ರಾಮನಗರ: ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸಲಿದ್ದೇವೆ ಎಂದು ಕೆಎಸ್‌ಐಸಿ ಅಧ್ಯಕ್ಷ ಗೌತಮ್‌ಗೌಡ ತಿಳಿಸಿದರು.
ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲಿ ಬೆಳ್ಳಿ ಇಟ್ಟಿಗೆಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ಪವಿತ್ರ ಸ್ಥಳಗಳಾದ ಶ್ರೀರಾಮದೇವರ ಬೆಟ್ಟ, ಕೆಂಗಲ್ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಈ ಬೆಳ್ಳಿ ಇಟ್ಟಿಗೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರ ಕಾರ್ಯಕ್ಕೆ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಜನರ ಕಾಣಿಕೆಯೂ ಸೇರಿದೆ: ಶ್ರೀರಾಮ, ಲಕ್ಮಣ ಮತ್ತು ಸೀತೆ ಅರ್ಕಾವತಿ ನದಿಯ ದಂಡೆಯಲ್ಲಿ ನೆಲೆಸಿದ್ದು, ಧಾರ್ಮಿಕ ಸ್ಥಳವಾಗಿ ಮಾರ್ಪಟ್ಟಿದೆ. ಹೀಗಾಗಿ ಈ ಪುಣ್ಯ ಸ್ಥಳದಿಂದಲೇ ಬೆಳ್ಳಿ ಇಟ್ಟಿಗೆಗೆ ಪೂಜೆ ಪ್ರಾರಂಭಿಸಿದ್ದೇವೆ. ದೇವಾಲಯ ನಿರ್ಮಾಣಕ್ಕೆ ಜಿಲ್ಲಾ ಬಿಜೆಪಿ ಮತ್ತು ಸಾರ್ವಜನಿಕವಾಗಿ ನಾಲ್ಕು ತಾಲೂಕುಗಳ ಸಾರ್ವಜನಿಕರಿಂದ ಸೇರಿ ತಂದಿರುವ ಕಾಣಿಕೆ ಇದಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ತು ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು, ರಾಮನಗರದಿಂದ ಭಕ್ತರ ಪರವಾಗಿ ದೇಗುಲಗಳಲ್ಲಿ ಸಾಂಕೇತಿಕವಾಗಿ ಪೂಜೆ ಸಲ್ಲಿಸಿ, ಈ ಬೆಳ್ಳಿ ಇಟ್ಟಿಗೆಯನ್ನು ಸಮರ್ಪಿಸಲಾಗುತ್ತಿದೆ. ಇದೊಂದು ಭಾವನಾತ್ಮಕವಾದ ವಿಚಾರವಾಗಿದ್ದು, ಆದಷ್ಟು ಬೇಗ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿದು, ಭಕ್ತರಿಗೆ ಶ್ರೀರಾಮರ ದರ್ಶನವಾಗಲಿ ಎಂದು ಆಶಿಸಿದರು.
ಮಂದಿರ ಬಿಜೆಪಿಯ ಬದ್ಧತೆ: ರಾಮ ರಾಜ್ಯ ಹಾಗೂ ಮಂದಿರ ನಿರ್ಮಾಣ ಬಿಜೆಪಿಯ ಬದ್ಧತೆಯಾಗಿದ್ದು, ಈ ಎರಡನ್ನೂ ಸಾಕಾರ ಮಾಡುವ ದಿಕ್ಕಿನಲ್ಲಿ ಈಗಾಗಲೇ ಹೆಜ್ಜೆ ಇಡಲಾಗಿದೆ. ಈ ನಿಟ್ಟಿನಲ್ಲಿ ಜನತೆ ಬಿಜೆಪಿಯ ಬದ್ಧತೆ, ನುಡಿದಂತೆ ನಡೆಯುವ ಬಗ್ಗೆ ಅರಿತಿದ್ದಾರೆ ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ರಾಜ್ಯ, ತಾಲೂಕಿನಲ್ಲಿ ಮತ್ತೆ ಕಮಲ ಅರಳಿಸಲು ಜನರು ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
ಕೆಎಸ್‌ಐಸಿ ಅಧ್ಯಕ್ಷ ಗೌತಮ್ ಮರಿಲಿಂಗೇಗೌಡ ಮಾತನಾಡಿದರು. ಬಿಜೆಪಿ ಮುಖಂಡರಾದ ರವೀಶ್, ನಗರಸಭೆ ಮಾಜಿ ಸದಸ್ಯ ನಾಗೇಶ್, ಮಂಜು, ಗೋಪಾಲ್, ಲಿಂಗೇಶ್‌ಕುಮಾರ್, ಕುಳ್ಳಪ್ಪ, ಜಯರಾಮು, ರಾಜೇಶ್ ಸೇರಿದಂತೆ ಜಿಲ್ಲೆಯ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು.