ಬೆಂಗಳೂರು: ಬೆಲೆ ಏರಿಕೆಯ ನಡುವೆಯೂ ಸಿಲಿಕಾನ್ ಸಿಟಿಯ ಜನರು ದೀಪಾವಳಿ ಆಚರಣೆಗೆ ಸಿದ್ಧತೆ ನಡೆಸಿದ್ದು, ದೀಪಗಳು, ಹೂ, ಹಣ್ಣು, ಪೂಜಾ ಸಾಮಗ್ರಿಗಳ ಜೊತೆಗೆ ಪಟಾಕಿಗಳ ಖರೀದಿ ಜೋರಾಗಿದೆ. ದೀಪಾವಳಿ ಹಬ್ಬಕ್ಕೆ ನಗರದಲ್ಲಿ 62 ಮೈದಾನದಲ್ಲಿ 320 ಮಳಿಗೆ ತೆರೆಯಲಾಗಿದ್ದು, ವಿವಿಧ ಬಗೆಯ ಪಟಾಕಿಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಮಕ್ಕಳು, ವೃದ್ಧರು ಎನ್ನದೇ ಎಲ್ಲ ವಯೋಮಾನದವರೂ ಪಟಾಕಿ ಅಂಗಡಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸುರ್ ಸುರ್ ಬತ್ತಿ, ಭೂಚಕ್ರ, ಹೂ ಕುಂಡ, ವಿಷ್ಣು ಚಕ್ರ, ಆನೆ ಪಟಾಕಿ, ರಾಕೆಟ್, ಮಾಲೆ ಪಟಾಕಿ, ಪ್ಲವರ್ ಪಾಟ್‌ಗಳ ಭಂಡಾರವೇ ಮಳಿಗೆಗಳಲ್ಲಿ ರಾರಾಜಿಸುತ್ತಿದೆ. ಇವುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಕೆಲವೊಂದು ಮಳಿಗೆಗಳಲ್ಲಿ ಹೆಚ್ಚು ಶಬ್ದ ಮಾಡುವ ಅಪಾಯಕಾರಿ ಪಟಾಕಿಗಳೂ ಮಾರಾಟಕ್ಕೆ ಲಭ್ಯವಿರುವುದು ಕಂಡು ಬಂದಿದೆ.
ಮಳಿಗೆಗೆ ಮುಗಿ ಬಿದ್ದಿರುವ ಸಾವಿರಾರು ಗ್ರಾಹಕರನ್ನು ನಿಯಂತ್ರಿಸಲು ಮಳಿಗೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬಹುತೇಕ ಕುಟುಂಬಸ್ಥರು ಮಕ್ಕಳೊಂದಿಗೆ ಬಂದು ಪಟಾಕಿ ಖರೀದಿಸುವ ದೃಶ್ಯ ಎಲ್ಲೆಡೆ ಕಂಡು ಬಂತು. ಪಟಾಕಿ ಬೆಲೆಯಲ್ಲಿ ಕೊಂಚ ಏರಿಕೆ ಆಗಿದ್ದು, ಬೆಲೆ ಕಡಿಮೆ ಮಾಡುವಂತೆ ಪಟಾಕಿ ಅಂಗಡಿ ಮಾಲೀಕರ ಜೊತೆಗೆ ಗ್ರಾಹಕರು ಚೌಕಾಸಿ ನಡೆಸುತ್ತಿದ್ದ ದೃಶ್ಯ ಕಂಡು ಬಂತು. ಆದರೂ ಜನ ತಮಗಿಷ್ಟದ ಪಟಾಕಿ ಖರೀದಿಸಿ ಸಂಭ್ರಮಿಸಿದರು.
ಶನಿವಾರ ತಡರಾತ್ರಿಯಿಂದಲೇ ನಗರದಲ್ಲಿ ಪಟಾಕಿ ಶಬ್ದ ಕೇಳಿಬಂತು. ಪ್ಲವರ್ ಪಾಟ್ ಗಳ ಜೊತೆಗೆ ಆಕರ್ಷಕ ನೂರಾರು ಪಟಾಕಿಗಳು ಆಗಸದೆತ್ತರಕ್ಕೆ ಚಿಮ್ಮಿ ಹೂವಿನಾಕಾರದಲ್ಲಿ ಭೂಮಿಯತ್ತ ಬೀಳುವ ದೃಶ್ಯ ಕಣ್ಮನ ಸೆಳೆಯಿತು. ಮನೆಗಳ ಮುಂದೆ ಮಕ್ಕಳು ನೆಲ ಚಕ್ರ ಉರುಳಿಸಿ ಖುಷಿಪಟ್ಟರೆ, ವಿವಿಧ ಬಣ್ಣಗಳ ಭೂಚಕ್ರವು ಆಕರ್ಷಕವಾಗಿ ಎತ್ತರಕ್ಕೆ ಬೆಳಕಿನ ಕಿರಣಗಳನ್ನು ಸೂಸಿ ಕಣ್ಣಿಗೆ ಮುದ ನೀಡಿತು. ನಗರದೆಲ್ಲೆಡೆ ಅಂಗಡಿ ಮುಂಗಟ್ಟುಗಳಲ್ಲಿ, ಮನೆ, ಮಂದಿರಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ ಗಮನ ಸೆಳೆಯುತ್ತಿದೆ.
ಹೊಸೂರು ಪಟಾಕಿ ಸಂತೆಗೆ ಜನಜಂಗುಳಿ: ಬೆಂಗಳೂರಿ ನಲ್ಲಿ ದೀಪಾವಳಿ ಎಂದಾಕ್ಷಣ ಮೊದಲು ನೆನಪಾಗುವುದು ಹೊಸೂರು ಪಟಾಕಿ ವ್ಯಾಪಾರ. ಹಬ್ಬ ಎರಡು ಮೂರು ದಿನ ಬಾಕಿ ಇರುವಂತೆ ಗಡಿ ಭಾಗದಲ್ಲಿರುವ ಹೊಸೂರಿನಲ್ಲಿ ಜನಜಾತ್ರೆಯೇ ನೆರೆದಿರುತ್ತದೆ. 10 ಸಾವಿರ ರೂ.ನಿಂದ ಲಕ್ಷಾಂತರ ರೂ.ನ ಪಟಾಕಿಗಳನ್ನು ಜನ ಖರೀದಿಸುತ್ತಾರೆ. ಶನಿವಾರ ಪಟಾಕಿ ಖರೀದಿಗೆ ಸಾವಿರಾರು ವಾಹನಗಳು ಹೊಸೂರಿಗೆ ಬಂದಿದ್ದರಿಂದ ಅತ್ತಿಬೆಲೆ, ಎಲೆಕ್ಟ್ರಾನಿಕ್ಸ್ ಸಿಟಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಭಾನುವಾರ ಇದರ ಪ್ರಮಾಣ ದುಬ್ಬಟ್ಟು ಆಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೊಂಚ ವ್ಯಾಪಾರ ಇಳಿಕೆಯಾಗಿದ್ದರೂ, ಈ ಬಾರಿ ಗ್ರಾಹಕರ ಪ್ರಮಾಣ ಹೆಚ್ಚಾಗಿದೆ. ವಾರಾಂತ್ಯಕ್ಕೆ ಕೋಟ್ಯಂತರ ರೂ. ಪಟಾಕಿ ವಹಿವಾಟು ನಡೆಯಲಿದೆ ಎಂದು ಇಲ್ಲಿನ ಪಟಾಕಿ ಮಳಿಗೆಯ ಮಾಲಕರೊಬ್ಬರು ತಿಳಿಸಿದ್ದಾರೆ.
ಪಟಾಕಿಯಿಂದ ಕಣ್ಣಿಗೆ ಹಾನಿ: ಮಿಂಟೋ ಆಸ್ಪತ್ರೆ ಸಿದ್ಧ ನ.5ರಂದು ರಾತ್ರಿ 7 ಗಂಟೆಗೆ ವ್ಯಕ್ತಿಯೊಬ್ಬರು ಜಿಬ್ಲಿಬಾಂಬ್ ಸ್ಫೋಟಿಸುವ ವೇಳೆ ಅಲ್ಲೇ ಇದ್ದ ಬಂಗಾರಪೇಟೆಯ 7 ವರ್ಷದ ಬಾಲಕನ ಕಣ್ಣಿಗೆ ಗಂಭೀರವಾಗಿ ಗಾಯವಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪಟಾಕಿ ಅವಘಡಗಳಿಂದ ಕಣ್ಣಿಗೆ ತೊಂದರೆ ಆದರೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ 24×7 ಸಿದ್ಧವಾಗಿದೆ. ವಿಶೇಷ ತಜ್ಞರನ್ನು ಒಳಗೊಂಡ ವೈದ್ಯರ ತಂಡ, ಪ್ರತ್ಯೇಕ ಬೆಡ್, ತುರ್ತು ಚಿಕಿತ್ಸಾ ವಾರ್ಡ್ ಸಿದ್ಧ ಮಾಡಲಾಗಿದೆ. ಪಟಾಕಿಯಿಂದ ಗಂಭೀರ ಗಾಯಗೊಂಡರೆ ಸಹಾಯವಾಣಿ 9481740137, 08026707176 ಸಂಪರ್ಕಿಸಬಹುದು ಎಂದು ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ.ಜಿ.ನಾಗರಾಜು ತಿಳಿಸಿದ್ದಾರೆ.
ಎಲ್ಲೆಡೆ ವಾಹನ ದಟ್ಟಣೆ; ಸವಾರರು ಹೈರಾಣ:
ದೀಪಾವಳಿ ಹಿನ್ನೆಲೆಯಲ್ಲಿ ಜನರು ತಮ್ಮ ಊರಿಗಳಿಗೆ ಹೊರಟಿದ್ದರಿಂದ ಮೈಸೂರು ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆ, ಹಳೇ ಮದ್ರಾಸ್ ರಸ್ತೆ, ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಶನಿವಾರ ವಾಹನ ದಟ್ಟಣೆ ಹೆಚ್ಚಾಗಿತ್ತು. ಮೆಜೆಸ್ಟಿಕ್, ಯಶವಂತಪುರ, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.
ದೀಪಾವಳಿ ವೇಳೆ ಮಾಲಿನ್ಯ ಹೆಚ್ಚಳ: ದೀಪಾವಳಿ ವೇಳೆ ಬೆಂಗಳೂರಿನಲ್ಲಿ ಮಾಲಿನ್ಯ ಸ್ವಲ್ಪ ಹೆಚ್ಚಿರುತ್ತದೆ. ನ.11ರಂದು ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಜಯನಗರದಲ್ಲಿ 113ಕ್ಕೆ ಹೆಚ್ಚಿದರೆ, ಬಾಪೂಜಿ ನಗರದಲ್ಲಿ 110 ದಾಖಲಾಗಿದೆ. ಪೀಣ್ಯ 102, ಮೈಲಸಂದ್ರ 105, ಹೊಂಬೇಗೌಡನಗರದಲ್ಲಿ 85, ಸಿಲ್ಕ್ಬೋರ್ಡ್ 97, ಸಿಟಿ ರೈಲ್ವೆ ನಿಲ್ದಾಣ 92 ಎಕ್ಯೂಐ ದಾಖಲಾಗಿದೆ. ಪರಿಸರಕ್ಕೆ ಮಾಲಿನ್ಯ ಉಂಟು ಮಾಡುವ ಪಟಾಕಿ ಸಿಡಿಸದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಎಚ್ಚರಿಕೆ ನೀಡಿದೆ.