ಬನಹಟ್ಟಿ : ಇತ್ತೀಚಿಗೆ ಕಳೆದ ಸೋಮವಾರ ರಸ್ತೆ ಅಪಘಾತದಲ್ಲಿ ತಮ್ಮ ನಾಲ್ಕುವರೆ ವರ್ಷದ ಪುಟ್ಟ ಮಗಳು ಸುಖಿಯನ್ನು ಕಳೆದುಕೊಂಡ ಕುಟುಂಬ ಆಕೆ ಹಾಗೂ ಆಕೆಯ ಸಹೋದರ ಸಂಕಲ್ಪ ಕೂಡಿಟ್ಟಿದ್ದ ಹಣದ ಹುಂಡಿಗಳನ್ನು ಶ್ರೀರಾಮ ಮಂದಿರ ನಿಧಿಗೆ ಅರ್ಪಿಸಿದ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ನಡೆದಿದೆ.
ತಾಲೂಕಿನ ಸಮೀಪದ ಸೈದಾಪೂರನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಗಳು ಸಖಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬ ತನ್ನ ಮಕ್ಕಳು ಸಂಗ್ರಹಿಸಿದ್ದ ಹುಂಡಿಗಳನ್ನು ರಾಮ ಜನ್ಮ ಭೂಮಿ ಟ್ರಸ್ಟ್ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ತಲುಪಲಿ ಎಂದು ಅವರ ತಂದೆ ಶ್ರೀಶೈಲ ಆದರಗಿ ಹಾಗೂ ತಾಯಿ ಶಾಂತಾ ಆದರಗಿ ಸ್ಥಳೀಯ ಕಾರ್ಯಕರ್ತರ ಮುಖಾಂತರ ನೀಡಿದ್ದಾರೆ. ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬ ಈ ರೀತಿ ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡಿ ರಾಮ ಭಕ್ತಿ ಮೆರೆದಿದ್ದಾರೆ. ಈ ರೀತಿಯಾದರೂ ನಮ್ಮ ಮಗಳ ನೆನಪು ಸದಾ ನೆನಪಿನಲ್ಲಿರಲಿ ಎಂದು ಕುಟುಂಬದವರು ನಿಧಿ ಸಮರ್ಪನೆ ಮಾಡಿದ್ದಾರೆ.
ಇದನ್ನೂ ಓದಿ:ಸವದತ್ತಿ ಬಳಿ KSRTC ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು
ಈ ಸಂದರ್ಭದಲ್ಲಿ ಸ್ವಯಂ ಸೇವಕರಾದ ಈರಣ್ಣ ಬಾಣಕಾರ ಮಾತನಾಡಿ, ಇಂತಹ ದುಃಖದ ಸನ್ನಿವೇಷದಲ್ಲಿಯೂ ರಾಮಭಕ್ತಿ ತೋರಿದ ಆದರಗಿ ಕುಟುಂಬಕ್ಕೆ ಶ್ರೀರಾಮನ ಆಶೀರ್ವಾದ ಸದಾ ಇರಲಿ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ, ಶಂಕರ ಅಂಗಡಿ, ಶ್ರೀಶೈಲ ಮಠಪತಿ, ಪ್ರವೀಣ ಗಿಡದಾನಪ್ಪಗೋಳ, ಚಂದ್ರಶೇಖರ ಗೊಂಬಿ, ಜಗದೀಶ ಕೊಕಟನೂರ ಹಾಗೂ ಆದರಗಿ ಕುಟುಂಬದವರು ಇದ್ದರು.