿ, ಅಂಗಡಿಗಳಿಗೆ ವ್ಯವಸ್ಥೆ ಮಾಡಿಕೊಳ್ಳಲು ತ್ರಾಸವಾಗಿದೆ. ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸಿದರೂ ಮುಂಚಿತವಾಗಿ ಹೇಳಿದರೆ ನಮಗೆ ಅನುಕೂಲ ಆಗಲಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪಟಾಕಿಗಳ ಬೆಲೆಗಳು ಹೆಚ್ಚಾಗಿವೆ. ವ್ಯಾಪಾರ ಈಗ ತಾನೇ ಆರಂಭಗೊಳ್ಳುತ್ತಿದ್ದು, ಸೋಮವಾರದಿಂದ ಬಿರುಸುಗೊಳ್ಳಲಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರಿಗಳು.
ಸಂಜೆ ನಂತರ ಬಿರುಸುಗೊಂಡ ವ್ಯಾಪಾರ: ಟಿ20 ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ಗಳಿಸುತ್ತಿದ್ದಂತೆ, ಇತ್ತ ಪಟಾಕಿ ಅಂಗಡಿಗಳಲ್ಲಿ ದಾಂಗುಡಿ ಇಟ್ಟ ಕ್ರಿಕೆಟ್ ಅಭಿಮಾನಿಗಳು ಪಟಾಕಿಗಳನ್ನು ಕೊಂಡು ಸಿಡಿಸಿ ಸಂಭ್ರಮಿಸಿದರು. ಬೆಲೆ ಎರಿಕೆ ನಡುವೆ ದೀಪಾವಳಿಗೆ ಸ್ವಾಗತ: ಈ ಬಾರಿ ಅಮಾವಾಸ್ಯೆಯಂದು ಕೇತಗ್ರಸ್ಥ ಸೂರ್ಯ ಗ್ರಹಣ ಇರುವುದರಿಂದ ಅಂದು ನಡೆಯಬೇಕಾದ ಆಚರಣೆಗಳು ಬಹುಪಾಲು ಸೋಮವಾರವೇ ನಡೆಯಲಿವೆ. ದೀಪಾವಳಿ ಹಿನ್ನೆಲೆ ಹೂವು, ಬಾಳೆಕಂದು ಮಾವಿನಸೊಪ್ಪು, ತರಕಾರಿಗಳ ಬೆಲೆ ಗಗನಕ್ಕೇರಿವೆ.
ದೀಪಾವಳಿಯಲ್ಲಿ ಮನೆ ಮುಂದೆ ಹಚ್ಚಿಡುವ ಹಣತೆಗಳ ಮಾರಾಟ ಭರದಿಂದ ಸಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ದೀಪಾವಳಿಗೆ ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿ ರುವ ಸಾರ್ವಜನಿಕರು ಹಬ್ಬ ಆಚರಿಸಲು ಸಿದ್ಧವಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಪಟಾಕಿ ಹಚ್ಚಲು ನಿರ್ಬಂಧ: ಹಲವಾರು ಶಾಲೆಗಳಲ್ಲಿ ಮಕ್ಕಳಿಗೆ ಪಟಾಕಿ ಹಚ್ಚುವ ಬದಲು ದೀಪ ಹಚ್ಚಿ, ನಾವು ಪಟಾಕಿ ಹೊಡೆಯುವದಿಲ್ಲ ಎನ್ನುವ ಪ್ರಮಾಣಗಳು ಸಹ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಬೇರೆ ಮಕ್ಕಳು ಪಟಾಕಿ ಹೊಡೆಯುತ್ತಿದ್ದರೆ ನಾವು ನೋಡಿ ಕೊಂಡು ಹೇಗೆ ಇರಲು ಸಾಧ್ಯ. ಹಾನಿಕಾರಕ ವಲ್ಲದ ಸಣ್ಣ ಪಟಾಕಿಗಳಾದರೂ ನಮಗೆ ಹಚ್ಚಲು ಹಿರಿಯರು ಹಾಗೂ ಶಿಕ್ಷಕರು ಅನುವು ಮಾಡಿಕೊಡಬೇಕಿದೆ ಎನ್ನುತ್ತಾರೆ ಮಕ್ಕಳಾದ ಸೃಜನ್, ಸಂಜನ, ಸುಹಾಸ್,ಪ್ರಣವ್.