ಕಲಘಟಗಿ: ಸೂಳಿಕಟ್ಟಿಯಲ್ಲಿ ಕೆರೆ ಹಾಗೂ ಸ್ಮಶಾನಕ್ಕೆ ಮೀಸಲಿಟ್ಟ ಜಾಗ ಒತ್ತುವರಿ ತೆರವು ಕಾರ್ಯಕ್ಕೆ ಅಂತೂ ತಾಲೂಕಾಡಳಿತ ಮುಂದಾಗಿದೆ. ತಹಶೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರು ಪೊಲೀಸ್ ಇಲಾಖೆ ಹಾಗೂ ಗ್ರಾಪಂ ಸಹಕಾರದೊಂದಿಗೆ ಶುಕ್ರವಾರ ಸ್ಥಳಕ್ಕೆ ತೆರಳಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು. ಭಾಗಶಃ ಜಾಗ ತೆರವುಗೊಳಿಸಿದ್ದು, ಒತ್ತುವರಿ ಮಾಡಿ ಬೆಳೆಗಳನ್ನು ಬೆಳೆದ ಜಾಗ ತೆರವಿಗೆ ಕಾಲಮಿತಿ ವಿಧಿಸಿದರು.
ಎಲ್ಲೆಲ್ಲಿ ಅತಿಕ್ರಮಣವಾಗಿತ್ತು?: ಹಿಂದೂ ಮತ್ತು ಮುಸ್ಲಿಂ ಸಮಾಜದವರ ಬೇಡಿಕೆ ಮೇರೆಗೆ 2005ರಲ್ಲಿ ಸರ್ವೇ ನಂ. 43 ಪಿ1ರಲ್ಲಿನ 3 ಎಕರೆ 14 ಗುಂಟೆ ಜಮೀನನ್ನು ಸ್ಮಶಾನಗಟ್ಟೆಯ ಸ್ಥಳವೆಂದು ಗುರುತಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಸರ್ವೇ ನಂ. 15ರಲ್ಲಿ 5 ಎಕರೆ 11 ಗುಂಟೆ ವಿಸ್ತೀರ್ಣದ ಕೆರೆ, ಸರ್ವೇ ನಂ. 45ರಲ್ಲಿ 2 ಎಕರೆ 37 ಗುಂಟೆ ವಿಸ್ತೀರ್ಣದ ಕೆರೆ, ಸರ್ವೇ ನಂ. 28ರಲ್ಲಿ 32 ಗುಂಟೆ ವಿಸ್ತೀರ್ಣದ ಕೆರೆಗಳಿವೆ. ಅವೆಲ್ಲವೂ ಪಟ್ಟಭದ್ರ ಹಿತಾಸಕ್ತಿಗಳಿಂದ ಒತ್ತುವರಿಗೊಂಡಿವೆ. ಒತ್ತುವರಿ ತೆರವಿಗೆ ದಶಕದಿಂದ ಗ್ರಾಮಸ್ಥರು ಆಗ್ರಹಿಸುತ್ತಲೇ ಬಂದಿದ್ದರು.
ಕೆಲಹೊತ್ತು ಉದ್ರಿಕ್ತ ಸ್ಥಿತಿ: ಒತ್ತುವರಿ ತೆರವುಗೊಳಿಸಲು ತಹಶೀಲ್ದಾರ್ ಜೆ.ಬಿ. ಜಕ್ಕನಗೌಡ್ರ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ಗ್ರಾಪಂ ಸಿಬ್ಬಂದಿ ವರ್ಗದ ತಂಡ ತೆರಳಿದ್ದು, ಹೆಚ್ಚಿನ ಬೆಳೆ ಇಲ್ಲದ ಸರ್ವೇ ನಂ. 28ರ 32 ಗುಂಟೆ ವಿಸ್ತೀರ್ಣದ ಕೆರೆಯ ಜಮೀನನ್ನು ಸಂಪೂರ್ಣ ತೆರವುಗೊಳಿಸಿದ್ದಾರೆ. ಉಳಿದ ಒತ್ತುವರಿ ತೆರವುಗೊಳಿಸಲು ತಂಡ ಮೀನಾಮೇಷ ಎಣಿಸುತ್ತಿದ್ದಂತೆ ಗ್ರಾಮಸ್ಥರು ಆಕ್ರೋಶಗೊಂಡರು. ಪರಿಣಾಮ ಕೆಲ ಸಮಯ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಸಿಪಿಐ ವಿಜಯ ಬಿರಾದಾರ ಹೆಚ್ಚಿನ ಪೊಲೀಸರೊಂದಿಗೆ ಗ್ರಾಮಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಸಫಲರಾದರು.
ಮಾನವೀಯತೆ ದೃಷ್ಟಿ-ಕಾಲಮಿತಿ: ಸರ್ವೇ ನಂ. 43 ಪಿ1 ರಲ್ಲಿನ 3 ಎಕರೆ 14 ಗುಂಟೆ ವಿಸ್ತೀರ್ಣದ ಸ್ಮಶಾನಗಟ್ಟೆ ಜಾಗ, ಸರ್ವೇ ನಂ. 15ರ 5 ಎಕರೆ 11 ಗುಂಟೆ ಮತ್ತು ಸರ್ವೇ ನಂ. 45ರ 2 ಎಕರೆ 37 ಗುಂಟೆ ವಿಸ್ತೀರ್ಣದ ಕೆರೆಯ ಜಮೀನಿನ ಪ್ರದೇಶದಲ್ಲಿ ಬಿತ್ತಿದ ಭತ್ತ, ಗೋವಿನಜೋಳ ಹಾಗೂ ಕಬ್ಬು ಉತ್ತಮವಾಗಿ ಬೆಳೆದಿದೆ. ಕೆಲವೇ ತಿಂಗಳಿನಲ್ಲಿ ಬಂಪರ್ ಫಸಲು ಬರಬಹುದು. ಆದ್ದರಿಂದ ಮಾನವೀಯತೆ ಮೆರೆದು ತೆರವುಗೊಳಿಸಲು ಸಮಯಾವಕಾಶ ನೀಡೋಣ ಎಂದು ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸುವಲ್ಲಿ ಸಫಲರಾದರು.
ಒತ್ತುವರಿದಾರರೆಲ್ಲರೂ ಇನ್ನು ಮುಂದೆ ತಾವು ಸರ್ಕಾರಿ ಜಮೀನು ಒತ್ತುವರಿ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಪತ್ರ ಬರೆದುಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ತಹಶೀಲ್ದಾರ್ ಜಕ್ಕನಗೌಡ್ರ ಮತ್ತು ಸಿಪಿಐ ವಿಜಯ ಬಿರಾದಾರ ಮುಚ್ಚಳಿಕೆ ಬರೆಯಿಸಿಕೊಳ್ಳುವುದಾಗಿಯೂ ಮತ್ತು ಮುಂಬರುವ ದಿನಗಳಲ್ಲಿ ತೆರವುಗೊಳಿಸುವುದಾಗಿಯೂ ಭರವಸೆ ನೀಡಿದರು. ಬೆಳೆ ಕಟಾವ್ ಆದ ನಂತರ ಒತ್ತುವರಿದಾರರೇ ಸ್ವಯಂಸ್ಫೂರ್ತಿಯಿಂದ ತೆರವುಗೊಳಿಸುವುದಾಗಿ ತಿಳಿಸಿದ್ದಾರೆಂದು ತಿಳಿದುಬಂದಿದೆ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಪಿಡಿಒ ಮತ್ತು ಕಂದಾಯ, ಪೊಲೀಸ್ ಹಾಗೂ ಗ್ರಾಪಂ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.