ಮಂಗಳೂರು: ಮೂರು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಕಾಟಿಪಳ್ಳ ನಿವಾಸಿ ದೀಪಕ್ ರಾವ್ ಕುಟುಂಬಕ್ಕೆ ಆಸರೆಯಾಗುವ ಉದ್ದೇಶದಿಂದ ಸಾರ್ವಜನಿಕರಿಂದ ಅನೂಹ್ಯವೆಂಬಷ್ಟು ಹಣಕಾಸಿನ ನೆರವು ಹರಿದು ಬಂದಿದೆ. ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕ ವಲಯದಿಂದ ಇಲ್ಲಿಯ ವರೆಗೆ ಬಂದಿರುವ ಮೊತ್ತ ಸುಮಾರು 80 ಲಕ್ಷ ರೂ. ದಾಟಿದೆ. ಆದರೆ ಈ ಹಿಂದೆ ಕೊಟ್ಟಿದ್ದ ಭರವಸೆಯಂತೆ ದೀಪಕ್ ಅವರ ಸಹೋದರನಿಗೆ ಇನ್ನೂ ಸರಕಾರದಿಂದ ಉದ್ಯೋಗ ಲಭಿಸಿಲ್ಲ ಎಂಬ ನೋವು ಕುಟುಂಬದವರನ್ನು ಕಾಡುತ್ತಿದೆ.
ಆದರೆ ದೀಪಕ್ ಅವರ ತಮ್ಮನಿಗೆ ವಾಮಂಜೂರು ಬಳಿಯಿರುವ ಪಿಲಿಕುಳ ನಿಸರ್ಗಧಾಮದಲ್ಲಿ ಸರಕಾರಿ ಉದ್ಯೋಗ ನೀಡಲು ಸಿದ್ಧವಿದ್ದರೂ ಅದಕ್ಕೆ ಕುಟುಂಬಸ್ಥರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗುತ್ತಿಲ್ಲ ಎನ್ನುವುದು ಜಿಲ್ಲಾಡಳಿತದ ವಾದ. ಹೀಗಾಗಿ ದೀಪಕ್ ಕುಟುಂಬಕ್ಕೆ ನೀಡಿದ್ದ ಸರಕಾರಿ ಉದ್ಯೋಗದ ಭರವಸೆ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿದೆ.
ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ದೀಪಕ್ ರಾವ್ ಹತ್ಯೆ ಪ್ರಕರಣವು ದೇಶ ಮಟ್ಟದಲ್ಲಿ ಭಾರೀ ಚರ್ಚೆಯಾಗಿ, ಅವರ ತಾಯಿ ಪ್ರೇಮಲತಾ ಹಾಗೂ ಸಹೋದರನ ಬಗ್ಗೆ ಸಾಕಷ್ಟು ಅನುಕಂಪ ವ್ಯಕ್ತವಾಗಿತ್ತು. ದೀಪಕ್ ಕುಟುಂಬಕ್ಕೆ ಆರ್ಥಿಕ ನೆರವು ಕಲ್ಪಿಸುವ ಉದ್ದೇಶದಿಂದ ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಅವರ ತಾಯಿಯ ಬ್ಯಾಂಕ್ ಖಾತೆ ನಂಬರ್ ಹಾಗೂ ವಿನಂತಿಯನ್ನು ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸಿದ್ದರು. ಇದಾದ ಕೇವಲ ಎರಡು ವಾರಗಳೊಳಗೆ ದೀಪಕ್ ತಾಯಿಯ ಖಾತೆಗೆ 40 ಲಕ್ಷ ರೂ. ಆರ್ಥಿಕ ನೆರವು ಬಂದಿತ್ತು. ಹಲವು ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಸಹೃದಯೀ ಜನರಿಂದ ದೀಪಕ್ ತಾಯಿ ಪ್ರೇಮಲತಾ ಅವರ ಖಾತೆಗೆ ಇಲ್ಲಿಯವರೆಗೆ ಜಮೆಯಾಗಿರುವ ಒಟ್ಟು ಸಹಾಯ ಹಸ್ತದ ಮೊತ್ತ 80 ಲಕ್ಷ ರೂ. ದಾಟಿದೆ. ಆ ಪೈಕಿ ಸುಮಾರು 52 ಲಕ್ಷ ರೂ. ಸಾರ್ವಜನಿಕರಿಂದಲೇ ಬಂದಿದೆ ಎಂದು ದೀಪಕ್ ಸಂಬಂಧಿಕರು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಕಾಟಿಪಳ್ಳ ಮೂರನೇ ಬ್ಲಾಕ್ ಜನತಾ ಕಾಲನಿ ಬಳಿಯ ಗಣೇಶ್ ಕಟ್ಟೆ ನಿವಾಸಿ ದಿ| ರಾಮಚಂದ್ರ ರಾವ್ ಹಾಗೂ ಪ್ರೇಮಲತಾ ದಂಪತಿಯ ಪುತ್ರ ದೀಪಕ್ ಅವರು ತನ್ನ ಸ್ವಂತ ಶ್ರಮದಿಂದಲೇ ಬದುಕು ಕಟ್ಟಿಕೊಂಡವರು. ತಂದೆಯನ್ನು ಕಳೆದು ಕೊಂಡಿದ್ದ ದೀಪಕ್ ರಾವ್, ಕಾಟಿಪಳ್ಳದ ಅಬ್ದುಲ್ ಮಜೀದ್ ಎಂಬವರ ಮೊಬೈಲ್ ಕರೆನ್ಸಿ, ಸಿಮ್ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ಆಧಾರಸ್ತಂಭವಾಗಿದ್ದ ದೀಪಕ್ ಅವರನ್ನು ಕಳೆದುಕೊಂಡ ಮನೆಗೆ ದೇಶದ ಮೂಲೆ ಮೂಲೆಯಿಂದ ಜನರು ಸಹಾಯ ಮಾಡಿದ್ದಾರೆ.
ದೀಪಕ್ ಹತ್ಯೆಗೆ ಮರುಗಿ ಅವರ ತಾಯಿಯ ಖಾತೆಗೆ ಸಾರ್ವಜನಿಕರು ತಮ್ಮ ಕೈಲಾದಷ್ಟು ಹಣ ನೀಡಿದರೆ, ಸರಕಾರ, ಸ್ಥಳೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳು ಕೂಡ ನೆರವಿಗೆ ಬಂದಿದ್ದವು. ಈಗಾಗಲೇ ಮನೆ ಕಟ್ಟಲು ಮಾಡಿದ್ದ ಸಾಲವನ್ನು ತೀರಿಸಲಾಗಿದೆ. ಸಹೋದರ ಸತೀಶ್ ಅಂಗವಿಕಲರಾಗಿದ್ದು, ಸೂಕ್ತ ಚಿಕಿತ್ಸೆ ನೀಡುವ ಯೋಚನೆಯಲ್ಲಿದ್ದಾರೆ. ಈ ಬಗ್ಗೆ ದೀಪಕ್ ಸಂಬಂಧಿಯೊಬ್ಬರನ್ನು ಸಂಪರ್ಕಿಸಿದಾಗ, ದೀಪಕ್ ಹತ್ಯೆ ಬಳಿಕ ಮನೆಗೆ ಆಗಮಿಸಿದ್ದ ಹಲವು ಮುಖಂಡರು ಸತೀಶ್‌ಗೆ ಉದ್ಯೋಗದ ಭರವಸೆ ನೀಡಿದ್ದರು. ಆದರೆ ಈವರೆಗೆ ಅವರಿಗೆ ಉದ್ಯೋಗ ಸಿಕ್ಕಿಲ್ಲ. ಸಂಬಂಧಿತರನ್ನು ಕೇಳಿದರೆ ಪರಿಶೀಲನೆಯಲ್ಲಿದೆ ಎಂದು ತಿಳಿಸುತ್ತಾರೆ ಎಂದು ಹೇಳಿದ್ದಾರೆ.
ಉದ್ಯೋಗ ಆಹ್ವಾನ ನೀಡಿದ್ದೇವೆ
ದೀಪಕ್ ಹತ್ಯೆಯ ಬಳಿಕ ಅವರ ಸಹೋದರನಿಗೆ ಸರಕಾರ ನೀಡಿದ ಭರವಸೆಯಂತೆ ಉದ್ಯೋಗಕ್ಕೆ ಜಿಲ್ಲಾಡಳಿತದ ಕಡೆಯಿಂದ ಆಹ್ವಾನ ನೀಡಿದ್ದೇವೆ. ಪಿಲಿಕುಳದಲ್ಲಿ ದೀಪಕ್ ತಮ್ಮನಿಗೆ ನೀಡುವುದಕ್ಕೆ ಉದ್ಯೋಗಾವಕಾಶ ಇದೆ. ಆದರೆ ಕುಟುಂಬದವರು ನಮ್ಮ ಆಹ್ವಾನಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ.’
-ಶಶಿಕಾಂತ್ ಸೆಂಥಿಲ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
— ಪ್ರಜ್ಞಾ ಶೆಟ್ಟಿ