ಮಂಗಳೂರು/ಬೆಂಗಳೂರು: ದೀಪಕ್ ರಾವ್ ಹತ್ಯೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಉಡುಪಿ,ಪುತ್ತೂರು, ಮಂಗಳೂರು, ಮಡಿಕೇರಿಯ ಜಿಲ್ಲಾ ಕೇಂದ್ರಗಳಲ್ಲಿ ಶುಕ್ರವಾರ ರಾಸ್ತಾ ರೋಕೋ ನಡೆಸಲಾಯಿತು. ಅಲ್ಲದೆ, ಮೈಸೂರು, ಮಂಡ್ಯ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದವು. ಈ ನಡುವೆ, ರಾಜ್ಯಾದ್ಯಂತ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆ ಖಂಡಿಸಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ವಿರೋಧಿಸಿ ಬಿಜೆಪಿ ಜ.8ರಂದು ಬೆಂಗಳೂರಿನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಘಟನೆ ಹಿನ್ನೆಲೆಯಲ್ಲಿ ದೀಪಕ್ ರಾವ್ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಇದೇ ವೇಳೆ, ದೀಪಕ್‌ರಾವ್ ನಿವಾಸಕ್ಕೆ ಶಾಸಕ ಮೊದಿನ್ ಬಾವಾ ಶುಕ್ರವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 5 ಲಕ್ಷ ರೂ. ಪರಿಹಾರ ನೀಡಲು ಮುಂದಾದರು. ಆದರೆ, ಅವರ ನೆರವನ್ನು ಕುಟುಂಬ ಸದಸ್ಯರು ನಿರಾಕರಿಸಿದರು. ಶವಾಗಾರದಿಂದ ದೀಪಕ್ ಪಾರ್ಥಿವ ಶರೀರವನ್ನು ಪೊಲೀಸರು ರಹಸ್ಯವಾಗಿ ಮನೆಗೆ ತಲುಪಿಸಿದ ವಿಚಾರದಲ್ಲೂ ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಬಳಿಕ, ಸಂಸದ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಪಕ್ಷದ ವತಿಯಿಂದ 5 ಲಕ್ಷ ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸಹಕಾರದಿಂದ 5 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು ಎಂದರು.
ಉಡುಪಿ, ಮಂಗಳೂರು, ಮಡಿಕೇರಿಯಲ್ಲಿ ಪ್ರತಿಭಟನೆ: ದೀಪಕ್ ಕೊಲೆ ಖಂಡಿಸಿ ಹಾಗೂ ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ವಿಹಿಂಪ ಹಾಗೂ ಬಜರಂಗದಳದ ನೇತೃತ್ವದಲ್ಲಿ ಮಂಗಳೂರು, ಉಡುಪಿ, ಸುರತ್ಕಲ್, ಮಡಿಕೇರಿಗಳಲ್ಲಿ ಶುಕ್ರವಾರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಮಂಗಳೂರಿನ ಬೆಸೆಂಟ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದರು.
ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಬಿಜೆಪಿಯಿಂದ 8ರಂದು ಧರಣಿ ರಾಜ್ಯಾದ್ಯಂತ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆ ಖಂಡಿಸಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ವಿರೋಧಿಸಿ ಬಿಜೆಪಿ ಜ.8 ರಂದು ಬೆಂಗಳೂರಿನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆಯುವ ಧರಣಿಯಲ್ಲಿ ಪಕ್ಷದ ಪ್ರಮುಖರು, ಶಾಸಕರು, ಬಿಬಿಎಂಪಿ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ.
8ರಂದು ದೀಪಕ್
ನಿವಾಸಕ್ಕೆ ಬಿಎಸ್‌ವೈ ಭೇಟಿ
ದೀಪಕ್ ರಾವ್ ನಿವಾಸಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಜ.8ರಂದು ಭೇಟಿ ನೀಡಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಧರಣಿಯಲ್ಲಿ ಪಾಲ್ಗೊಂಡ ನಂತರ ಮಂಗಳೂರಿಗೆ ಭೇಟಿ ನೀಡಲಿರುವ ಬಿಎಸ್‌ವೈ ಅಲ್ಲಿಂದ ಕಾಟಿಪಳ್ಳಕ್ಕೆ ತೆರಳಿ ದೀಪಕ್ ರಾವ್ ತಾಯಿಗೆ ಸಾಂತ್ವನ ಹೇಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದ್ದಾರೆ.