Advertisement

ಹಿರಿಯ ಪತ್ರಕರ್ತೆಯರಿಗೆ ಗೌರವ ಸಮರ್ಪಣೆ

01:18 AM Jul 07, 2019 | Lakshmi GovindaRaj |

ಬೆಂಗಳೂರು: “ನಾನು ಪತ್ರಿಕೋದ್ಯಮಕ್ಕೆ ಬಂದ ಸಮಯದಲ್ಲಿ ಪುರುಷರು ಅಧಿಕ ಸಂಖ್ಯೆಯಲ್ಲಿದ್ದರು. ಆದರೂ ಹಲವರು ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಹೀಗಾಗಿ ಪತ್ರಿಕೋದ್ಯಮದ ಹಲವು ಮಜಲುಗಳನ್ನು ಅರಿಯಲು ಸಹಕಾರಿಯಾಯಿತು. ಈಗಲೂ ಕೂಡ ಆ ದಿನಗಳನ್ನು ನೆನಪಿಸಿಕೊಂಡರೆ ಹಿತಕೊಡುತ್ತದೆ’ ಎಂದು ಹಿರಿಯ ಪತ್ರಕರ್ತೆ ಸೀತಾದೇವಿ ಹೇಳಿದರು.

Advertisement

ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಜತೆಗೂಡಿ, ಶನಿವಾರ ಎನ್‌ಜಿಒ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತೆಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಪತ್ರಿಕೋದ್ಯಮದಲ್ಲಿ ತಾವು ಸಾಗಿಬಂದ ಹಾದಿ ಮೆಲಕು ಹಾಕಿದರು.

“ಈ ಕ್ಷೇತ್ರದಲ್ಲಿ ಏನೋ ಸಾಧಿಸಬೇಕು ಎಂಬ ಕನಸು ನನಗಿರಲಿಲ್ಲ. ಆಕಸ್ಮಿಕವಾಗಿ ಪತ್ರಿಕೋದ್ಯಮ ಪ್ರವೇಶಿಸಿದೆ. ಸಂಪಾದಕರು, ಹಿರಿಯ ಸಹೋದ್ಯೋಗಿಗಳು ನನ್ನ ಮೇಲೆ ನಂಬಿಕೆ ಇಟ್ಟು ನೀಡುತ್ತಿದ್ದ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದೆ. ಹೀಗಾಗಿ ಹಲವರು ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅದರಲ್ಲೂ ಕಿರಿಯರಿಗೆ ಪತ್ರಿಕೋದ್ಯಮದ ಪಾಠ ಹೇಳಲು ಅವಕಾಶ ದೊರೆತಿದ್ದು ಖುಷಿ ಕೊಟ್ಟಿದೆ’ ಎಂದರು.

ಅನುಭವ ಕಥನ ದಾಖಲು: ಪತ್ರಕರ್ತೆ ಡಾ.ಪೂರ್ಣಿಮಾ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರಾé ನಂತರದಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಮಹಿಳೆಯರು ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಈ ವೇಳೆ ಅವರು ಹಲವು ಅನುಪಮ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅದು ಮುಂದಿನ ಪೀಳಿಗೆಗೂ ತಿಳಿಯಲಿ ಎಂಬ ಉದ್ದೇಶದಿಂದ ಕರ್ನಾಟಕ ಪತ್ರಕರ್ತೆಯರ ಸಂಘದ ವತಿಯಿಂದ ಹಿರಿಯ ಪತ್ರಕರ್ತೆಯರ ಪತ್ರಿಕೋದ್ಯಮದ ಅನುಭವದ ಕಥನಗಳನ್ನು ದಾಖಲಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು.

ಸುದ್ದಿ ಮನೆಗಳಲ್ಲಿ ಮಹಿಳೆಯರಿಗೆ ಅವಕಾಶವೇ ಇಲ್ಲದ ಸಂದರ್ಭದಲ್ಲೂ ನಮ್ಮ ಹಲವಾರು ಹೊಇರಿಯ ಪತ್ರಕರ್ತೆಯರು ಕೆಲಸ ಗಿಟ್ಟಿಸಿಕೊಂಡು, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಸಂತಸ ಪಡುವ ವಿಚಾರವಾಗಿದೆ ಎಂದು ನುಡಿದರು.

Advertisement

ಪತ್ರಕರ್ತೆ ಕೆ.ಎಚ್‌.ಸಾವಿತ್ರಿ, ವಿಧಾನ ಮಂಡಲದ ಅಧಿವೇಶನದ ಕಾರ್ಯ ಕಲಾಪಗಳ ಬಗ್ಗೆ ವರದಿ ಮಾಡಿರುವುದು, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮಹಿಳಾ ಪುರವಣಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದು ಜೀವನದಲ್ಲಿ ಸದಾ ನೆನಪಲ್ಲಿ ಉಳಿಯುವ ಕ್ಷಣಗಳಾಗಿವೆ ಎಂದು ಸ್ಮರಿಸಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ (ಎನ್‌ಆರ್‌ಎಲ್‌ಎಂ) ನಿರ್ದೇಶಕಿ ಡಾ.ಬಿ.ಆರ್‌.ಮಮತಾ ಮಾತನಾಡಿ, ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯು “ಸಂಜೀವಿನಿ ಯೋಜನೆ’ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದು, ಸ್ತ್ರೀಯರನ್ನು ಸ್ವಾವಲಂಬಿಗಳಾಗಿ ರೂಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತೆ ಕುಶಲ ಡಿಮೆಲ್ಲೊ, ಸುಶೀಲಾ ಸುಬ್ರಮಣ್ಯ, ನಾಗಮಣಿ ಎಸ್‌. ರಾವ್‌, ಡಾ.ವಿಜಯಮ್ಮ, ಲೀಲಾವತಿ ಹಾಸನ ಸೇರಿ ಹಲವರನ್ನು ಸತ್ಕರಿಸಲಾಯಿತು. ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ, ಪ್ರಧಾನ ಕಾರ್ಯದರ್ಶಿ ಮಾಲತಿ ಭಟ್‌, ಕಾರ್ಯದರ್ಶಿ ಭಾರತಿ ಹೆಗಡೆ ಇದ್ದರು.

ಸಾಮಾಜಿ ಕಳಕಳಿಯ ಮಿಡಿತವಿರಬೇಕು: ಹಳೆಯ ತಲೆಮಾರಿನ ಪತ್ರಿಕೋದ್ಯಮದಲ್ಲಿದ್ದ ಸಾಮಾಜಿಕ ಕಳಕಳಿ ಬಗೆಗಿನ ಮಿಡಿತ, ಹೊಸ ತಲೆಮಾರಿನ ಪತ್ರಿಕೋದ್ಯಮದಲ್ಲಿ ಕಣ್ಮರೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಹೊಸ, ಹೊಸ ಸವಾಲುಗಳನ್ನು ಮತ್ತು ಜವಾಬ್ದಾರಿಗಳನ್ನು ಸ್ವೀಕರಿಸುವ ಜತೆಗೆ ಹಳೇ ತಲೆಮಾರಿನ ಪತ್ರಿಕೋದ್ಯಮದಲ್ಲಿದ್ದ ಸಾಮಾಜಿಕ ಕಳಕಳಿ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಕಿರಿಯ ಪತ್ರಕರ್ತರಲ್ಲಿ ಹಿರಿಯ ಪತ್ರಕರ್ತ ಈಶ್ವರ ದೈತೋಟ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next