Advertisement

ದೀಪಕ್‌ ರಾವ್‌ ಕೊಲೆಗೆ ಬಿಜೆಪಿ ಕಾರ್ಪೋರೇಟರ್‌ ಕಾರಣ: ಎಚ್‌ಡಿಕೆ ಆರೋಪ

06:45 AM Jan 09, 2018 | Team Udayavani |

ಮೈಸೂರು: ಮಂಗಳೂರಿನಲ್ಲಿ ನಡೆದ ದೀಪಕ್‌ ರಾವ್‌ ಕೊಲೆ ಪ್ರಕರಣದಲ್ಲಿ ಬಿಜೆಪಿಯ ಕಾರ್ಪೋರೇಟರ್‌ ಭಾಗಿ ಯಾಗಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಕ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ
ನಾಲ್ವರನ್ನು ಬಂಧಿಸಲಾಗಿದೆ. ದೀಪಕ್‌ ಕೊಲೆಗೆ ಬಿಜೆಪಿ ನಾಯಕರೇ ಕಾರಣರೆಂಬ ಮಾಹಿತಿ ತಮಗಿದೆ. ಆದರೆ, ಕೊಲೆಗೆ ಕಾರಣರ್ಯಾರು? ಪ್ರೇರೇಪಿಸಿದವರು ಯಾರು? ಎಂಬ ಮಾಹಿತಿಯನ್ನು ಸರ್ಕಾರ ಏಕೆ ಬಹಿರಂಗಪಡಿಸುತ್ತಿಲ್ಲ? ಯಾರನ್ನು ರಕ್ಷಣೆ ಮಾಡಲು ಹೊರಟಿದೆ ಈ ಸರ್ಕಾರ? ಈ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯವರು ಒಪ್ಪಂದ ಮಾಡಿಕೊಂಡಿದ್ದಾರಾ ಎಂದು ಕಿಡಿಕಾರಿದ ಕುಮಾರ ಸ್ವಾಮಿ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ ಕೊಲೆ ಸೇರಿ ಎಲ್ಲ ಪ್ರಕರಣಗಳಲ್ಲಿ ಸರ್ಕಾರದ ವೈಫ‌ಲ್ಯತೆ ಎದ್ದು ಕಾಣುತ್ತಿದೆ. ಹಂತಕರ ಸುಳಿವು ಸಿಕ್ಕಿದೆ, ಶೀಘ್ರವೇ ಬಂಧಿಸುತ್ತೇವೆಂದು ಎಷ್ಟು ಬಾರಿ ಹೇಳುತ್ತೀರಿ ಎಂದು ಪ್ರಶ್ನಿಸಿದರು.

ತುಪ್ಪ ಸುರಿಯಲ್ಲ: ವಾತಾವರಣ ತಿಳಿಗೊಂಡು ಶಾಂತಿ ನೆಲೆಗೊಳ್ಳಲಿ ಎಂದು ಮಂಗಳವಾರ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಸಭೆಯನ್ನು ಮುಂದೂಡಿದ್ದೇವೆ. ಬೆಂದ ಮನೆಯಲ್ಲಿ ಗಳ ಹಿರಿಯುವ, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುವುದಿಲ್ಲ. ಜೆಡಿಎಸ್‌ ಪಕ್ಷ ಹಿಂದೂಗಳ ಪರ, ಮುಸ್ಲಿಮರ ಪರ ಅಂತಲ್ಲ. ನಾವು ರಾಜ್ಯದ ಆರೂವರೆ ಕೋಟಿ ಜನರ ಪರ. ಚುನಾವಣೆಗಾಗಿ ನಾವು ಜಾತಿ, ಧರ್ಮವನ್ನು ಒಡೆಯುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next